ಶೀಘ್ರವೇ ಸ್ಥಾಪನೆಯಾಗಲಿ; ರಾಜ್ಯದಲ್ಲಿ ಸಾಂಕ್ರಾಮಿಕ ಸನ್ನದ್ಧತೆ ಕೇಂದ್ರ

Virus Test
Published on

ವೈರಾಣು ಸ್ಪೋಟಗೊಳ್ಳುವುದನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವ ಪ್ರಯೋಗಾಲಯದ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿರುವುದು ಹಾಗೂ ಇದಕ್ಕಾಗಿ ಕಟ್ಟಡ ಸ್ಥಳ ಗುರುತಿಸಿರುವುದು ಪ್ರಸ್ತುತ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಆತಂಕಕಾರಿ ಪರಿಸ್ಥಿತಿಯಲ್ಲಿ ಒಂದಿಷ್ಟು ಸಮಾಧಾನ ಮೂಡಿಸುವಂತಹ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಸಾಂಕ್ರಾಮಿಕ ಸನ್ನದ್ಧತೆ ಕೇಂದ್ರ (ಸೆಂಟರ್ ಫಾರ್ ಎಪಿಡೆಮಿಕ್ ಪ್ರಿಪೇರ್​ಡ್ನೆಸ್) ಸ್ಥಾಪನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಸಾಮಾಜಿಕ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಇನೋವೇಷನ್ ಸೆಂಟರ್ (ಬಿಐಸಿ) ಮತ್ತು ಇನ್​ಫೆಕ್ಷಿಯಸ್ ಡಿಸೀಸ್ ರಿಸರ್ಚ್ ಫೌಂಡೇಷನ್ (ಐಡಿಆರ್​ಎಫ್) ಸಹಭಾಗಿತ್ವದಲ್ಲಿ ಈ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ 10 ಕೋಟಿ ರೂಪಾಯಿ ಅನುದಾನ ಮೀಸಲು ಇಡಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಈಗಾಗಲೇ ಮೂರು ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಇದಕ್ಕೆ ಗುರುತಿಸಲಾಗಿದೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಕೇಂದ್ರ ಸ್ಥಾಪನೆ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ಸಾಗಿರುವುದು ಕಂಡುಬರುತ್ತದೆ. ಉದ್ದೇಶಿತ ಆರು ತಿಂಗಳಲ್ಲಿ ಪ್ರಯೋಗಾಲಯ ಆರಂಭವಾಗುವ ನಿರೀಕ್ಷೆಗಳು ಸಾಕಾರಗೊಳ್ಳಬಹುದಾಗಿದೆ.

ಈ ಪ್ರಯೋಗಾಲಯವು ಸಾಂಕ್ರಾಮಿಕ ರೋಗಗಳು ಏಕಾಏಕಿ ಏರಿಕೆಯಾಗುವುದನ್ನು ಪತ್ತೆ ಮಾಡುತ್ತದೆ. ರಾಜ್ಯದ ಪ್ರತಿ ಜಿಲ್ಲೆಗಳಿಂದ ಕಾಲಕಾಲಕ್ಕೆ ತ್ಯಾಜ್ಯ ನೀರಿನ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಸಂಖ್ಯೆಯ ಆಧಾರದ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ಈ ಪ್ರಯೋಗಾಲಯದಲ್ಲಿ ಗುರುತಿಸುವ ವಿಶಿಷ್ಟ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಈ ರೀತಿ ಮುಂಚಿತವಾಗಿಯೇ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ಅರಿತರೆ, ನಂತರದಲ್ಲಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ.

2020 ಹಾಗೂ 2021ನೇ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕ ಹೆಮ್ಮಾರಿ ಜಾಗತಿಕವಾಗಿ ಹರಡಿ ಅಪಾರ ಸಾವು-ನೋವು ಅನುಭವಿಸಿರುವ ಚಿತ್ರಣವು ಇನ್ನೂ ಹಸಿರಾಗಿಯೇ ಇದೆ. ಈ ಸಾಂಕ್ರಾಮಿಕದಿಂದ ಉಂಟಾದ ಉದ್ಯೋಗ ನಷ್ಟ, ಆರ್ಥಿಕ ಹಿನ್ನಡೆಯ ಪರಿಣಾಮವನ್ನು ಜಗತ್ತು ಈಗಲೂ ಅನುಭವಿಸುತ್ತಿದೆ. ಡೆಂಘ, ಚಿಕೂನ್​ಗುನ್ಯಾ, ಮಲೇರಿಯಾ, ಟೈಫಾಯಿಡ್ ಮುಂತಾದ ಸಾಂಕ್ರಾಮಿಕ ರೋಗಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಸಾಕಷ್ಟು ಬಾಧಿಸುತ್ತಿವೆ. ಕೆಲ ದಿನಗಳ ಹಿಂದೆ ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕೆಲವರನ್ನು ಬಲಿ ತೆಗೆದುಕೊಂಡು, ರಾಜ್ಯದ ಗಡಿಭಾಗದಲ್ಲಿ ಆತಂಕ ಮೂಡಿಸಿದ ಬೆಳವಣಿಗೆ ಇನ್ನೂ ತಾಜಾ ಇದೆ. ದೇಶದಲ್ಲಿ ನಿತ್ಯವೂ 40-50 ಕೋವಿಡ್​ನ ಹೊಸ ಪ್ರಕರಣಗಳು ವರದಿಯಾಗಿರುತ್ತಿರುವುದು ಈ ಮಹಾಮಾರಿ ಸಂಪೂರ್ಣ ಕಣ್ಮರೆಯಾಗಿಲ್ಲ ಎಂಬುದರ ಸೂಚಕವಾಗಿದೆ. ಈ ಸಾಲಿನ ಸೆಪ್ಟೆಂಬರ್​ವರೆಗೆ ರಾಜ್ಯದಲ್ಲಿ 7400ಕ್ಕೂ ಅಧಿಕ ಡೆಂಘ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 4000ಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬಂದಿವೆ. ಕಳೆದ ವರ್ಷ ಇದೇ ಅವಧಿಗಿಂತಲೂ ಹೆಚ್ಚಳವಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಎಲ್ಲ ಆತಂಕಕಾರಿ ವಾಸ್ತವಗಳ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಸನ್ನದ್ದತೆ ಕೇಂದ್ರ ಸ್ಥಾಪನೆ ವಿಚಾರವು ಮಹತ್ವದ ಕ್ರಮವಾಗಿದೆ. ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಈ ಕೇಂದ್ರ ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರವು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಂತಾಗಲಿ. ಅಗತ್ಯವಿದ್ದರೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಂದು ಕೇಂದ್ರವನ್ನು ಸ್ಥಾಪಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net