

ಶ್ರೀನಗರ: ಜಮ್ಮು- ಕಾಶ್ಮೀರದ ಮಾಜಿ ಸಿಎಂ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬಂಧನವನ್ನು 3 ತಿಂಗಳ ಮಟ್ಟಿಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಭದ್ರತಾ ಕಾನೂನಿನ (ಪಿಎಸ್ಎ) ಅನ್ವಯ ಈ ಕ್ರಮ ಕೈಗೊಂಡಿರುವುದಾಗಿ ಜಮ್ಮು- ಕಾಶ್ಮೀರ ಆಡಳಿತ ಶುಕ್ರವಾರ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಆಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿಯ ಅನ್ವಯದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು. ಅದಕ್ಕೂ ಮುನ್ನ ಮೆಹಬೂಬಾ ಸೇರಿ ಹಲವು ಪ್ರಮುಖ ರಾಜಕೀಯ ನೇತಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು ಮೆಹಬೂಬಾ ಅವರ ಬಂಧನ ಅವಧಿ ಆಗಸ್ಟ್ 5ರಂದು ಮುಗಿಯುವುದರಲ್ಲಿತ್ತು. ಮೆಹಬೂಬಾ ಮುಫ್ತಿಯನ್ನು ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ನಂತರ ಅವರ ಮೇಲೆ ಪಿಎಸ್ಎ ಕಾನೂನನ್ನು ಅನ್ವಯಿಸಲಾಗಿತ್ತು.
ಸದ್ಯ, ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಸಹಿತ ಅನೇಕ ರಾಜಕಾರಣಿಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲರೂ ಹೊರಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಅವರ ರಾಜಕೀಯ ನಡೆಗಳಿಗೆ ಸದ್ಯ ಅವಕಾಶವಿಲ್ಲ. (ಏಜೆನ್ಸೀಸ್)