

| ಎನ್.ಎಲ್.ಶಿವಮಾದು ಬೆಂಗಳೂರು
ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಸೀಟು ಹಂಚಿಕೆ ದಿನಾಂಕ ನಿಗದಿಯಾಗಿದ್ದರೂ, ರಾಜ್ಯದಲ್ಲಿ ಈವರೆಗೆ ಶುಲ್ಕ ನಿಗದಿಯಾಗದಿರುವುದು ಕೋರ್ಸ್ ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್-2023ರಲ್ಲಿ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಜು.20ರಿಂದ ಆರಂಭವಾಗ ಲಿದೆ. ಜು.29ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ರಾಜ್ಯದಲ್ಲಿ 2023-24ನೇ ವರ್ಷದಲ್ಲಿ ಎಂಬಿಬಿಎಸ್ ಕೋರ್ಸ್ಗೆ ವ್ಯಾಸಂಗ ಮಾಡಲು ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದ ಮೊತ್ತವೆಷ್ಟು ಮತ್ತು ರಾಜ್ಯದಲ್ಲಿ ಎಷ್ಟು ಸೀಟುಗಳು (ಸೀಟ್ ಮ್ಯಾಟ್ರಿಕ್ಸ್) ದೊರೆಯಲಿವೆ ಎಂಬ ಮಾಹಿತಿ ಇನ್ನೂ ನಿಖರವಾಗಿ ತಿಳಿದಿಲ್ಲ. ನೀಟ್ ಫಲಿತಾಂಶ ಪ್ರಕಟವಾಗಿ ತಿಂಗಳಾಗಿದೆ. ಅಲ್ಲಿಂದ ಈವರೆಗೆ ಸಭೆ ನಿಗದಿ ಮಾಡದೆ ಸರ್ಕಾರವು ಕಾಲಹರಣ ಮಾಡುತ್ತಿದೆ. ಇದರ ಪರಿಣಾಮವನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.
ವಿದ್ಯಾರ್ಥಿಗಳ ಆತಂಕವೇನು?: ರಾಜ್ಯದಲ್ಲಿ ಶುಲ್ಕ ನಿಗದಿಯಾದರೆ, ತಮಗೆ ಹಣ ಹೊಂದಿಸಿಕೊಳ್ಳಲು ಸಾಧ್ಯವಾಗಲಿದೆ. ಒಂದು ವೇಳೆ ಕೊನೇ ಘಳಿಗೆಯಲ್ಲಿ ಶುಲ್ಕ ಹೆಚ್ಚಳ ಮಾಡಿದರೆ ಹಣ ಹೊಂದಿಸಲು ಪರದಾಡಬೇಕಾಗುತ್ತದೆ. ಶುಲ್ಕ ಹೆಚ್ಚಳವಾದರೆ, ಮೆಡಿಕಲ್ ಬಿಟ್ಟು ಇಂಜಿನಿಯರಿಂಗ್ ಕೋರ್ಸ್ ಮಾಡಬಹುದು. ಮಾಡದಿದ್ದರೆ, ಮೆಡಿಕಲ್ ಕೋರ್ಸ್ ಆಸೆ ಜೀವಂತವಾಗಿ ಉಳಿಸಿಕೊಳ್ಳಬಹುದು ಎಂದು ವೈದ್ಯಕೀಯ ವಿದ್ಯಾರ್ಥಿಗಳ ಆಗ್ರಹವಾಗಿದೆ. ಕಳೆದ ವರ್ಷ ಧಾರ್ವಿುಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಿಗೆ ಶೇ.10 ಶುಲ್ಕ ಹೆಚ್ಚಳ ಮಾಡಿತ್ತು. ಉಳಿದ ಕಾಲೇಜುಗಳಿಗೆ ಮಾಡಿರಲಿಲ್ಲ. ಹೀಗಾಗಿ, ಆದಷ್ಟು ಬೇಗ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುಂದಿನ 8-10 ದಿನಗಳಲ್ಲಿ ಶುಲ್ಕ ನಿಗದಿ ವಿಚಾರವನ್ನು ಸ್ಪಷ್ಟಪಡಿಸಲಾಗುವುದು. ಹಿಂದಿನ ವರ್ಷಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ತಿಳಿದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. | ಡಾ. ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಸರ್ಕಾರವು ಶುಲ್ಕ ನಿಗದಿ ಸಂಬಂಧಿಸಿದಂತೆ ಇನ್ನೂ ಸಭೆ ಕರೆದಿಲ್ಲ. ಸರ್ಕಾರ ಚರ್ಚೆಗೆ ಕರೆದ ನಂತರ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗುತ್ತದೆ. | ಎಂ.ಆರ್. ಜಯರಾಂ, ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘದ ಕಾರ್ಯದರ್ಶಿ
ಅಂದಾಜು 11,400 ಸೀಟುಗಳು ಲಭ್ಯ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ದತ್ತಾಂಶಗಳ ಪ್ರಕಾರ ಈವರೆಗೆ ವಿವಿಧ ಕಾಲೇಜುಗಳು ನೀಡಿರುವ ಪಟ್ಟಿ ಅನ್ವಯ ರಾಜ್ಯದಲ್ಲಿ 11,320 ಸೀಟುಗಳು ಲಭ್ಯವಿದೆ. ಪ್ರಸಕ್ತ ವರ್ಷ ಒಟ್ಟಾರೆ 375 ಸೀಟುಗಳು ಹೆಚ್ಚುವರಿಯಾಗಿ ದೊರೆಯಲಿವೆ. ಚನ್ನಪಟ್ಟಣದ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ತಲಾ 150, ಚಿಕ್ಕಬಳ್ಳಾಫುರದ ಸತ್ಯಸಾಯಿ ಆಸ್ಪತ್ರೆಯಲ್ಲಿ 50 ಹಾಗೂ ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ 25 ಸೀಟುಗಳು ಲಭ್ಯವಾಗಲಿವೆ.