

ಬೆಂಗಳೂರು: ಸೆಪ್ಟಂಬರ್ 11 ರಂದು ಖಾಸಗಿ ವಾಹನಗಳ ಒಕ್ಕೂಟಗಳು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು, ರಾಜಧಾನಿಯಲ್ಲಿ ಮುಷ್ಕರದ ಕಾವು ಜನಸಾಮಾನ್ಯರ ಮೇಲೆ ಭಾರೀ ಪ್ರಭಾವ ಬೀರಿದೆ. ಈ ವೇಳೆ ಉದ್ದೇಶಪೂರ್ವಕವಾಗಿ ಸ್ಟ್ರೈಕ್ ಮಾಡಿಸುತ್ತಿರುವವರ ವಿರುದ್ಧ ಕಠಿಣ ಶಿಕ್ಷೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
"ಖಾಸಗಿ ಒಕ್ಕೂಟಗಳು ಇಂದು ಮುಷ್ಕರ ನಡೆಸುತ್ತಿದೆ. ಆದ್ರೆ, ಈ ಮಧ್ಯೆ ಕೆಲ ಕಿಡಗೇಡಿಗಳು ಬಲವಂತವಾಗಿ ಬಂದ್ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂತವರ ವಿರುದ್ಧ ಕಠಿಣ ಶಿಕ್ಷೆ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.
"ನಮ್ಮ ಸರ್ಕಾರ ಯಾವಗಲೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದೆ. ಇದನ್ನು ಮಾತುಕತೆಯಲ್ಲಿ ಪರಿಹರಿಸಿಕೊಳ್ಳಬೇಕು. ಈ ಬಗ್ಗೆ ನಾನು ಕೂಡ ವಿನಂತಿ ಮಾಡುತ್ತೇನೆ. ಖಾಸಗಿ ಅಸೋಸಿಯೇಷನ್, ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೊಡನೆ ಮಾತನಾಡಲಿ. ಅವಶ್ಯಕತೆಯಿದ್ದರೆ ಸಿಎಂ ಜತೆ ಕೂಡ ಮಾತಾಡಿಸುತ್ತೇವೆ. ಈ ರೀತಿ ಪ್ರತಿಭಟನೆ ಮಾಡುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ" ಎಂದು ಹೇಳಿದರು.