

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಎದ್ದಿರುವ ಊಹಾಪೋಹಗಳಿಗೆ ಐಸಿಸಿ ತೆರೆ ಎಳೆದಿದ್ದು, ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಅನುಮೋದನೆ ನೀಡಿದೆ. ಈ ಮೂಲಕ ಭಾರತದ ಹಠಕ್ಕೆ ಪಾಕಿಸ್ತಾನ ಮಣಿದಿದ್ದು, ಬಿಸಿಸಿಐ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಧಿಸಿದೆ.
ಅದರಂತೆ ಭಾರತದ ಪಂದ್ಯಗಳು ಪಾಕಿಸ್ತಾನದ ಬದಲಿಗೆ ತಟಸ್ಥ ಸ್ಥಳದಲ್ಲಿ ನಡೆಯಲಿದ್ದು, ಇದರ ಜೊತೆಗೆ ಐಸಿಸಿ ಪಾಕಿಸ್ತಾನಕ್ಕೆ ಮತ್ತೊಂದು ಟೂರ್ನಿಯ ಆತಿಥ್ಯದ ಗಿಫ್ಟ್ ನೀಡಿದೆ. 2028ರಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್ ಆತಿಥ್ಯವನ್ನು ನೀಡಿದ್ದು, 2027ರವರೆಗೆ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಿಸುವುದಾಗಿ ಐಸಿಸಿ ತಿಳಿಸಿದೆ.
ಅದರಂತೆ 2025 ರಲ್ಲಿ ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಮತ್ತು 2026 ರ ಟಿ20 ವಿಶ್ವಕಪ್ಗೂ ಅನ್ವಯಿಸುತ್ತದೆ. ಇದಲ್ಲದೆ, ಪಾಕಿಸ್ತಾನವು ಆಸ್ಟ್ರೇಲಿಯಾವು 2029 ಮತ್ತು 2031 ರಲ್ಲಿ ನಡೆಯಲ್ಲಿರುವ ಐಸಿಸಿ ಮಹಿಳಾ ಪಂದ್ಯಾವಳಿಗಳಲ್ಲಿ ಒಂದನ್ನು ಆಯೋಜಿಸುವ ಹಕ್ಕನ್ನು ಪಡೆದುಕೊಂಡಿದೆ.
2025ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯಲಿದ್ದು, ಒಟ್ಟು 08 ತಂಡಗಳು ಇದರಲ್ಲಿ ಭಾಗಿಯಾಗಲಿವೆ. 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲಿವೆ. ಸೆಮೀಸ್ನಲ್ಲಿ ಗೆದ್ದ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆ.