

ರಾಯ್ಪುರ: 2024-25ರ ಶೈಕ್ಷಣಿಕ ವರ್ಷದಿಂದ ಹಿಂದಿ ಭಾಷೆಯಲ್ಲೇ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್‌ಗಳನ್ನು ಪಡೆಯಬಹುದು ಎಂದು ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಹೇಳಿದ್ದಾರೆ. ಹಿಂದಿ ದಿವಸ್ ದಿನದಂದು ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2022ರಲ್ಲಿ ಉತ್ತರ ಪ್ರದೇಶದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಿದ್ದ ಮಾತನ್ನು ಇಂದು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ
ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯ ಹಿನ್ನೆಲೆ ಇದೀಗ ಛತ್ತೀಸ್ಗಢದಲ್ಲಿ ಎಂಬಿಬಿಎಸ್ ಕೋರ್ಸ್‌ಗಳನ್ನು ಹಿಂದಿಯಲ್ಲಿ ಪಡೆಯುವ ಅವಕಾಶವನ್ನು ಜಾರಿಗೊಳಿಸಲಾಗಿದೆ. "ಹಳೆಯ ಮೆಕಾಲೆ ಸಾಮ್ರಾಜ್ಯಶಾಹಿ ಶಿಕ್ಷಣ ನೀತಿಯಿಂದ ಪ್ರತಿ ಹಂತದಲ್ಲೂ ನಮ್ಮ ಶಿಕ್ಷಣ ನೀತಿಯನ್ನು ಬದಲಾಯಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿದೆ" ಎಂದು ಸಿಎಂ ಹೇಳಿದರು.
"ಹಿಂದಿ ದಿವಸ್ ಕುರಿತು ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಎಂಬಿಬಿಎಸ್ ಕೋರ್ಸ್ ಅನ್ನು ಈಗ ಹಿಂದಿಯಲ್ಲೂ ಕಲಿಸಲಾಗುವುದು. ಈ ಅಧಿವೇಶನದಿಂದ ಮೊದಲ ವರ್ಷದಲ್ಲಿ ಹಿಂದಿ ಪುಸ್ತಕಗಳನ್ನು ಪರಿಚಯಿಸಲಾಗುವುದು. (2024-25) ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಲು ಈಗಾಗಲೇ ಆರೋಗ್ಯ ಇಲಾಖೆಗೆ ತಿಳಿಸಿದ್ದೇವೆ" ಎಂದರು.
ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳಿಗಾಗಿ ಎರಡು ತಾಸು ಕಾದ ಶಾಸಕ
"ಈ ಕ್ರಮವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ಒದಗಿಸುತ್ತದೆ. ಏಕೆಂದರೆ ಅವರು ಹೆಚ್ಚಾಗಿ ಹಿಂದಿ ಮಾಧ್ಯಮ ಶಾಲೆಗಳಿಂದ ಬರುತ್ತಾರೆ. ಇಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯಿಂದಾಗಿ ತಾವು ಪ್ರತಿಭಾವಂತರಾಗಿದ್ದರೂ ಸಹ ವೈದ್ಯಕೀಯ ಕೋರ್ಸ್‌ಗಳಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಾರೆ. ಹಿಂದಿಯಲ್ಲಿ ಅಧ್ಯಯನ ಮಾಡುವುದು ಅವರ ಮೂಲಭೂತ ಅಂಶಗಳನ್ನು ಬಲಪಡಿಸುತ್ತದೆ ಹಾಗೂ ಅವರಿಗೆ ಆಳವಾದ ತಿಳುವಳಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದು ಅವರು ಮುಂದಿನ ದಿನಗಳಲ್ಲಿ ಉತ್ತಮ ವೈದ್ಯರಾಗಿ ಹೊರಹೊಮ್ಮಲು ಕಾರಣವಾಗುತ್ತದೆ" ಎಂದು ಸಿಎಂ ತಿಳಿಸಿದ್ದಾರೆ,(ಏಜೆನ್ಸೀಸ್).