ಮಂತ್ರಯೋಗದಿಂದ ಸ್ಮರಣೆ, ಏಕಾಗ್ರತೆ, ಭಾವನಾತ್ಮಕ ನಿಯಂತ್ರಣ

Mantrayoga
Published on
ಯೋಗ ಶಬ್ದವು ಕೂಡಿಸು, ಒಂದಾಗಿಸು, ಸಮನ್ವಯ, ಐಕ್ಯ ಎಂಬ ಅರ್ಥ ನೀಡುತ್ತದೆ. ವ್ಯಕ್ತಿಯ ಪಂಚಮುಖಿ ವ್ಯಕ್ತಿತ್ವಗಳಾದ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ವಿಕಾಸ ಮತ್ತು ಸಮನ್ವಯವನ್ನು ಯೋಗದಿಂದ ಹೊಂದಬಹುದು. ಆತ್ಮ-ಪರಮಾತ್ಮರ ಐಕ್ಯತೆ ಯೋಗ ಸಾಧನೆಯಿಂದ ಸಾಧ್ಯ.

ಇದನ್ನು ಹೊಂದಲು ಭಕ್ತಿ, ಜ್ಞಾನ, ಕರ್ಮ, ರಾಜ, ಹಠಯೋಗ ಪಥಗಳು ಪ್ರಮುಖವಾಗಿವೆ. ಇವುಗಳಲ್ಲದೆ ತಂತ್ರಯೋಗ, ಮಂತ್ರಯೋಗ, ಜಪಯೋಗ, ಕುಂಡಲಿನೀಯೋಗ, ನಾದಯೋಗ ಮುಂತಾದವು ಸಾಧನೆಯಲ್ಲಿವೆ.

ಜಪಯೋಗವು ಸನಾತನ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಜಪವು ಮಂತ್ರಗಳನ್ನು ಅಥವಾ ದೈವೀ ನಾಮಗಳನ್ನು ಪುನಃ ಪುನಃ ಪಠಿಸುವ ಪ್ರಕ್ರಿಯೆಯಾಗಿದೆ. ಮೂಲತಃ ವೇದಗಳಲ್ಲಿ ತನ್ನ ಬೇರುಗಳನ್ನು ಹೊಂದಿರುವ ಜಪವು ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಸಂಪ್ರದಾಯಗಳಲ್ಲಿ ಶ್ರದ್ಧೆಯಿಂದ ಆಚರಿಸಲ್ಪಡುತ್ತಿದೆ. ಜಪವು ಕೇವಲ ವಿಧಿ-ವಿಧಾನವಲ್ಲ. ಆದರೆ ಮನಸ್ಸು ಭಾವನೆ ಮತ್ತು ಚೈತನ್ಯವನ್ನು ಪರಿವರ್ತಿಸಲು ಸಶಕ್ತವಾದ ವಿಧಾನವಾಗಿದೆ.

ಜಪದ ಪ್ರಕಾರಗಳು: ಸಾಮಾನ್ಯವಾಗಿ ಜಪವನ್ನು ಮೂರು ಪ್ರಮುಖ ಪ್ರಕಾರಗಳಲ್ಲಿ ವಿಂಗಡಿಸಬಹುದು.

ವೈಖರಿ ಜಪ (ಶ್ರಾವ್ಯ ಪಠಣ): ಈ ವಿಧಾನದಲ್ಲಿ ಮಂತ್ರವನ್ನು ಶಬ್ದದ ರೀತಿಯಲ್ಲಿ ಪಠಿಸಲಾಗುತ್ತದೆ. ಶಬ್ದ ಮತ್ತು ಛಂದಸ್ಸಿನಲ್ಲಿ ಗಮನವನ್ನು ಕೇಂದ್ರೀಕರಿಸಲು ನೆರವಾಗುತ್ತದೆ. ಆರಂಭಿಕ ಸಾಧಕರಿಗೆ ಈ ಕ್ರಮ ಸೂಕ್ತ. ಏಕೆಂದರೆ ಇದು ಏಕಾಗ್ರತೆಯನ್ನು ಹೊಂದಲು ಸಹಾಯಕವಾಗಿದೆ. ಭಕ್ತಿಮಾರ್ಗದ ಹರಿನಾಮ ಹರನಾಮ ಜಪ ಅಥವಾ ಕೀರ್ತನೆಯಲ್ಲಿ ಘೋಷಣೆಯ ಪಠಣೆಯಾಗಿ ಉದಾಹರಿಸಬಹುದು.

