

ಬೀರೂರು: ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯನ್ನು ಬೀರೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಬಳ್ಳಾರಿ ಕ್ಯಾಂಪ್‌ನ ಮಕ್ಕಾ ಮಸೀದಿ, ಬಳೆಗಾರರ ಬೀದಿಯ ಅಂಜುಮಾನ್ ಮೊಹಲ್ಲಾ, ಹಾಲಪ್ಪ ಬಡಾವಣೆಯ ಮದೀನ ಮಸೀದಿ ಹಾಗೂ ಹಳೇಪೇಟೆಯ ಜಾಮಿಯ ಮಸೀದಿಯಿಂದ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಮುಸ್ಲಿಮರು ಒಟ್ಟಾಗಿ ಆಗಮಿಸಿದರು. ಮೆಕ್ಕಾ ಮತ್ತು ಮದೀನಾ ಮಸೀದಿಗಳ ಪ್ರತಿಕೃತಿಗಳನ್ನು ಮೆರವಣಿಗೆ ನಡೆಸಿದರು.
ಮದರಸಾ ಮಕ್ಕಳಿಂದ ಪ್ರವಾದಿ ಕುರಿತ ಗೀತೆಗಳು, ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆರವಣಿಗೆ ವೇಳೆ ಏರ್ಪಡಿಸಲಾಗಿತ್ತು. ಪ್ರವಾದಿ ಜೀವನ ಸಂದೇಶ ಸಾರಲಾಯಿತು. ಮಸೀದಿಗಳಲ್ಲಿ ಸಾಮೂಹಿಕ ಅನ್ನಸಂತರ್ಪಣೆ, ಪ್ರಾರ್ಥನೆ ಸಲ್ಲಿಸಲಾಯಿತು. ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.