

ಕೋಲ್ಕತ್ತಾ: ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವಿಷಯ ನಮಗೆಲ್ಲಾ ತಿಳಿದೆಯಿದೆ. ಹಿಂದೆಲ್ಲಾ ಓದು ಮುಗಿಯುತ್ತಿದ್ದಂತೆ ಮದುವೆ ಮಾಡಿ, ಮನೆಯಿಂದ ಗಂಡನ ಮನೆಗೆ ಕಳುಹಿಸುವ ಪ್ರಕ್ರಿಯೆ ಹೆಚ್ಚಿತ್ತು. ಆದರೆ, ಇಂದು ನಾರಿಯರ ಶಕ್ತಿ ಹೆಚ್ಚಾಗಿದ್ದು, ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣವಿದೆ. ನಾನಾ ವಿಭಾಗಗಳಲ್ಲಿ ಪುರುಷರಂತೆ ಕೆಲಸದಲ್ಲಿ ತೊಡಗಿರುವ ಮಹಿಳೆಯರು, ಮುಂದಿನ ಪೀಳಿಗೆಗೂ ಮಾದರಿಯಾಗುತ್ತಿದ್ದಾರೆ.
ಹಾಗೆ ನೋಡುವುದಾದರೆ ಇಲೊಬ್ಬರು ಮಹಿಳೆ ಎಲೆಕ್ಟ್ರಿಕಲ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದು, ತಾನು ಕೆಲಸ ಮಾಡುತ್ತಿದ್ದ ಕಂಪೆನಿ ಕೊಡುತ್ತಿದ್ದ ಸಂಬಳ ಕುಟುಂಬ ನಡೆಸಲು ಸಾಧ್ಯವಾಗುವುದಿಲ್ಲ ಎಂದು ನಿರ್ಧರಿಸಿ ಸ್ವಾವಲಂಬಿ ಆದ ಕಥೆ ನಿಜಕ್ಕೂ ಇಂದು ಅನೇಕರಿಗೆ ಸ್ಪೂರ್ತಿ ಎಂದೇ ಹೇಳಬಹುದು. ಮನೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಯೋಚಿಸುವ ಮುನ್ನವೇ ತಂದೆ ಕಳೆದುಕೊಂಡ ಈಕೆ, ತನ್ನನ್ನೇ ನಂಬಿದ್ದ ಕುಟುಂಬವನ್ನು ಮುನ್ನಡೆಸಲು ಆಯ್ದುಕೊಂಡ ಕೆಲಸವೇ ಕ್ಯಾಬ್ ಚಾಲನೆ.
ಕೋಲ್ಕತ್ತಾ ಮೂಲದ ದೀಪ್ತಾ ಘೋಷ್, ಇಂದು ಕ್ಯಾಬ್ ಡ್ರೈವರ್ ಆಗಿ ಮಹಿಳೆಯರನ್ನು ಸುರಕ್ಷಿತವಾಗಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ, ಅವರ ಹೇಳಿದ ಸ್ಥಳಕ್ಕೆ ಬಿಡುವ ಕೆಲಸದಲ್ಲಿ ಹೆಚ್ಚು ನಿರತರಾಗಿದ್ದಾರೆ ಹಾಗೂ ಈ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳು, ಸಾಮಾಜಿಕ ಒತ್ತಡಗಳ ಮಧ್ಯೆಯೇ ತನ್ನ ತಂದೆಯನ್ನು ಕಳೆದುಕೊಂಡ ದೀಪ್ತಾ, ಅವರ ಮರಣದ ಬೆನ್ನಲ್ಲೇ ಇಡೀ ಕುಟುಂಬವನ್ನು ಬೆಂಬಲಿಸಲು ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಿರ್ಧರಿಸಿದರು.
ಇದನ್ನೂ ಓದಿ: ಪಾಲಕರು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲಿ
ಎಲೆಕ್ಟ್ರಿಕಲ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ದೀಪ್ತಾ, ಆರು ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. 2020ರಲ್ಲಿ ತಂದೆ ನಿಧನರಾದ ಬಳಿಕ ಕಂಪೆನಿ ಕೊಡುವ ಸಂಬಳ ಮನೆಯನ್ನು ನಡೆಸಲು ಸಾಲುವುದಿಲ್ಲ ಎಂದು ನಿರ್ಧರಿಸಿದ ಈಕೆ, ತನ್ನ ತಾಯಿ ಮತ್ತು ಸಹೋದರಿಯನ್ನು ಒಬ್ಬಂಟಿಯಾಗಿ ಬಿಟ್ಟು, ಮನೆಯಿಂದ ಹೊರಬಂದು ಕೆಲಸ ಮಾಡುತ್ತಾರೆ.
ಇಂದು ಕ್ಯಾಬ್ ಡ್ರೈವರ್ ಆಗಿ ತಿಂಗಳಿಗೆ 40,000 ರೂ.ಗಿಂತಲೂ ಹೆಚ್ಚು ಆದಾಯ ಗಳಿಸುತ್ತಿರುವ ದೀಪ್ತಾ, ವಾರದ ಆರು ದಿನಗಳು ಪ್ರತಿದಿನ ಆರರಿಂದ ಏಳು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಸದ್ಯ ಈ ಕೆಲಸದಲ್ಲಿ ಖುಷಿ ಕಂಡುಕೊಂಡಿರುವ ದೀಪ್ತಾ ಘೋಷ್, ಇದರಲ್ಲಿ ಸ್ವಾತಂತ್ರ್ಯ ಅನುಭವಿಸುತ್ತಿದ್ದು, ಬೇರೆಯವರಿಗಾಗಿ ಕೆಲಸ ಮಾಡುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಈಕೆ ಮಾತಿಗೆ, ನಿರ್ಧಾರಕ್ಕೆ ಇಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ಹರಿದುಬಂದಿದೆ,(ಏಜೆನ್ಸೀಸ್).