ಬಿರಿಯಾನಿ ಜತೆ ಹೆಚ್ಚು ಮೊಸರು ಕೇಳಿದ್ದಕ್ಕೆ ಥಳಿಸಿದ ಹೋಟೆಲ್ ಸಿಬ್ಬಂದಿ; ವ್ಯಕ್ತಿ ಸಾವು

curd
Published on

ಹೈದರಾಬಾದ್: ವ್ಯಕ್ತಿಯೊಬ್ಬ ಬಿರಿಯಾನಿ ತಿನ್ನಲು ಹೋಟೆಲ್‌ಗೆ ತೆರಳಿದ್ದ. ಆಗ ಹೆಚ್ಚು ಮೊಸರು ತರುವಂತೆ ಸಿಬ್ಬಂದಿಯನ್ನು ಕೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ಹೆಚ್ಚಾದಂತೆ ಸಿಬ್ಬಂದಿಗಳೆಲ್ಲ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿಗೆ ಹೋದ ನಂತರ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ

ಚಂದ್ರಯ್ಯನಗುಟ್ಟದ ಲಿಯಾಕತ್ ಎಂಬ ವ್ಯಕ್ತಿ ಸ್ಥಳೀಯ ಹೋಟೆಲ್‌ಗೆ ಬಿರಿಯಾನಿ ತಿನ್ನಲು ಹೋಗಿದ್ದ. ಅಲ್ಲಿ ಬಿರಿಯಾನಿ ಆರ್ಡರ್ ಮಾಡಿ ತಿಂದರು. ಆದರೆ ಸಾಕಷ್ಟು ಮೊಸರು ಇಲ್ಲದ ಕಾರಣ ಹೆಚ್ಚು ಮೊಸರು ನೀಡುವಂತೆ ಸಿಬ್ಬಂದಿಗೆ ಕೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ. ಆದರೆ, ಸ್ಥಳೀಯರ ನೆರವಿನಿಂದ ಪೊಲೀಸರು ಮಾರಾಮಾರಿ ನಡೆಯುತ್ತಿರುವುದನ್ನು ತಿಳಿದು ಹೋಟೆಲ್‌ಗೆ ತಲುಪಿದ್ದಾರೆ. ಲಿಯಾಖತ್ ಜತೆಗೆ ಹೋಟೆಲ್ ಸಿಬ್ಬಂದಿಯನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಲಿಯಾಕತ್ ಮೂರ್ಛೆ ಹೋದರು. ತಕ್ಷಣ ಪೊಲೀಸರು ಲಿಯಾಖತ್ ಅವರನ್ನು ಸ್ಥಳೀಯ ಡೆಕ್ಕನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಲಿಯಾಖತ್ ಮೃತಪಟ್ಟಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಿಯಾಖತ್ ಶವವನ್ನು ಗಾಂಧಿ ಶವಾಗಾರಕ್ಕೆ ರವಾನಿಸಿ, ಲಿಯಾಖತ್ ಕುಟುಂಬ ಸದಸ್ಯರಿಗೆ ಹಾಗೂ ಆತನ ಸ್ನೇಹಿತರಿಗೆ ಮಾಹಿತಿ ನೀಡಲಾಗಿದೆ.

ಲಿಯಾಖತ್ ಸ್ನೇಹಿತರು, ಹಲ್ಲೆ ನಡೆಸಿದ ಬಳಿಕ ಲಿಯಾಖತ್ ನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಠಾಣೆಗೆ ಕರೆದೊಯ್ದ ಬಳಿಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹಾಗೂ ಹೋಟೆಲ್ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯ ತಿಳಿದ ಎಂಐಎಂ ಎಂಎಲ್ಸಿ ಮಿರ್ಜಾ ರೆಹಮತ್ ಬೇಗ್ ಅವರು ಪಂಜಗುಟ್ಟ ಪೊಲೀಸ್ ಠಾಣೆಗೆ ಬಂದು ಘಟನೆಯ ವಿವರ ಪಡೆದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಹಾಗೆಯೇ ಲಿಯಾಖತ್ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು

ಚಿಕನ್ ಪಕೋಡ ತುಂಬಾ ಖಾರವಾಗಿದೆ ಎಂದಿದ್ದಕ್ಕೆ ಗ್ರಾಹಕನ ಮೇಲೆ ಹೋಟೆಲ್ ಮ್ಯಾನೇಜರ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹೈದರಾಬಾದ್‌ನ ಕೆಪಿಎಚ್‌ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಪಿಎಚ್‌ಬಿ ಕಾಲನಿಯಲ್ಲಿ ವಾಸವಿರುವ ನಾಗಾರ್ಜುನ ಜೆಎಸ್ ಚಿಕನ್ ಪಕೋಡ ಕೇಂದ್ರಕ್ಕೆ ತೆರಳಿದ್ದರು. ಚಿಕನ್ ಬಾಯಿಗೆ ಹಾಕಿಕೊಂಡ ತಕ್ಷಣ ತುಂಬಾ ಖಾರವಾಗಿದೆ ಎಂದು ಹೋಟೆಲ್ ಮ್ಯಾನೇಜರ್ ಗೆ ತಿಳಿಸಿದರು. ಇದರಿಂದ ತೀವ್ರ ಸಿಟ್ಟಿಗೆದ್ದ ಹೊಟೇಲ್ ಮ್ಯಾನೇಜರ್ ಜೀವನ್, ‘ತಿಂದರೆ ತಿನ್ನಿ ಇಲ್ಲವೇ ಬಿಟ್ಟುಬಿಡಿ’ ಎಂದು ಗದರಿಸಿದ್ದರು. ಆಗ ನಾಗಾರ್ಜುನ ವಾಗ್ವಾದ ಆರಂಭಿಸಿದರು. ನಂತರ ಜೀವನ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ನಾಗಾರ್ಜುನ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಆತನ ಸ್ನೇಹಿತ ಪ್ರಣೀತ್ ತಡೆಯಲು ಹೋಗಿದ್ದಾರೆ. ದುರಾದೃಷ್ಟವಶಾತ್ ಪ್ರಣೀತ್ ಕೈ ಮುರಿದು, ತೀವ್ರವಾಗಿ ಗಾಯಗೊಂಡಿದ್ದಾರೆ. ವಿಷಯ ಗಮನಿಸಿದ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತ ಪ್ರಣೀತ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net