

ಚಿಕ್ಕೋಡಿ: ಬೆಳಗಾವಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಆಕೆಯ ಇಬ್ಬರು ಸಹಪಾಠಿಗಳು ಹಾಗೂ ಅವರ ಸ್ನೇಹಿತ ಸೇರಿ ಮದ್ಯದ ಅಮಲಿನಲ್ಲಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಸಾಂಗ್ಲಿಯ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 20 ರಿಂದ 22 ವರ್ಷದ ಪುಣೆ, ಸೋಲ್ಲಾಪುರ ಮತ್ತು ಸಾಂಗ್ಲಿಯ ಮೂವರನ್ನು ಸಾಂಗ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯವು ಮೇ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇ 18 ರ ರಾತ್ರಿ 10 ಗಂಟೆ ಸುಮಾರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ತೆರಳಿದ್ದ ವೇಳೆ ಆಕೆಯನ್ನು ಅಪಾರ್ಟ್ವೆುಂಟ್ಗೆ ಸಹಪಾಠಿಗಳು ಕರೆದೊಯ್ದಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಆಕೆಗೂ ಮದ್ಯ ಕುಡಿಸಿ ನಂತರ ದೌರ್ಜನ್ಯ ಎಸಗಿದ್ದಾರೆ. ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಆದರೆ, ಸಂತ್ರಸ್ತೆ ಧೈರ್ಯ ಮಾಡಿ ಪಾಲಕರಿಗೆ ಘಟನೆ ಬಗ್ಗೆ ವಿವರಿಸಿದ್ದಾಳೆ. ಅಲ್ಲದೆ, ಕುಟುಂಬಸ್ಥರೊಂದಿಗೆ ಸಾಂಗ್ಲಿಯ ವಿಶ್ರಂಬಾಗ್ ಪೊಲೀಸ್ ಠಾಣೆ ಆಗಮಿಸಿ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.