

ಶಿವಮೊಗ್ಗ: ಬದುಕು ಸದ್ವಿಚಾರಗಳಿಂದ ಪೌರ್ಣಿಮೆಯ ಚಂದ್ರನಂತಿರಬೇಕು. ಪ್ರತಿ ವಸಂತವೂ ಸಾರ್ಥಕ್ಯದಿಂದ ಕೂಡಿರಬೇಕು ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿಕಾರಿಪುರ ಪಟ್ಟಣದ ಮಂಗಲ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಹಸ್ರ ಚಂದ್ರ ದರ್ಶನ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬದುಕು ಸಮಾಜಮುಖಿ ಆಗಿರಬೇಕು. ಧರ್ಮದ ಅಡಿಪಾಯದ ಮೇಲೆ ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಬದುಕು ಎಂದರೆ ಅವನ ಅಂತ್ಯದ ನಂತರವೂ ಜನಮನದಲ್ಲಿ ಚಿರಸ್ಥಾಯಿಯಾಗಿ ಇರುವುದು. ಸಾಮಾಜಿಕ ಕಳಕಳಿಯ ಕಾರ್ಯಗಳಿಂದ ಇಂತಹ ಸ್ಥಾನಮಾನ ನಮಗೆ ಲಭ್ಯವಾಗುತ್ತದೆ. ನಮ್ಮ ಸುತ್ತಲೂ ಯಾವತ್ತೂ ಜನಸೇವೆಯ ಸುಗಂಧ ಪಸರಿಸುತ್ತಿರಬೇಕು. ಸಹನೆ, ಶಾಂತಿ, ಸಹಬಾಳ್ವೆ ನಮ್ಮ ದಿವ್ಯಮಂತ್ರವಾಗಬೇಕು. ಸಾರ್ಥಕ್ಯದ ಜೀವನದಿಂದ ಮಾತ್ರ ಸಹಸ್ರ ಚಂದ್ರದರ್ಶನ ಭಾಗ್ಯ ಲಭಿಸುತ್ತದೆ. ಎಲ್ಲರೊಂದಿಗೆ ನಾನು ಎನ್ನುವ ವಾಣಿಯನ್ನು ನಾವು ಸದಾ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕೃತಿ, ಆಧ್ಯಾತ್ಮಿಕ ಬಲದಿಂದ ಭಾರತ ಇಂದು ವಿಶ್ವಮಾನ್ಯವಾಗಿದೆ. ಜಗತ್ತು ನಮ್ಮ ಮಣ್ಣಿನ ಶ್ರೇಷ್ಠತೆಯನ್ನು ಗೌರವಿಸುತ್ತಿದೆ. ನಾವು ಇಂತಹ ಸಂಸ್ಕೃತಿಯ ವಾರಸುದಾರರು ಎನ್ನುವುದೇ ನಮಗೆ ಹೆಮ್ಮೆ. ಋಷಿಮುನಿಗಳು, ಸಾಧು ಸಂತರು, ರೇಣುಕಾದಿ ಜಗದ್ಗುರುಗಳು ಹಾಗೂ ಬಸವಾದಿ ಪ್ರಮಥರ ಸಂದೇಶ ಒಂದೇ. ಅದುವೇ ಸರ್ವೇ ಜನಾಃ ಸುಖಿನೋ ಭವಂತು ಎನ್ನುವುದು ಎಂದರು.
ಸಾತ್ವಿಕ ಚಿಂತನೆಗಳು ಎಂದಿಗೂ ಸಾಯುವುದಿಲ್ಲ. ಉಸಿರು ಇರುವವರೆಗೆ ಸಾತ್ವಿಕ ಹಾದಿಯಲ್ಲಿ ಸಾಗಬೇಕು. ಪರೋಪಕಾರ ಮತ್ತು ಜನಸೇವೆ ನಮ್ಮ ಮಂತ್ರವಾಗಬೇಕು. ಸಮಾಜದ ಹಿತ ಕಾಯುವವನನ್ನು ಭಗವಂತ ನೆರಳಾಗಿ ನಿಂತು ಸದಾ ಕಾಯುತ್ತಾನೆ. ಬದುಕಿನಲ್ಲಿ ಎಂದಿಗೂ ಗುರಿಯಿರಬೇಕು. ಆಗ ನಿಮ್ಮ ಗುರಿ ಹಿಂದೆ ಗುರುವಿದ್ದು ಮಾರ್ಗದರ್ಶನ ಮಾಡುತ್ತಾನೆ ಎಂದು ಹೇಳಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ನಮ್ಮ ಮೊದಲ ಆದ್ಯತೆಯಿರಲಿ. ಯಾವ ಕಾರಣಕ್ಕೂ ಮುಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದು. ಸಂಸ್ಕಾರ ಮತ್ತು ರಾಷ್ಟ್ರೀಯತೆ ಬಿಂಬಿಸುವ ಸಾಮಾಜಿಕ ಕಳಕಳಿಯ ಶಿಕ್ಷಣದ ಅಗತ್ಯವಿದೆ. ಸಮಾಜಕ್ಕೆ ಮೌಲ್ಯಯುತವಾದ ಕೊಡುಗೆ ನೀಡುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ಹಿರೇಮಾಗಡಿ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ನರೇಗಲ್‌ನ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ಭೂಕಾಂತ್, ಚನ್ನವೀರಪ್ಪ, ರುದ್ರಪ್ಪಯ್ಯ, ಕುಮಾರಸ್ವಾಮಿ ಹಿರೇಮಠ, ಸಕ್ರಿ ವಿಜಯಣ್ಣ ಇತರರಿದ್ದರು.