

| ಮೃತ್ಯುಂಜಯ ಕಪಗಲ್ ಬೆಂಗಳೂರು
ಹೈಕೋರ್ಟ್ ಮಧ್ಯೆ ಪ್ರವೇಶಿಸಿದ ಬಳಿಕ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ತಾತ್ಕಾಲಿಕವಾಗಿ ಮುಂದೂಡಿದೆ. ಆದರೆ ‘ಜನರು-ರಾಜಕೀಯ ಹಿತ’ದ ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಚಳವಳಿ ಅತಿರೇಕಕ್ಕೆ ಹೋದರೂ ರಾಜಕೀಯ ಸಂಘರ್ಷ, ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳೆದ ನಿಲುವು, ಬರೆದ ಬಹಿರಂಗಪತ್ರವು ವರಿಷ್ಠರ ಗಮನಸೆಳೆದಿದೆ. ಆದರೆ ಮೂರ್ನಾಲ್ಕು ಜನ ಸಚಿವರನ್ನು ಬಿಟ್ಟರೆ ಉಳಿದವರೆಲ್ಲರೂ ಮೌನಕ್ಕೆ ಶರಣಾಗಿದ್ದರ ಬಗ್ಗೆ ಹೈಕಮಾಂಡ್ ವಲಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ ಎಂದು ಮೂಲಗಳು ಹೇಳಿವೆ. ರಾಜಕೀಯವಾಗಿ ಸಕಾಲದಲ್ಲೇ ದಿಟ್ಟ ಉತ್ತರ ನೀಡುವಲ್ಲಿ ಇಡೀ ಪಕ್ಷ ಮುಗ್ಗರಿಸಿದ್ದರ ಮಾಹಿತಿಯೂ ದೆಹಲಿ ನಾಯಕರಿಗೆ ತಲುಪಿದೆ. ಕಾಂಗ್ರೆಸ್ ಪಕ್ಷ ಪಾದಯಾತ್ರೆ ಘೋಷಿಸಿದಾಗಲೇ ಸರ್ವಪಕ್ಷ ಸಭೆ ಕರೆದು ವಸ್ತುಸ್ಥಿತಿ ವಿವರಿಸುವ ಮೂಲಕ ಕೈಪಕ್ಷವನ್ನು ಕಟ್ಟಿಹಾಕುವ ಅವಕಾಶವಿತ್ತು. ಕೋರ್ಟ್ ತರಾಟೆಗೆ ತೆಗೆದುಕೊಳ್ಳುವ ಮುನ್ನ ಪಾದಯಾತ್ರೆ ನಿಲ್ಲಿಸುವಂತೆ ನಿರ್ದಿಷ್ಟ ಆದೇಶ, ಹಿರಿಯ ಪೊಲೀಸ್ ಅಧಿಕಾರಿಗಳ ಮುಖೇನ ಮತ್ತೊಮ್ಮೆ ನೋಟಿಸ್ ತಲುಪಿಸಬಹುದಿತ್ತು ಎಂದು ಕೆಲ ನಾಯಕರು ವಾದಿಸುತ್ತಿದ್ದರೂ ವರಿಷ್ಠರು ಆ ವಿಷಯಕ್ಕೆ ಅಷ್ಟು ಮಹತ್ವ ನೀಡಿದಂತಿಲ್ಲ.
