

ರಾವಂದೂರು: ಯುವಜನರಿಗೆ ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳು ದಾರಿದೀಪವಾಗಬೇಕು ಎಂದು ಉಪನ್ಯಾಸಕ ಲಕ್ಷ್ಮಿಕಾಂತ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎನ್‌ಎಸ್‌ಎಸ್ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಉತ್ಸಾಹ, ಶಕ್ತಿ ಮತ್ತು ದೇಶಪ್ರೇಮಗಳನ್ನು ತಮ್ಮ ಜೀವನದ ತತ್ವವಾಗಿ ಅಳವಡಿಸಿಕೊಂಡು ಜಗತ್ತಿಗೆ ದೇಶ ಪ್ರೇಮ ಸಾರುವ ಪ್ರಯತ್ನ ಮಾಡಿದರು. ಪ್ರತಿ ಹಂತದಲ್ಲೂ ಅನೇಕ ಸವಾಲುಗಳನ್ನು ಎದುರಿಸಿ ಜೀವನ ಪ್ರೀತಿಯನ್ನು ಸಾರಿದವರಾಗಿದ್ದಾರೆ ಎಂದರು.
ಎನ್‌ಎಸ್‌ಎಸ್ ಅಧಿಕಾರಿ ರವಿ ಮಾತನಾಡಿ, ವಿವೇಕಾನಂದರ ಜೀವನ ಮತ್ತು ಭೋದನೆಗಳು ಯುವ ಮನಸ್ಸುಗಳಿಗೆ ಸ್ಪೂರ್ತಿ ನೀಡುವ ಉತ್ತಮ ಮೂಲವಾಗಿದೆ ಎಂದರು.
ಉಪನ್ಯಾಸಕ ಸುಭಾಸ್‌ಚಂದ್ರ, ಪ್ರಮೋದ್, ಗಣೇಶ್, ರಮೇಶ್, ಶಶಿಕಿರಣ್, ನಂದಿನಿ, ಶ್ವೇತಾ, ಗಂಗಾಧರ್ ಇತರರು ಇದ್ದರು.