

IPhone: ತಮಿಳಿನ ಪಾಲಯತಮ್ಮನ್' ಸಿನಿಮಾದಲ್ಲಿ ಮಹಿಳೆ ತನ್ನ ಮಗುವನ್ನು ಆಕಸ್ಮಿಕವಾಗಿ ದೇವರ ಹುಂಡಿಯೊಳಗೆ ಬಿಳಿಸುತ್ತಾಳೆ. ಆಗ ದೇವಸ್ಥಾನದ ಮಂಡಳಿ ಹುಂಡಿಗೆ ಏನು ಹೋಗುತ್ತದೆಯೋ ಅದು ದೇವಾಲಯದ ಆಸ್ತಿಗೆ ಸೇರುತ್ತದೆ ಎಂದು ಹೇಳುತ್ತಾರೆ. ಸದ್ಯ ಇಲ್ಲೊಂದು ನೈಜ ಘಟನೆ ಚಿತ್ರದ ದೃಶ್ಯವನ್ನೇ ಹೋಲುತ್ತಿದೆ. ತನ್ನಿಷ್ಟದ ದೇವಸ್ಥಾನಕ್ಕೆ ಭೇಟಿ ಕೊಟ್ಟ ಯುವಕನೊಬ್ಬ, ಹಣ ಹಾಕುವ ಬದಲಿಗೆ ತನ್ನ ದುಬಾರಿ ಬೆಲೆಯ ಐಫೋನ್ ಅನ್ನೇ ಹುಂಡಿಗೆ ಜಾರಿಬಿಟ್ಟ ಘಟನೆ ಚೆನ್ನೈನ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ತನ್ನ ದುಬಾರಿ ಬೆಲೆಯ ಐಫೋನ್ ಹುಂಡಿಗೆ ಬೀಳುತ್ತಿದ್ದಂತೆ ಗಾಬರಿಗೊಂಡ ಯುವಕ, ಅದನ್ನು ಹೇಗಾದರೂ ಮಾಡಿ ನನಗೆ ಹಿಂತಿರುಗಿಸಿ ಎಂದು ಮನವಿ ಮಾಡಿದ್ದಾನೆ. ಆದರೆ, ಸಿನಿಮಾದ ದೃಶ್ಯದಲ್ಲಿ ಹೇಳಿದಂತೆಯೇ ಅರುಲ್ಮಿಗು ಕಂದಸ್ವಾಮಿ ದೇವಾಲಯದ ಮಂಡಳಿ ಕೂಡ ಹುಂಡಿಗೆ ಸೇರಿದ್ದು ದೇವರ ಆಸ್ತಿ ಎಂದು ಹೇಳಿದ್ದಾರೆ. ಇದರಿಂದ ಕಂಗಾಲಾದ ಭಕ್ತ ದಿನೇಶ್, ಬರಿಗೈಯಲ್ಲೇ ಮನೆಗೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.
ಕುಟುಂಬದೊಂದಿಗೆ ದೇವಲಾಯಕ್ಕೆ ಭೇಟಿ ನೀಡಿದ್ದ ದಿನೇಶ್, ತನ್ನ ಶರ್ಟ್ ಜೇಬಿನಲ್ಲಿದ್ದ ಹಣವನ್ನು ತೆಗೆಯುವಾಗ ಅಲ್ಲೇ ಇದ್ದ ಐಫೋನ್ ಕೈಯಿಂದ ಜಾರಿ ಹುಂಡಿಯೊಳಗೆ ಬಿದ್ದಿತು ಎಂದು ಮಂಡಳಿಯ ಅಧಿಕಾರಿಗಳಿಗೆ ಘಟನೆ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಂಡಳಿ, ಹುಂಡಿಗೆ ಬಿದ್ದದ್ದು ದೇವರಿಗೆ ಸೇರಿದ್ದು ಎಂದು ಹೇಳಿ ವಿನಯಗಾಪುರದ ದಿನೇಶ್ ಎಂಬ ಭಕ್ತನನ್ನು ಬರಿಗೈಯಲ್ಲಿ ಮನೆಗೆ ಕಳಿಸಿದ್ದಾರೆ. ಆದಾಗ್ಯೂ, ಆತನ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಐಫೋನ್ ಬದಲಿಗೆ ಸಿಮ್ ಕಾರ್ಡ್ ಮಾತ್ರ ಹಸ್ತಾಂತರಿಸಿದ್ದಾರೆ.
ದೇವಸ್ಥಾನದ ಅಧಿಕಾರಿಗಳು ಹೇಳಿದ್ದರಿಂದ ವಿನಯಗಾಪುರದ ದಿನೇಶ್, ತನ್ನ ಫೋನ್ ಹಿಂತಿರುಗಿಸಿ ಕೊಡುವಂತೆ ಮಾನವ ಸಂಪನ್ಮೂಲ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದಾಗ್ಯೂ, ದಿನೇಶ್ಗೆ ಫೋನ್ ಕೊಡದ ಅಧಿಕಾರಿಗಳು, ಶುಕ್ರವಾರ ಹುಂಡಿಯನ್ನು ತೆರೆದು, ಫೋನ್ನಲ್ಲಿದ್ದ ಸಿಮ್ ಕಾರ್ಡ್ ನೀಡಿದ್ದಾರೆ. ಫೋನ್ನಲ್ಲಿರುವ ಎಲ್ಲಾ ಡೇಟಾವನ್ನು ವರ್ಗಾಯಿಸಿಕೊಳ್ಳಿ ಅಥವಾ ಡೌನ್‌ಲೋಡ್ ಮಾಡಿಕೊಳ್ಳಿ ಎಂದಿದ್ದಾರೆ. ಆದರೆ, ಭಕ್ತ ತಾನು ಈಗಾಗಲೇ ಸಿಮ್ ಖರೀದಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕುಮಾರವೇಲ್ ಮಾತನಾಡಿ, "ಹುಂಡಿಯಲ್ಲಿ ಬೀಳುವ ಯಾವುದೇ ವಸ್ತುವನ್ನು ದೇವಾಲಯ ಮತ್ತು ದೇವರಿಗೆ ಸಂಬಂಧಿಸಿದ್ದು ಎಂದು ಪರಿಗಣಿಸುವ ಸಂಪ್ರದಾಯವನ್ನು ಈ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ಫೋನ್ ಅನ್ನು ದೇವಾಲಯದ ಸುಪರ್ದಿಯಲ್ಲಿ ಇರಿಸಲಾಗುವುದು. ಹುಂಡಿಯಲ್ಲಿ ಕಬ್ಬಿಣದ ಬಾಕ್ಸ್ ಇರುವುದರಿಂದ ಅಲ್ಲಿಗೆ ಮೊಬೈಲ್ ಬೀಳುವುದು ಅಷ್ಟು ಸುಲಭವಲ್ಲ. ನನ್ನ ಪ್ರಕಾರ, ದಿನೇಶ್ ಮೊದಲಿಗೆ ಕಾಣಿಕೆಯನ್ನಾಗಿ ತಮ್ಮ ಐಫೋನ್ ಹಾಕಿ, ನಂತರದಲ್ಲಿ ಮನಸ್ಸು ಬದಲಾಯಿಸಿದ್ದಾರೆ ಎನಿಸುತ್ತದೆ. ಇದರ ಬಗ್ಗೆ ನಮಗೆ ಸ್ಪಷ್ಟವಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).