

ಲಂಡನ್: ಸ್ನೇಹಿತರ ಬಳಿ ಬೆಟ್ಟಿಂಗ್ ಕಟ್ಟಿ ಲಾಫಿಂಗ್ ಗ್ಯಾಸ್ (ನಗುವ ಅನಿಲ) ಬಾಟಲ್ ನುಂಗಿದ ಯುವಕ ಪ್ರಾಣ ಭೀತಿಯಿಂದ ಒದ್ದಾಡಿದ ಘಟನೆ ಲಂಡನ್ನಲ್ಲಿ ನಡೆದಿದ್ದು, ಒಂದು ವೇಳೆ ಹೊಟ್ಟೆಯಲ್ಲಿ ಬಾಟಲ್ ಸಡಿಲಗೊಂಡರೆ ಜೀವ ಹೋಗುವ ಸಾಧ್ಯತೆ ಇತ್ತೆಂದು ವೈದ್ಯರು ಎಚ್ಚರಿಕೆ ನೀಡಿದ್ದರು.
ಜಾನ್ ಫಿನ್ಸನ್ ಎಂಬಾತ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಈ ಸಂದರ್ಭದಲ್ಲಿ ತನ್ನ ಸ್ನೇಹಿತರೊಂದಿಗೆ ಬೆಟ್ ಕಟ್ಟಿ ಪೂರ್ತಿ ಬಾಟಲ್ ನುಂಗಿದ್ದಾನೆ. ಇದಾದ ಬೆನ್ನಲ್ಲೇ ಆತನ ಮತ್ತೊಬ್ಬ ಸ್ನೇಹಿತ, ನಿನ್ನ ಆರೋಗ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ ವೈದ್ಯರ ಬಳಿ ಪರೀಕ್ಷಿಸು ಎಂದು ಎಚ್ಚರಿಸಿದ ಬೆನ್ನಲ್ಲೇ 22 ವರ್ಷದ ಜಾನ್, ನಡೆದ ಘಟನೆಯನ್ನು ವೈದ್ಯರ ಬಳಿ ವಿವರಿಸಿದ್ದಾನೆ.
ಇದಾದ ಬಳಿಕ ವೈದ್ಯರು ಎಕ್ಸ್ರೇ ತೆಗೆದು ನೋಡಿದಾಗ ಬಾಟಲ್ ಯುವಕನ ಹಟ್ಟೆಯ ತಳಭಾಗದಲ್ಲಿ ಸೇರಿರುವುದು ಪತ್ತೆಯಾಗುತ್ತದೆ. ಒಂದು ವೇಳೆ ಬಾಟಲ್ನಲ್ಲಿನ ಅನಿಲವು ಸೋರಿಕೆಯಾದರೆ ಜೀವಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತ ವೈದ್ಯರು, ಶ್ವಾಸನಾಳದ ತಜ್ಞರಿಗೆ ಕರೆ ಮಾಡುತ್ತಾರೆ. ಆಪರೇಷನ್ ಮಾಡುವವರೆಗೂ ಏನನ್ನು ತಿನ್ನಬಾರದು ಹಾಗೂ ಕುಡಿಯಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿರುತ್ತಾರೆ.
ಯುವಕನ ಅದೃಷ್ಟ ಚೆನ್ನಾಗಿತ್ತು ಎಂದು ಕಾಣುತ್ತದೆ. ಬಾಟಲನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಆದರೆ, ಎಚ್ಚರಿಸಿದ ವೈದ್ಯರು ಇಂತಹ ಪ್ರಕರಣ ಹಸುಗಳಲ್ಲಿ ಮಾತ್ರ ಕಂಡಬಂದಿದೆ. ಯಾವುದೇ ಕಾರಣಕ್ಕೂ ಮುಂದೊಮ್ಮೆ ಈ ರೀತಿ ಮಾಡಬೇಡ ಎಂದು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಫಿನ್ಶನ್, ನಾನು ಏನು ಮಾಡಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇಲ್ಲ. ಹಾಗೇ ನನ್ನನ್ನು ಅನುಸರಿಸುವಂತೆ ಯಾರಿಗೂ ಹೇಳುವುದಿಲ್ಲ ಎಂದಿದ್ದಾನೆ. ಅಂದಹಾಗೆ ಗುರುತನ್ನು ಮುಚ್ಚಿಡಲು ಫಿನ್ಶನ್ ಎಂದು ಹೆಸರು ಬದಲಿಸಲಾಗಿದೆ. (ಏಜೆನ್ಸೀಸ್)