ಅಂಬೇಡ್ಕರ್ ಕುರಿತು ಅಮಿತ್ ಷಾ ಹೇಳಿಕೆ: ಡಿ.24ರಂದು ದೇಶಾದ್ಯಂತ ಪ್ರತಿಭಟನೆಗೆ ಮಾಯಾವತಿ ಕರೆ | Nationwide Protest

ವಿಜಯವಾಣಿ - 2024-12-21T125220.935
Published on

ನವದೆಹಲಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಇದೇ ಡಿಸೆಂಬರ್ 24ರಂದು ದೇಶಾದ್ಯಂತ ಪ್ರತಿಭಟನೆ (Nationwide Protest) ಹಮ್ಮಿಕೊಳ್ಳುವುದಾಗಿ ಕರೆ ನೀಡಿದ್ದಾರೆ.

"ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಕೊಟ್ಟ ಹೇಳಿಕೆ ರಾಷ್ಟ್ರದ ಜನರ ಹೃದಯಕ್ಕೆ ಘಾಸಿ ಉಂಟುಮಾಡಿದೆ. ದೇಶದ ದಲಿತರ, ವಂಚಿತ ಹಾಗೂ ಇತರ ನಿರ್ಲಕ್ಷಿತ ಜನರ ಸ್ವಾಭಿಮಾನ ಮತ್ತು ಮಾನವ ಹಕ್ಕುಗಳಿಗಾಗಿ ಅತಿಮಾನವೀಯ ಮತ್ತು ಕಲ್ಯಾಣ ಸಂವಿಧಾನದ ರೂಪದಲ್ಲಿ ಮೂಲ ಗ್ರಂಥವನ್ನು ರಚಿಸಿದ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ದೇವರಂತೆ ಪೂಜ್ಯರು. ಇಂತಹ ಮಹಾನ್ ವ್ಯಕ್ತಿಗೆ ಅಮಿತ್ ಶಾ ತೋರಿದ ಅಗೌರವ ಒಪ್ಪುವಂತದ್ದಲ್ಲ" ಎಂದಿದ್ದಾರೆ.

"ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಸಂಸತ್ತಿನಲ್ಲಿ ಶಾ ನೀಡಿದ ಹೇಳಿಕೆ ನೋವು ತಂದಿದೆ. ಗೃಹ ಸಚಿವರು ತಮ್ಮ ಹೇಳಿಕೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು. ಶಾ ಕ್ಷಮೆ ಕೇಳದೆ ಹೋದರೆ ಬಿಎಸ್‌ಪಿ ದೇಶಾದ್ಯಂತ ಪ್ರತಿಭಟಿಸುವುದು ನಿಶ್ಚಿತ. ಡಿ.24ರಂದು ರಾಷ್ಟ್ರವ್ಯಾಪಿ ಚಳವಳಿ ನಡೆಸಲು ಪಕ್ಷ ನಿರ್ಧರಿಸಿದೆ. ಅಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಪೂರ್ಣ ಶಾಂತಿಯುತವಾಗಿ ಧರಣಿ ನಡೆಸಲು ನಾವು ನಿರ್ಧರಿಸಿದ್ದೇವೆ" ಎಂದು ಮಾಯಾವತಿ ತಿಳಿಸಿದ್ದಾರೆ.

ಅಮಿತ್​ ಷಾ ಹೇಳಿದ್ದೇನು?

ಮಂಗಳವಾರ (ಡಿ.17) ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಅಮಿತ್ ಷಾ, ‘ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಹೆಸರು ಪಠಿಸುವುದು ಈಗ ವ್ಯಸನ ಆಗಿ ಬಿಟ್ಟಿದೆ. ಅಂಬೇಡ್ಕರ್ ಬದಲು 100 ಬಾರಿ ದೇವರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಕುರಿತು ನಿಮ್ಮ (ಕಾಂಗ್ರೆಸ್) ಭಾವನೆ ಏನೆಂಬುದನ್ನು ನಾನು ಹೇಳುತ್ತೇನೆ. ನೆಹರು ಅವರ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಮತ್ತು ರಾಜಾಜಿ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಇಬ್ಬರು ದಿಗ್ಗಜರ ರಾಜೀನಾಮೆ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿ.ಸಿ. ರಾಯ್ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಯಾಗಿ, ರಾಜಾಜಿ ರಾಜೀನಾಮೆ ನೀಡಿದ್ದು ನಮಗೆ ಸ್ವಲ್ಪ ನಷ್ಟ ತರಲಿದೆ. ಆದರೆ, ಅಂಬೇಡ್ಕರ್ ರಾಜೀನಾಮೆಯಿಂದ ಸಂಪುಟ ದುರ್ಬಲ ಆಗುವುದಿಲ್ಲ ಎಂದು ನೆಹರೂ ಪ್ರತಿಕ್ರಿಯಿಸಿದ್ದರು. ಆದರೆ, ಈಗ ಅಂಬೇಡ್ಕರ್​ಗೆ ದೊಡ್ಡ ಸಂಖ್ಯೆಯ ಬೆಂಬಲಿಗರು ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ಕಾರಣಕ್ಕೆ ಅಂಬೇಡ್ಕರ್ ಜಪ ಮಾಡುತ್ತಿದ್ದಾರೆ’ ಎಂದು ಅಮಿತ್ ಷಾ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಇದನ್ನು ಬುಧವಾರ ಪ್ರಸ್ತಾಪ ಮಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರಿಗೆ ಷಾ ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದರು.

ಷಾ ಸ್ಪಷ್ಟನೆ ಏನು?

ಕಾಂಗ್ರೆಸ್ ನಾನು ಹೇಳಿದ ಸತ್ಯವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಸಂವಿಧಾನ ವಿರೋಧಿ ಪಕ್ಷವು ತನ್ನ ಟೀಕೆಗಳನ್ನು ತಪ್ಪಾಗಿ ಪಸ್ತುತಪಡಿಸುತ್ತಿದೆ. ನನ್ನ ವಿರುದ್ಧ ಸಮಾಜದಲ್ಲಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಷಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net