

ಹೊಸನಗರ: ಗೋವು ಎಂಬ ಶಬ್ದಕ್ಕೆ ಚಲನಶೀಲ ಎನ್ನುವ ಅರ್ಥವಿದೆ. ಹಾಗಾಗಿ ಗೋವುಗಳನ್ನು ಸದಾ ಕಟ್ಟಿಹಾಕುವುದು ಸಲ್ಲ. ಹಾಗಾಗಿ ರಾಮಚಂದ್ರಾಪುರ ಮಠದ ಮಹಾನಂದಿ ಗೋಶಾಲೆ ಬಂಧಮುಕ್ತ ಗೋಶಾಲೆ ಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ರಾಮಚಂದ್ರಾಪುರ ಶ್ರೀ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿದ್ದ ಕೃಷ್ಣಾರ್ಪಣಂ ವಾರ್ಷಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವನ ನೀಡಿದರು.
ಕೊನೆಯ ಪಕ್ಷ ಸೂರ್ಯೋದಯದಿಂದ ಸಂಜೆವರೆಗಾದರೂ ಗೋವುಗಳನ್ನು ಹೊರಬಿಡಬೇಕು ಎನ್ನುವುದು ಶಾಸ್ತ್ರ. ಅದು ಕೇವಲ ಶಾಸ್ತ್ರ ಮಾತ್ರವಲ್ಲ, ವೈಜ್ಞಾನಿಕವಾದ ಸತ್ಯವೂ ಹೌದು ಎಂದರು.
ಇದಕ್ಕೂ ಮುನ್ನ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಸ್ಥಾಪಕ ಅಧ್ಯಕ್ಷ ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ ವಿಷ್ಣು ಸಹಸ್ರನಾಮದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, ಬಂಧಮುಕ್ತ ಗೋಶಾಲೆ ಲೋಕಾರ್ಪಣೆ, ವಿಷ್ಣು ಸಹಸ್ರನಾಮ ಲೇಖನ ಯಜ್ಞದ ದೀಕ್ಷೆ ಮತ್ತು ಪುಸ್ತಕದ ಸಮರ್ಪಣೆ, ಗೋಪಾಲಕರಿಗೆ ಆಶೀರ್ವಾದ ಕಾರ್ಯಕ್ರಮಗಳು ನೆರವೇರಿದವು. ಮಹಾನಂದಿ ಗೋಲೋಕದ ಕೆ.ಪಿ.ಎಡಪಾಡಿ, ರಾಘವೇಂದ್ರ ಮಧ್ಯಸ್ಥ ಇತರರಿದ್ದರು.