

ಬೆಂಗಳೂರು: ಸೀರೆಯನ್ನು ಭಾರತೀಯ ಮಹಿಳೆಯರ ಮುಖ್ಯ ಉಡುಗೆ ಎಂದು ಪರಿಗಣಿಸಲಾಗಿದೆ. ಸೀರೆ ಉಡುವುದು ಬಹಳ ಹಳೆಯ ಸಂಪ್ರದಾಯ. ಇದು ವಿಶ್ವದ ಅತ್ಯಂತ ಉದ್ದವಾದ ಮತ್ತು ಹಳೆಯ ಉಡುಪುಗಳಲ್ಲಿ ಒಂದಾಗಿದೆ. ಆದರೆ ಸೀರೆ ಈಗೀಗ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಯುವಕರು ಸಹ ಈಗ ಬಹಿರಂಗವಾಗಿ ಸೀರೆ ಉಟ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಅಂತಹ ಯುವಕನ ವಿಡಿಯೋ ವೈರಲ್ ಆಗುತ್ತಿದೆ.
ಯುವಕನೊಬ್ಬ ಸೀರೆ ಉಟ್ಟುಕೊಂಡು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಯುವಕನಿಗೆ ಸೀರೆ ಉಟ್ಟಿದ್ದಕ್ಕೆ ಕಾರಣವೇನು ಎಂದು ಕೇಳಿದಾಗ ಅದಕ್ಕೊಂದು ಉದಾಹರಣೆ ಕೊಡುತ್ತಾ ಉತ್ತರಿಸಿದ್ದಾನೆ. ಈ ವೈರಲ್ ವಿಡಿಯೋ ಜೈಪುರ ಲಿಟರೇಚರ್ ಫೆಸ್ಟಿವಲ್‌ನದ್ದು ಎಂದು ಹೇಳಲಾಗಿದೆ.
ಈ ಯುವಕನ ಹೆಸರು ಕರಣ್ ವಿಗ್. ಸೀರೆ ಉಟ್ಟು ಜೈಪುರ ಲಿಟರೇಚರ್ ಫೆಸ್ಟಿವಲ್ಗೆ ಆಗಮಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ಮಾಡಿದವರು ಅವರನ್ನು ಸೀರೆ ಏಕೆ ಉಟ್ಟಿದ್ದೀರಿ ಎಂದು ಕೇಳಿದಾಗ, ಸೀರೆಗೆ ಯಾವುದೇ ಗುರುತಿನ ಅಗತ್ಯವಿಲ್ಲ, ಒಬ್ಬ ವ್ಯಕ್ತಿಯನ್ನು ಅವನ ಬಟ್ಟೆಯಿಂದ ಗುರುತಿಸಬಾರದು, ಅದು ಅವನ ಹೃದಯದಿಂದ ಬರಬೇಕು ಎಂದು ತಿಳಿಸಿದ್ದಾನೆ.
ಸಾಮಾನ್ಯವಾಗಿ ಮಹಿಳೆಯರು ಸೀರೆ ಉಡುತ್ತಾರೆ ಅಲ್ಲವೇ ಎಂದು ಯುವಕನನ್ನು ಪ್ರಶ್ನಿಸಿದಾಗ, ಮಹಿಳೆಯರು ಧರಿಸುವ ಎಲ್ಲವನ್ನೂ ನಾವು ಧರಿಸಿದ್ದೇವೆ. ಧರ್ಮಗ್ರಂಥಗಳಲ್ಲಿ ನೋಡಿದಾಗ ಶಿಖಂಡಿ ಅದನ್ನು ಧರಿಸಿದ್ದರು, ಶ್ರೀರಾಮ ವನವಾಸದಲ್ಲಿದ್ದಾಗ, ಅವರು ಕೇವಲ ಧೋತಿಯನ್ನು ಧರಿಸುತ್ತಿದ್ದರು ಮತ್ತು ಅದರ ಮೇಲೆ ದುಪಟ್ಟಾವನ್ನು ಹೊಂದಿದ್ದರು. ಅನೇಕ ಜನರು ಅದನ್ನು ಧರಿಸಿದ್ದಾರೆ. ನಿಮ್ಮ ಆಲೋಚನೆಯನ್ನು ಬದಲಿಸಿ, ವ್ಯಕ್ತಿ ಬದಲಾಗುತ್ತಾನೆ ಎಂದು ಹೇಳಿದ್ದಾನೆ ಯುವಕ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಹರಿದುಬರುತ್ತಿದೆ. ಭಾರತವು ವಿಶ್ವ ನಾಯಕನಾಗಲು ಕೆಲವೇ ಹೆಜ್ಜೆ ದೂರದಲ್ಲಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೆಲವರು ಡ್ರೆಸ್ಸಿಂಗ್ ಅವರ ವೈಯಕ್ತಿಕ ವಿಷಯ ಎಂದು ಬರೆದರೆ, ಮತ್ತೆ ಕೆಲವರು ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಕೊಳೆತ ಮನಸ್ಥಿತಿಯನ್ನು ತೋರಿಸಿದ್ದಾರೆ.
"ದೇಶದಲ್ಲಿ ಪ್ರತಿಯೊಬ್ಬರಿಗೂ ತಮಗೆ ಬೇಕಾದುದನ್ನು ಧರಿಸುವ ಸ್ವಾತಂತ್ರ್ಯವಿದೆ. ಅವರು ಅಶ್ಲೀಲತೆಯನ್ನ ಹರಡುತ್ತಿಲ್ಲ ಅಲ್ಲವೇ? ಕೆಲವರಿಗೆ ತಮಾಷೆ ಮಾಡುವುದು ಮಾತ್ರ ಗೊತ್ತು. ಸೀರೆ ಉಟ್ಟು ಬಂದಿದ್ದು ಚೆನ್ನಾಗಿತ್ತು, ಬಿಕಿನಿ ಹಾಕಿಕೊಂಡು ಬಂದಿದ್ದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ನಾವು ಎಲ್ಲರನ್ನು ಗೌರವಿಸಬೇಕು, ಯಾರನ್ನಾದರೂ ವೈಯಕ್ತಿಕವಾಗಿ ಗೇಲಿ ಮಾಡುವುದು ಅವಮಾನ" ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಸೀರೆಯನ್ನು ಉಡುತ್ತಾರೆ. ಸೀರೆಯನ್ನು ಸಾಂಪ್ರದಾಯಿಕವಾಗಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಧರಿಸುತ್ತಾರೆ. ಸೀರೆಗಳಲ್ಲಿ ಮುಖ್ಯವಾದವು ಕಾಂಜೀವರಂ ಸೀರೆ, ಬನಾರಸಿ ಸೀರೆ, ಪಟೋಲಾ ಸೀರೆ ಮತ್ತು ಹಕೋಬಾ.