ಉಪಾಂಶು ಜಪ (ನಿಜಗುಪ್ತ ಪಠಣ): ಇಲ್ಲಿ ಮಂತ್ರವನ್ನು ಮೃದುವಾಗಿ, ಸ್ವಲ್ಪ ಜೋರಾಗಿ ಪಠಿಸಲಾಗುತ್ತದೆ. ಆದರೆ ಅದು ಸ್ವತಃ ಕೇಳಲು ಸಾಧ್ಯವಾಗುತ್ತದೆ. ಆಂತರಿಕ ಹಾಗೂ ಬಾಹ್ಯ ಜಪಗಳ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತದೆ. ವಿಶೇಷ ಆಧ್ಯಾತ್ಮಿಕ ಸಾಧನೆಗಳಲ್ಲಿ ಬಳಸಲಾಗುತ್ತದೆ.

ಮಾನಸಿಕ ಜಪ (ಮನಸ್ಸಿನಲ್ಲಿಯೇ ಪಠಣ): ಮಂತ್ರವನ್ನು ಮನಸ್ಸಿನಲ್ಲಿಯೇ ಪಠಿಸಲಾಗುತ್ತದೆ. ಅತ್ಯಧಿಕ ಏಕಾಗ್ರತೆಯನ್ನು ಹೊಂದಲು ಅಗತ್ಯವಿರುವ ಅತ್ಯಂತ ಉನ್ನತ ಪ್ರಕಾರ. ಆಂತರಿಕ ಪರಿವರ್ತನೆಗಾಗಿ ಇದನ್ನು ಧ್ಯಾನದ ಪರಂಪರೆೆಯಲ್ಲಿ ಅನ್ವಯಿಸಲಾಗುತ್ತದೆ.

ಮಂತ್ರ ಎಂದರೇನು?: ‘ಮನನಾತ್ ತ್ರಾಯತೇ ಇತಿ ಮಂತ್ರಃ’- ಮಂತ್ರ ಮನುಷ್ಯನ ಮನಸ್ಸನ್ನು ರಕ್ಷಿಸುವುದು, ಉಪಶಮನ ಮಾಡುವ ಶಬ್ದ. ಮನಸ್ಸಿಗೆ ಶಾಂತಿ: ಮಂತ್ರ ಜಪದಿಂದ ಮನಸ್ಸಿನ ಅಲೆಗಳು ಶಾಂತವಾಗುತ್ತವೆ. ಮತ್ತು ಏಕಾಗ್ರತೆ (ಧಾರಣ) ಬರುತ್ತದೆ.

ಶ್ರವಣ ಶಕ್ತಿ: ಮಂತ್ರಗಳ ಕಂಪನ ಶಕ್ತಿ ಶರೀರ ಹಾಗೂ ಮನಸ್ಸಿನ ಮೇಲೆ ಪ್ರಭಾವ ಬೀರುವ ಮೂಲಕ ಧನಾತ್ಮಕ ಪರಿಣಾಮವನ್ನು ಆರೋಗ್ಯದಲ್ಲಿ ಪಡೆಯಬಹುದು.

ಆಧ್ಯಾತ್ಮಿಕ ಪ್ರಗತಿ: ಮಂತ್ರಗಳ ಜಪ ಸಾಧನೆಯಿಂದ ಮುಕ್ತಿಯ ದಾರಿ ತೆರೆದುಕೊಳ್ಳುತ್ತದೆ.

