

ಬೆಂಗಳೂರು: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ (ಏಳನೇ ಹಂತ) ಜೂನ್ 02ರಂದು ಕೊನೆಗೊಂಡಿದ್ದು, ಮತದಾನ ಮುಗಿದ ಕೆಲವೇ ಕ್ಷಣಗಳಲ್ಲಿ ಹಲವು ಮಾಧ್ಯಮಗಳು ಎಕ್ಸಿಟ್ ಪೋಲ್ ವರದಿಗಳನ್ನು ಬಿತ್ತರಿಸಿವೆ. ಇತ್ತ ಎಕ್ಸಿಟ್ ಪೋಲ್ ವರದಿ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಎಂಬಿಪಿ, ಎಕ್ಇಸಟ್ ಪೋಲ್ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ಈ ಬಾರಿ ಬಿಜೆಪಿ ತನ್ನ ಸ್ವಂತ ಬಲದಿಂದ 275 ಸ್ಥಾನಗಳನ್ನೂ ಗೆಲ್ಲುವುದು ಡೌಟ್ ಎಂದು ಹೇಳಿದ್ದಾರೆ.
2019ರ ಚುನಾವಣೆಯಲ್ಲಿ ಪುಲ್ವಾಮಾ ದಾಳಿ, ಬಾಲಾಕೋಟ್ ಏರ್‌ಸ್ಟ್ರೈಕ್ ಇವೆಲ್ಲವೂ ರಾಷ್ಟ್ರೀಯತೆಯ ಭಾವನೆ ಬಿತ್ತಿತ್ತು. ದೇಶಕ್ಕೆ ಗಂಡಾಂತರ ಬರಬಾರದು ಅನ್ನೋ ಕಾರಣಕ್ಕೆ ಎಲ್ಲರೂ ಬಿಜೆಪಿ ಪರವಾಗಿದ್ದರು. ಆದ್ದರಿಂದ ಬಿಜೆಪಿ ಗೆದ್ದಿತ್ತು. 2024ರ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲವೇ ಇಲ್ಲ, ಆರ್‌ಎಸ್‌ಎಸ್ ಕೂಡ ಅಷ್ಟೊಂದು ದೊಡ್ಡಮಟ್ಟದ ಪ್ರಚಾರ ಮಾಡಿಲ್ಲ. ಎನ್‌ಆರ್‌ಐ ಸಮುದಾಯಗಳೂ ಸಹ ಮೋದಿ ಪರವಾಗಿ ಅಷ್ಟೊಂದು ಪ್ರಚಾರ ಮಾಡಿಲ್ಲ.
ಬಿಜೆಪಿ ಕಳೆದ ಬಾರಿ 303 ಸ್ಥಾನಗಳನ್ನ ಪಡೆದುಕೊಂಡಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ 15 ರಿಂದ 20 ಸ್ಥಾನಗಳು, ಕರ್ನಾಟಕದಲ್ಲಿ 13 ಸ್ಥಾನ ಕಳೆದುಕೊಳ್ತಾರೆ. ಮಹಾರಾಷ್ಟ್ರದಲ್ಲಿ 15 ಸ್ಥಾನಗಳು ಸೇರಿ 60-70 ಸ್ಥಾನಗಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಬಿಜೆಪಿ ಗೆಲ್ಲುವುದು ಹೇಗೆ ಆಗುತ್ತದೆ. ಬಿಜೆಪಿ ಸ್ವಂತ ಬಲದಿಂದ 275 ಸ್ಥಾನಗಳನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಈ ಬಾರಿ ಇಂಡಿಯಾ ಮೈತ್ರಿಕೂಟದ ಪರವಾಗಿ ಅಲೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.