ಜೆಡಿಎಸ್‌ನಲ್ಲಿ ಸದಸ್ಯತ್ವ ಅಭಿಯಾನ ಪರ್ವ; ನೋಂದಣಿಗೆ ಟಾರ್ಗೆಟ್ ಫಿಕ್ಸ್

jdd
Published on

ಬೆಂಗಳೂರು: ಸದಸ್ಯತ್ವ ಅಭಿಯಾನ ಜೆಡಿಎಸ್ ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಲೋಕಸಭೆ ಚುನಾವಣೆ ಬಳಿಕ ತಟಸ್ಥವಾಗಿದ್ದ ಪಕ್ಷದ ಚಟುವಟಿಕೆಗಳಿಗೆ ಜೀವ ಬಂದಿದೆ.

ಪಕ್ಷದ ಎಲ್ಲ ಹಂತದ ನಾಯಕರು ಸದಸ್ಯತ್ವ ಅಭಿಯಾನದಲ್ಲಿ ಬ್ಯೂಸಿ ಆಗಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟನೆಗೆ ಸದಸ್ಯತ್ವ ನೋಂದಣಿ ಆಧಾರಸ್ಥಂಭವಾಗಿದೆ. ಪಕ್ಷದ ಸಾಂಸ್ಥಿಕ ಚುನಾವಣೆ ಮಾತ್ರವಲ್ಲದೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ, ಬಿಬಿಎಂಪಿ ಚುನಾವಣೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತದೆ.

ಹೊಸ ಹೊಸ ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾದರೆ ಪಕ್ಷದಲ್ಲಿ ಸಂಚಲನ ಉಂಟಾಗುತ್ತದೆ. ಹೊಸ ನಾಯಕತ್ವ ಉದಯಿಸುತ್ತವೆ. ಹಾಗಾಗಿ ಎಲ್ಲ ಪಕ್ಷಗಳೂ ಸದಸ್ಯತ್ವ ನೋಂದಣಿಯನ್ನು ಗಂಭೀರವಾಗಿ ಪರಿಗಣಿಸುತ್ತವೆ.

ಜೆಡಿಎಸ್ ಕೂಡ ಸದಸ್ಯತ್ವ ನೋಂದಣಿಗೆ ಬಹು ದೊಡ್ಡ ತಂಡ ಮತ್ತು ಮೇಲುಸ್ತುವಾರಿಗಳನ್ನು ನಿಯುಕ್ತಿಗೊಳಿಸಿದೆ. ಕ್ಷೇತ್ರ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟ ಒಳಗೊಂಡಂತೆ ಹಂತ ಹಂತದಲ್ಲಿ ಸದಸ್ಯತ್ವ ಜವಾಬ್ದಾರಿ ನಕ್ಷೆ ಸಿದ್ಧಪಡಿಸಲಾಗಿದೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಟ 5 ಸಾವಿರದಿಂದ 10 ಸಾವಿರದ ವರೆಗೆ ಸದಸ್ಯತ್ವ ನೋಂದಣಿ ಮಾಡಿಸಲು ಟಾರ್ಗೆಟ್ ನೀಡಲಾಗಿದೆ. 224 ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆಯಾಗಬೇಕು ಎಂಬ ದೃಷ್ಟಿಕೋನದಿಂದ ಪಕ್ಷದ ವರಿಷ್ಠರು ಸದಸ್ಯತ್ವ ಅಭಿಯಾನಕ್ಕೆ ವಿಶೇಷ ಒತ್ತು ಕೊಟ್ಟಿದ್ದಾರೆ.

ಸದಸ್ಯತ್ವ ನೋಂದಣಿ ಸಂಬಂಧಿಸಿದ ಪುಸ್ತಕಗಳನ್ನು ಮುದ್ರಿಸಿ ಎಲ್ಲ ಕ್ಷೇತ್ರಗಳಿಗೂ ಕಳುಹಿಸಲಾಗಿದೆ. ಸದಸ್ಯತ್ವ ನೋಂದಣಿಗೆ ಹಾಗೂ ಬೂತ್ ಅಭಿಯಾನಕ್ಕೆ ಮೈಸೂರು ಭಾಗದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡುವಲ್ಲಿ ಬ್ಯೂಸಿ ಆಗಿದ್ದಾರೆ. ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಲು ಈ ಅಭಿಯಾನವನ್ನು ಸಮರ್ಥವಾಗಿ ಬಳಕೆ ಮಾಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಎಲ್ಲ ಧರ್ಮ, ಜಾತಿ, ವರ್ಗಗಳನ್ನೂ ಒಳಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಕಾರ್ಯಕರ್ತರಿಗೂ ಟಾಸ್ಕ್

ಮುಂಬರುವ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು, ಪಕ್ಷದಲ್ಲಿ ವಿವಿಧ ಹುದ್ದೆ ಗಿಟ್ಟಿಸಿಕೊಳ್ಳಲು ಇಚ್ಛಿಸುವವರಿಗೆ ಈ ಅಭಿಯಾನ ದೊಡ್ಡ ಟಾಸ್ಕ್ ಆಗಿದೆ. ಹಾಗಾಗಿ ಮುಖಂಡರು ಹುರುಪಿನಿಂದ ಓಡಾಡುತ್ತಿದ್ದಾರೆ.

26 ಶಾಸಕರಿಗೆ ಮೇಲುಸ್ತುವಾರಿ

18 ಶಾಸಕರು, 8 ಮಂದಿ ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಶಾಸಕರು, ಪಕ್ಷದ ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷರು ಮತ್ತು ವಿವಿಧ ಘಟಕಗಳ ಅಧ್ಯಕ್ಷರು ಸದಸ್ಯತ್ವ ನೋಂದಣಿಯ ಮೇಲುಸ್ತುವಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಈ ಅಭಿಯಾನದ ನಿಗಾವಣೆ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಚುರುಕು

ಬೆಂಗಳೂರಿನಲ್ಲಿ ಸದಸ್ಯತ್ವ ನೋಂದಣಿಗೆ ಹೆಚ್ಚು ಚುರುಕು ನೀಡಲಾಗಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಪಕ್ಷದ ಕೆಲವು ನಾಯಕರು 30-40 ಸಾವಿರ ಸದಸ್ಯತ್ವ ಮಾಡಿಸುವುದಾಗಿ ವಾಗ್ದಾನ ನೀಡಿದ್ದಾರೆ.

ಸದಸ್ಯತ್ವ ನೋಂದಣಿಗೆ ನಿಖಿಲ್ ಕುಮಾರಸ್ವಾಮಿ ಕದರ್ ತಂದು ಕೊಟ್ಟಿದ್ದಾರೆ. ಸಾಧ್ಯವಾದಷ್ಟು ಕಡೆಗಳಲ್ಲಿ ಖುದ್ದು ತಾವೇ ಈ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಾರೆ. ಇದರಿಂದ ಯುವಕವಲ್ಲಿ ಉತ್ಸಾಹ ಇಮ್ಮಡಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net