ಮಂತ್ರದ ಪ್ರಕಾರಗಳು: 1. ಬೀಜ ಮಂತ್ರಗಳು : ಓಂ, ಹ್ರೀಂ, ಶ್ರೀಂ... ಇತ್ಯಾದಿ ದಿವ್ಯ ಶಬ್ದಶಕ್ತಿ ಹೊಂದಿರುವ ಮಂತ್ರಗಳು

ವೇದ ಮಂತ್ರಗಳು: ವೇದಗಳಲ್ಲಿ ಉಲ್ಲೇಖಿತ ಮಂತ್ರಗಳು, ಉದಾ: ಗಾಯತ್ರಿ, ಮಂತ್ರ.

ತಾಂತ್ರಿಕ ಮಂತ್ರಗಳು: ವಿಶೇಷ ವಿಧಿಗಳಲ್ಲಿ ಉಪಯೋಗಿಸುವ ಮಂತ್ರಗಳು.

ನಾಮಜಪ: ದೇವರ ನಾಮವನ್ನು ಜಪಿಸುವುದು. ಉದಾ: ಓಂ ನಮಃ ಶಿವಾಯ, ಶ್ರೀ ರಾಮ ಜಯ ರಾಮ ಜಯ ಜಯ ರಾಮ.

ಚಿಕಿತ್ಸಾ ಮಂತ್ರಗಳು: ಶಾರೀರಿಕ ಮಾನಸಿಕ ಆರೋಗ್ಯ ರಕ್ಷಣೆ- ವರ್ದನೆಗೆ ಉದಾ: ಮಹಾಮೃತ್ಯುಂಜಯ ಮಂತ್ರ

ಜಪ ವೈಜ್ಞಾನಿಕ ಪ್ರಮಾಣಿಕರಣ: ಜಪವು ಮಾನವ ದೇಹ, ಮನಸ್ಸು ಹಾಗೂ ವ್ಯಕ್ತಿತ್ವದ ಮೇಲೆ ಬೀರುವ ಪ್ರಭಾವವನ್ನು ಸಮಕಾಲೀನ ಸಂಶೋಧನೆಗಳು ಒತ್ತಿ ಹೇಳುತ್ತವೆ. ಮಂತ್ರ ಜಪವು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ ಮತ್ತು ಕಾರ್ಟಿಸೋಲ್ ಮಟ್ಟವನ್ನು ಇಳಿಸುತ್ತದೆ. ಹೃದಯ ಗತಿ ಮತ್ತು ಉಸಿರಾಟದ ಮೇಲೆ ಧನಾತ್ಮಕ ಪರಿಣಾಮ. ಛಂದಸ್ಸು ಪೂರ್ಣ ಮಂತ್ರ ಜಪವು ಉಸಿರಾಟದ ಮಾದರಿಯನ್ನು ಸರಿಹೊಂದಿಸುತ್ತದೆ ಮತ್ತು ಕಾರ್ಡಿಯೊವಾಸ್ಕುಲರ್ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಸ್ಮರಣೆ, ಏಕಾಗ್ರತೆ, ಭಾವನಾತ್ಮಕ ನಿಯಂತ್ರಣ ಹಾಗೂ ಶಕ್ತಿಯ ಸಮತೋಲನ ಸಾಧ್ಯವಾಗುವುದು. ಮಂತ್ರ ಜಪವು ನಿರ್ದಿಷ್ಟ ಶ್ರೇಣಿಯ ತೀವ್ರತೆಯಲ್ಲಿ ಮಾಡುವ ಅಭ್ಯಾಸದ ಪ್ರತಿಧ್ವನಿಯು ಪ್ರಾಣ ಸೂಕ್ಷ್ಮ ಶರೀರವನ್ನು ಶುದ್ಧೀಕರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net