ಪಾದಯಾತ್ರೆ ಉದ್ದೇಶ ಬಯಲು ಮಾಡುವಂತಹ ಪ್ರಾರಂಭಿಕ ಪ್ರಯತ್ನಗಳೇ ಪಕ್ಷದಿಂದಾಗಲಿಲ್ಲ. ಅದೇನಿದ್ದರೂ ಸಿಎಂ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳ ಜವಾಬ್ದಾರಿ ಎಂಬಂತೆ ಬಹುತೇಕ ರಾಜ್ಯ ನಾಯಕರು ವರ್ತಿಸಿರುವುದು ಆಕ್ರೋಶ ಹೆಚ್ಚಿಸಿದೆ. ಖಡಕ್ ಸಂದೇಶವೊಂದು ಬಂದ ನಂತರವೇ ಎಚ್ಚೆತ್ತುಕೊಂಡು ಸರಣಿ ಸುದ್ದಿಗೋಷ್ಠಿಗಳ ಮೂಲಕ ಕಾಂಗ್ರೆಸ್ ಮೇಲೆ ವಾಗ್ದಾಳಿಗೆ ಇಳಿದರು. ಒಟ್ಟಾರೆ ವಿದ್ಯಮಾನ ನಿಭಾಯಿಸಿದ ರೀತಿ ಬಗ್ಗೆ ಪರಸ್ಪರ ಬೇಸರ ತೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ಲಾಭದ ಲೆಕ್ಕಾಚಾರ: ದೊಡ್ಡಮಟ್ಟದ ಪಾದಯಾತ್ರೆಗೆ ವ್ಯವಸ್ಥಿತ ಸಿದ್ಧತೆ, ಕಾರ್ಯತಂತ್ರಗಳು ಪಕ್ಷದ ವರ್ಚಸ್ಸು ವೃದ್ಧಿಗೆ ನೆರವಾಗಿದೆ ಎಂಬ ಉತ್ಸಾಹ ಕೈಪಡೆಯಲ್ಲಿ ತುಂಬಿ ತುಳುಕುತ್ತಿದೆ. ಅಲ್ಲದೆ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಪರಿ, ಕಾಂಗ್ರೆಸ್ ವರಿಷ್ಠರ ಸೂಚನೆಯಿಂದಾಗಿ ಪಾದಯಾತ್ರೆ ಇನ್ನಷ್ಟು ದಿನ ಮುಂದುವರಿಸಿದ್ದರೆ ಪಕ್ಷಕ್ಕೆ ಆಗಬಹುದಾದ ಹಾನಿ ತಪ್ಪಿದೆ ಎನ್ನುವುದು ಕಾಂಗ್ರೆಸ್ ಮೂಲಗಳ ವಿಶ್ಲೇಷಣೆ. ಕರೊನಾ ಇಳಿಮುಖವಾದ ಬಳಿಕ ಇದೇ ಮಾದರಿ ಚಳವಳಿ ಹೂಡಿದ್ದರೆ ಮುಂಬರುವ ಚುನಾವಣೆಗೆ ಗರಿಷ್ಠ ಲಾಭ ಪಡೆಯಬಹುದಿತ್ತು. ಮುಂದೂಡಿ ಮತ್ತೆ ಕೈಗೆತ್ತಿಕೊಂಡರೆ ಮತ್ತದೇ ಅಲೆ ಸೃಷ್ಟಿ, ಸ್ಪಂದನೆ ಸಿಗುವುದು ಕಷ್ಟ ಎನ್ನುವುದು ಪಕ್ಷದ ಮೂಲಗಳ ಅಭಿಮತ.
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ‘ಹೋದ್ಯಾ ಪುಟ್ಟ, ಬಂದ್ಯಾ ಪುಟ್ಟ ಎನ್ನುವಂತಾಗಿದೆ ಎಂದು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.ಪಿ.ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಈ ಹುದ್ದೆಯಲ್ಲಿ ಚೇಂಬರ್ ಮತ್ತು ಕುರ್ಚಿ ಬಿಟ್ರೆ ಏನೂ ಇಲ್ಲ. ಮೇಲಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಅನ್ನೋದು ಏನೇನೂ ಅಲ್ಲ. ಈ ಸ್ಥಾನವೇ ಬೇಕೆಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಹೊರತುಪಡಿಸಿ ಉಳಿದೆಲ್ಲ ಬದಲಾವಣೆ ನಿಶ್ಚಿತ. ಅಭಿವೃದ್ಧಿ ದೃಷ್ಟಿಯಿಂದ ಬದಲಾವಣೆ ಅಗತ್ಯ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿ ಕೊಂಡರು.