ಟೆಸ್ಟ್ ಮಾಡಿಸದಿದ್ದರೂ ಸಂದೇಶ; ಅನುಮಾನಾಸ್ಪದ ಬೆಳವಣಿಗೆ, ಲಸಿಕೆ ಪಡೆದಿದ್ದರೂ ಮತ್ತೆ ಪಡೆದ ಬಗ್ಗೆ ಮೆಸೇಜ್..

Corona Test
Published on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ, ಲಸಿಕೆ ವಿತರಣೆಯೂ ಸಮಾಧಾನಕರವಾಗಿ ನಡೆದಿದೆ. ಆದರೆ, ಇತ್ತೀಚೆಗೆ ಕೋವಿಡ್ ಟೆಸ್ಟ್ ಮಾಡುವುದು ಮತ್ತು ಲಸಿಕೆ ವಿತರಣೆಯಲ್ಲಿ ಸರ್ಕಾರ ಶಿಸ್ತುಬದ್ಧವಾಗಿ ನಿಯಮ ಪಾಲನೆ ಮಾಡದಿರುವುದು ಕಂಡುಬಂದಿದೆ. ಕೋವಿಡ್ ಟೆಸ್ಟ್ ಮಾಡಿಸದಿದ್ದರೂ ಇಡೀ ಕುಟುಂಬ ಸದಸ್ಯರು ಕೋವಿಡ್ ಟೆಸ್ಟ್ ಮಾಡಿಸಿರುವ ಮತ್ತು ಟೆಸ್ಟ್ ಫಲಿತಾಂಶದ ಎಸ್​ಎಂಎಸ್​ಗಳು ಬರಲಾರಂಭಿಸಿದ್ದು, ಇದು ಜನಸಾಮಾನ್ಯರನ್ನು ಗಾಬರಿ ಬೀಳಿಸಿದೆ.

ವಿಜಯವಾಣಿ ಸಹಾಯವಾಣಿಯನ್ನು ಸಂಪರ್ಕಿಸಿದ ಬ್ಯಾಂಕ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಕುಟುಂಬದ ನಾಲ್ವರು ಸದಸ್ಯರೂ ಕೋವಿಡ್ ಲಸಿಕೆ ಹಾಕಿಕೊಂಡಿದ್ದೇವೆ. ಅಕ್ಟೋಬರ್​ನಲ್ಲಿ ಯಾವುದೇ ಟೆಸ್ಟ್ ಮಾಡಿಸದಿದ್ದರೂ ಎಸ್​ಎಂಎಸ್ ಬಂದಿದೆ. ಬಳಿಕ ನಿಮ್ಮ ವರದಿ ನೆಗೆಟಿವ್ ಎಂದು ಮತ್ತೊಂದು ಸಂದೇಶ ಬಂದಿದೆ. ಹಾಗಿದ್ದರೆ ನನ್ನ ನಂಬರ್ ಬಳಸಿಕೊಂಡಿದ್ದು ಯಾರು? ಹೇಗೆ ಬಳಸಿದರು? ಎಂದು ಪ್ರಶ್ನಿಸಿದರು. ಈ ಮಾಹಿತಿ ಆಧರಿಸಿ ಮಾಹಿತಿ ಕೆದಕಿದಾಗ ಇಂತಹ ಸಂದೇಶ ಅನೇಕರಿಗೆ ಬಂದಿದೆ. ತಾವು ಕೋವಿಡ್ ಟೆಸ್ಟ್ ಮಾಡಿಸದೆ ಇದ್ದರೂ ಟೆಸ್ಟ್ ರಿಪೋರ್ಟ್ ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಹುತೇಕರು ಈ ವಿಚಾರವನ್ನು ಅಲ್ಲಿಗೇ ಬಿಟ್ಟು ಸುಮ್ಮನಾಗಿದ್ದಾರೆ.

