ಗೌತಿ ನನ್ನ ಸ್ನೇಹಿತ ಅಲ್ಲವೇ ಅಲ್ಲ! ಟೀಮ್ ಇಂಡಿಯಾ ಹೆಡ್​ ಕೋಚ್​ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಆಟಗಾರ

ವಿಜಯವಾಣಿ - 2024-09-15T163535.749
Published on

ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ ಗೆದ್ದ ಭಾರತ ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ರಾಹುಲ್ ದ್ರಾವಿಡ್​, ತಮ್ಮ ಹೆಡ್​ ಕೋಚ್ ಸ್ಥಾನಕ್ಕೆ ನಿವೃತ್ತಿ ಘೋಷಿಸಿ, ಕ್ಯಾಪ್ಟನ್ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾಗೆ ಪ್ರೀತಿಯ ಅಪ್ಪುಗೆ ಕೊಟ್ಟು ಹೊರಬಂದರು. ರಾಹುಲ್ ನಿರ್ಗಮನದ ಬೆನ್ನಲ್ಲೇ ಅವರ ಸ್ಥಾನಕ್ಕೆ ಬಂದ ಮಾಜಿ ಬ್ಯಾಟರ್​ ಗೌತಮ್ ಗಂಭೀರ್​, ಭಾರತ ಪುರುಷ ಕ್ರಿಕೆಟ್ ಟೀಮ್​ನ ನೂತನ ಹೆಡ್​ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಗೌತಿ ಮುಂದಾಳತ್ವದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೂರ್ನಿಯಲ್ಲಿ ಟಿ20 ಸರಣಿ ಗೆದ್ದ ಭಾರತ, ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲಗೊಂಡಿತು. ಸದ್ಯ ಕ್ರಿಕೆಟ್ ಜತೆ ಜತೆಗೆ ಇತರರೊಂದಿಗೆ ಗಂಭೀರ್​ ಹೊಂದಿರುವ ಬಾಂಧವ್ಯದ ಬಗ್ಗೆಯೂ ಸದ್ಯ ಸಾಕಷ್ಟು ವಿಷಯಗಳು ಇದೀಗ ಮುನ್ನೆಲೆಗೆ ಬರುತ್ತಿವೆ.

ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ಗೌತಮ್ ಗಂಭೀರ್​ ಬಗ್ಗೆ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ, "ಗೌತಿ ಒಬ್ಬ ಮುಂಗೋಪಿ. ಆರಂಭದಿಂದಲೂ ಅವರು ಗೆಲ್ಲುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಹೊರತು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮೊದಲ ದಿನದಿಂದಲೂ ಗಂಭೀರ್​ ತಮ್ಮ ಯಶಸ್ಸಿಗಾಗಿ ಬಹಳ ಶ್ರಮಪಟ್ಟಿದ್ದಾರೆ. ತಂಡದಲ್ಲಿ ನಾವು ಒಂದು ಸ್ಥಾನ ಪಡೆದಾಗ ಅಲ್ಲಿ ಪೈಪೋಟಿ ಇತ್ತೇ ವಿನಃ ಸ್ನೇಹವಲ್ಲ. ಗೌತಿ ನನ್ನ ಸ್ನೇಹಿತ ಅನ್ನೋದಕ್ಕಿಂತ ಒಬ್ಬ ಪ್ರತಿಸ್ಪರ್ಧಿ ಎಂದು ಹೇಳ್ತೀನಿ" ಎಂದು ಹೇಳಿದರು.


"ಒಂದು ಸ್ಥಾನಕ್ಕಾಗಿ ನಾವು ಪ್ರತಿಸ್ಪರ್ಧಿಯಾಗಿ ತಂಡದಲ್ಲಿದ್ದೆವು. ನಮ್ಮ ಟೀಮ್ ಪೂರ ಪಂದ್ಯ ಗೆಲ್ಲುವಂತ ಆಟಗಾರರಿಂದಲೇ ಕೂಡಿತ್ತು. ಅಲ್ಲಿ ವೀರೇಂದ್ರ ಸೆಹ್ವಾಗ್ ಅವರಿಗೆ ಓಪನಿಂಗ್ ಮಾಡಲು ಅವಕಾಶವಿರಲಿಲ್ಲ. ಅಂತಹ ಒಂದು ಪರಿಸ್ಥಿತಿ ಅಂದು ಎದುರಾಗಿತ್ತು. ಆರಂಭಿಕರಾಗಿ ಬರಲು ಸಾಧ್ಯವಾಗದಿದ್ದಾಗ ವೀರು ನಾಲ್ಕನೆ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದದ್ದು ಉಂಟು. ಶಿಖರ್​ ಧವನ್​ ಮತ್ತು ವಿರಾಟ್​ ಕೊಹ್ಲಿ ಆಗ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕಾರಣ ಅವರು ಈ ಸ್ಥಾನಕ್ಕೆ ಜಿಗಿದರು" ಎಂದರು.

"ನಮ್ಮ ಕರಿಯರ್​ ಶುರುವಿನಲ್ಲಿ ನನ್ನ ಮತ್ತು ಗಂಭೀರ್ ನಡುವೆ ಸ್ನೇಹ ಸಂಬಂಧ ಬೆಳೆಯಲಿಲ್ಲ. ಕೋಪ ಕಳೆದುಕೊಂಡರು ತಂಡಕ್ಕೆ ರನ್​ ಕಲೆಹಾಕುವಲ್ಲಿ ಮಾತ್ರ ಗೌತಿ ಎಂದು ಎಡವಿಲ್ಲ" ಎಂದು ಆಕಾಶ್ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net