

ಗುಹವಾಟಿ: ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ದೇಶಾದ್ಯಂತ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಜ.20 ರಿಂದ 25ರವರೆಗೆ ದೇಶದಲ್ಲಿರುವ ಮುಸ್ಲಿಂ ಸಮುದಾಯದವರು ಹೊರಗಡೆ ಬರಬೇಡಿ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಮತ್ತು ಅಸ್ಸಾಂನ ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾರ್ಪೇಟಾದಲ್ಲಿ ಮದರಸಾದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು,"ಬಾಬರಿ ಮಸೀದಿ ಧ್ವಂಸದ ಸಂದರ್ಭದ ಬಳಿಕ ಉಂಟಾಗಿದ್ದ ಪರಿಸ್ಥಿಯೇ ಮತ್ತೆ ಮರುಕಳಿಸಬಹುದು. ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು, ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಬಹುದು. ಇದರಿಂದ ಮುಸ್ಲಿಂ ಸಮುದಾಯದ ಜನರನ್ನು ರಕ್ಷಿಸುವ ಕೆಲಸ ಆಗಬೇಕು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಜನವರಿ 20ರಿಂದ 25ರ ಅವಧಿಯಲ್ಲಿ ಜನರು ಬಸ್, ರೈಲಿನಲ್ಲಿ ಆಯೋಧ್ಯೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಯಾರು ಮನೆಯಿಂದ ಹೊರಗೆ ಬರುವುದು ಬೇಡ. ರೈಲಿನಲ್ಲಿ ಪ್ರಯಾಣಿಸಬೇಡಿ" ಎಂದರು.
ಇದೀಗ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಜ.22ರಂದು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ದೇಶದ ಕೋಟ್ಯಂತರ ರಾಮನ ಭಕ್ತರು ಶ್ರೀರಾಮ ಮಂದಿರ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾನೆಯ ಧಾರ್ಮಿಕ ಕಾರ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ,(ಏಜೆನ್ಸೀಸ್).