ಈ ಬೆಳವಣಿಗೆಯು ಅನೇಕ ಅನುಮಾನ ಹುಟ್ಟುಹಾಕಿದೆ. ಸರ್ಕಾರದ ಬಳಿ ಇರುವ ಜನರ ಮೊಬೈಲ್ ಸಂಖ್ಯೆ ದುರುಪಯೋಗವಾಗುತ್ತಿದೆಯೋ? ಅಥವಾ ಅವ್ಯವಹಾರದ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆಯೋ? ಟೆಸ್ಟ್ ಸಂಖ್ಯೆ ತೋರಿಸಲು ಅಧಿಕಾರಿಗಳು ಅಡ್ಡ ದಾರಿ ಹಿಡಿದಿದ್ದಾರೋ ಎಂಬ ಸಂಶಯ ವ್ಯಕ್ತವಾಗಿದೆ. ಈ ರೀತಿ ಸಂದೇಶ ಕೇವಲ ಕೋವಿಡ್ ಟೆಸ್ಟ್​ಗೆ ಮಾತ್ರ ಸೀಮಿತವಾಗದೆ ಕರೊನಾ ಲಸಿಕೆ ಪಡೆದ ಸಂಬಂಧವೂ ಬಂದಿದೆ. ಎರಡೂ ಲಸಿಕೆ ಪಡೆದು ಒಂದು ತಿಂಗಳ ಬಳಿಕ ತಮ್ಮ ಮೊಬೈಲ್​ಗೆ ಲಸಿಕೆ ಪಡೆದ ಸಂದೇಶ ಪಡೆದಿದ್ದನ್ನು ಮಹಿಳೆಯೊಬ್ಬರು ಖಾತ್ರಿಪಡಿಸಿದ್ದಾರೆ. ಅನ್ಯ ವ್ಯಕ್ತಿಯ ಹೆಸರು ಮೆಸೇಜ್​ನಲ್ಲಿತ್ತು. ನನ್ನ ನಂಬರ್ ಬಳಸಿ ಬೇರೆಯವರಿಗೆ ಲಸಿಕೆ ಕೊಟ್ಟಿರುವ ಶಂಕೆ ಇದೆ. ಈ ರೀತಿ ಮಾಡಿರುವುದು ಅನುಮಾನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ರಮೇಶ್ ಎಂಬುವರಿಗೂ ಸಹ ಇದೇ ಅನುಭವ ಆಗಿದೆ. ತಮಗೆ ಸಂಬಂಧಿಸದ ಸಂದೇಶ ತಮ್ಮ ಮೊಬೈಲ್​ಗೆ ಬಂದಿರುವುದನ್ನು ನೋಡಿ ಗಾಬರಿಯಾದೆ. ಹೇಗಿದ್ದರೂ ನಾನು ಸೇಫ್ ಇದ್ದೇನೆ ಎಂದು ಸುಮ್ಮನಾದೆ. ಇದನ್ನು ಆರೋಗ್ಯ ಇಲಾಖೆಯ ಯಾವ ಅಧಿಕಾರಿ ಬಳಿ ಪ್ರಶ್ನಿಸಬೇಕೆಂಬ ಮಾಹಿತಿ ಸಿಗದಾಯಿತು, ಸುಮ್ಮನಾದೆ ಎಂದು ವಿವರಿಸಿದರು. ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದರೆ, ಹಾಗೆಲ್ಲ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಬಹಳ ದಿನಗಳಿಂದ ಇಂತಹ ಬೆಳವಣಿಗೆ ನಡೆದಿದೆ ಎಂಬ ಗುಸುಗುಸು ಇಲಾಖೆಯಲ್ಲಿದೆ. ಯಾವ ಹಂತದಲ್ಲಿ ಲೋಪವಾಗುತ್ತಿದೆ, ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ.

ನಮ್ಮ ಮನೆಯ ನಾಲ್ಕು ಸದಸ್ಯರಿಗೂ ಒಮ್ಮೆಲೆ ಕೋವಿಡ್ ಟೆಸ್ಟ್ ಮಾಡಿದ ಬಗ್ಗೆ ಸಂದೇಶ ಬಂದಿತು. ನಂತರ ನೆಗೆಟಿವ್ ಎಂದು ವರದಿ ಕೂಡ ಬಂತು. ನಾವು ಟೆಸ್ಟ್ ಮಾಡಿಸಿಯೇ ಇಲ್ಲ. ಈ ರೀತಿ ಸಂದೇಶದ ಹಿಂದೆ ಅಕ್ರಮ ಕಾಣಿಸುತ್ತಿದೆ.

| ಸುಂದರ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿ

ಜನರಲ್ಲಿ ಅಸಮಾಧಾನ: ಕರೊನಾ ಟೆಸ್ಟ್ ಮತ್ತು ಲಸಿಕೆ ವಿತರಣೆಯಲ್ಲಿ ಸರ್ಕಾರದ ನಿಯಮಗಳು ಕಿರಿಕಿರಿ ಎನಿಸಿದ್ದರೂ ಜನರು ಸಂಯಮ ಕಾಯ್ದುಕೊಂಡಿದ್ದರು. ಆದರೀಗ ಅಸಮಾಧಾನ ಶುರುವಾಗಿದೆ. ಸರ್ಕಾರದ ಮಟ್ಟದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದೇ ಅನೇಕರು ಸಂದೇಹ ವ್ಯಕ್ತಪಡಿಸಿದ್ದಾರೆ. ನಮ್ಮ ಮೊಬೈಲ್ ಸಂಖ್ಯೆ ಆರೋಗ್ಯ ಇಲಾಖೆಯಲ್ಲಿ ದಾಖಲಾಗಿದೆ, ಅಲ್ಲಿಂದಲೇ ಸಂದೇಶ ಬಂದಿದೆ. ಬೇರೆ ವ್ಯಕ್ತಿಗಳು ನಮ್ಮ ಮೊಬೈಲ್ ಫೋನ್​ ಸಂಖ್ಯೆ ಕೊಟ್ಟು ಏಕೆ ಟೆಸ್ಟ್ ಮಾಡಿಸುತ್ತಾರೆ? ಇದು ಅಕ್ರಮ ಆಗಿರಬಹುದು ಎಂಬ ಅಭಿಪ್ರಾಯಗಳಿವೆ. ಈ ಹಿಂದೆ ಒಟಿಪಿ ವ್ಯವಸ್ಥೆ ಇತ್ತು, ಈಗ ಒಟಿಪಿ ಇಲ್ಲದೆ ಏಕೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಯೂ ಎದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net