ಮಾರುಕಟ್ಟೆಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ

market
ಆಯನೂರು ಸಂತೆ ಮಾರುಕಟ್ಟೆಯಲ್ಲಿ ಜನದಟ್ಟಣೆ ನಿಯಂತ್ರಿಸಲು ಕೋಹಳ್ಳಿ ಪಿಡಿಒ ರುದ್ರಸ್ವಾಮಿ ನೇತೃತ್ವದಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುತ್ತಿರುವುದು.
Published on

ಆಯನೂರು: ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕಾಗಿ ಕಟ್ಟೆಗಳನ್ನು ನಿರ್ಮಿಸಿದ್ದರೂ ರಸ್ತೆಗಳಲ್ಲಿಯೇ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಅಧಿಕಾರಿಗಳು ಚುರುಕುಮುಟ್ಟಿಸಿದ್ದಾರೆ. ಕೋಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರುದ್ರಸ್ವಾಮಿ ನೇತೃತ್ವದಲ್ಲಿ ಸಂತೆ ಮಾರುಕಟ್ಟೆಯ ರಸ್ತೆಗಳಿಗೆ ಗೆರೆಗಳನ್ನು ಎಳೆದು ವ್ಯಾಪಾರಕ್ಕೆ ನಿರ್ದಿಷ್ಟ ಸ್ಥಳ ನಿಗದಿ ಮಾಡಲಾಯಿತು.

ಆಯನೂರು ಸೇರಿ ಸುತ್ತಲಿನ ಹಳ್ಳಿಗಳಿಂದ ಸಾವಿರಾರು ಜನ ಸೇರುತ್ತಾರೆ. ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದರಿಂದ ಗ್ರಾಹಕರಿಗೆ ಸಂಚರಿಸಲು ಹಾಗೂ ವ್ಯಾಪಾರ ವಹಿವಾಟು ನಡೆಸಲು ಅನನುಕೂಲವಾಗಿತ್ತು.
ಇಕ್ಕಟ್ಟಿನ ಸ್ಥಳದಲ್ಲಿ ವಹಿವಾಟು ನಡೆಸುವುದೇ ಕಷ್ಟವಾಗಿತ್ತು. ಜತೆಗೆ ಮಾರುಕಟ್ಟೆಯಲ್ಲಿ ಪ್ರತಿವಾರವೂ ಮೊಬೈಲ್ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಹಾಗಾಗಿ ಹಲವಾರು ಬಾರಿ ವ್ಯಾಪಾರಸ್ಥರನ್ನು ಕರೆಸಿ ಹೇಳಿದ್ದರೂ ಪ್ರಯೋಜನ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ 5 ಬೀದಿಗಳಿದ್ದು ಜನದಟ್ಟಣೆ ಹೆಚ್ಚಾಗಿರುವ ಪ್ರಮುಖ 2 ಬೀದಿಗಳಲ್ಲಿ ಮೂರ‌್ನಾಲ್ಕು ಅಡಿಗಳಷ್ಟು ಜಾಗ ಬಿಟ್ಟು ರಸ್ತೆಯ 2 ಕಡೆಗಳಲ್ಲಿ ಪಂಚಾಯಿತಿ ಅಧಿಕಾರಿಗಳು ಗೆರೆಗಳನ್ನು ಎಳೆದು ವ್ಯಾಪಾರಕ್ಕಾಗಿ ಸ್ಥಳ ನಿಗದಿ ಮಾಡಿದರು. ಇದೇ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಯಿತು.
ಮಾರುಕಟ್ಟೆ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದುದರಿಂದ ಜನರಿಂದ ದೂರು ಬಂದಿತ್ತು. ಮಾರುಕಟ್ಟೆಯಲ್ಲಿ ಹಲವಾರು ಕಟ್ಟೆಗಳನ್ನು ನಿರ್ಮಿಸಿದ್ದರೂ ವ್ಯಾಪಾರಿಗಳು ಅಲ್ಲಿ ಅಂಗಡಿಯನ್ನು ಹಾಕುತ್ತಿರಲಿಲ್ಲ. ಹೀಗಾಗಿ ಚರಂಡಿಯಿಂದ 3 ರಿಂದ 4 ಅಡಿಯಷ್ಟು ಜಾಗ ಬಿಟ್ಟು ಗೆರೆಗಳನ್ನು ಎಳೆದಿದ್ದೇವೆ. ಇದರಿಂದ ಜನದಟ್ಟಣೆ ಹಾಗೂ ಕಳ್ಳತನ ತಡೆಗಟ್ಟಬಹುದು. ಮುಂದಿನ ದಿನಗಳಲ್ಲಿ ಗೆರೆ ದಾಟಿ ಬರುವಂತಹ ವ್ಯಾಪಾರಸ್ಥರಿಗೆ ದಂಡ ಹಾಕಲಾಗುವುದು ಎಂದು ಕೋಹಳ್ಳಿ ಪಿಡಿಒ ರುದ್ರಸ್ವಾಮಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net