

ಅಭಿವೃದ್ಧಿ ಸಾಧಿಸಲು ಹೇರಳ ಅವಕಾಶಗಳಿದ್ದರೂ ಪ್ರಾದೇಶಿಕ ಅಸಮತೋಲನದ ಪರಿಣಾಮ ಕಲ್ಯಾಣ ಕರ್ನಾಟಕ ಭಾಗ ಈಗಲೂ ‘ಹಿಂದುಳಿದ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆರ್ಥಿಕ ತಜ್ಞ ಡಿ.ಎಂ.ನಂಜುಡಪ್ಪ ವರದಿಯ ಪ್ರಕಾರ ರಾಜ್ಯದಲ್ಲಿ ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲೂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಈ ಭಾಗದಲ್ಲಿಯೇ. ತಾಲೂಕು ಕೇಂದ್ರಗಳೇ ಸಮರ್ಪಕ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿದ್ದು, ಅಭಿವೃದ್ಧಿಯ ಬೆಳಕಿಗಾಗಿ ಕಾಯುತ್ತಿವೆ. ಶುದ್ಧ ಕುಡಿಯುವ ನೀರು, ಶೌಚಗೃಹ, ಸಮರ್ಪಕ ರಸ್ತೆಗಳಂಥ ಜೀವನಾವಶ್ಯಕ ಸೌಕರ್ಯಗಳನ್ನೂ ಹೋರಾಟ ನಡೆಸಿಯೇ ಪಡೆದುಕೊಳ್ಳಬೇಕಾದ ದುಸ್ಥಿತಿ ಇದೆ. ಮೂಲಸೌಕರ್ಯಗಳ ಕೊರತೆಯಿಂದ ಹೊಸ ಕೈಗಾರಿಕೆಗಳು ಬರುತ್ತಿಲ್ಲ. ಹೀಗಾಗಿ ಹಳ್ಳಿಗಳಿಂದ ಗುಳೆ ಮುಂದುವರಿದಿದೆ, ಬೇಸಿಗೆ ಸಂದರ್ಭದಲ್ಲಂತೂ ಈ ಸಮಸ್ಯೆ ಮತ್ತಷ್ಟು ವಿಕೋಪಕ್ಕೆ ಹೋಗುತ್ತದೆ. ಅಷ್ಟೇ ಅಲ್ಲ, ಪಟ್ಟಣಗಳಿಂದ ವಿದ್ಯಾವಂತರು ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ಸೇರುತ್ತಿದ್ದಾರೆ. ಪರಿಣಾಮ, ಅಭಿವೃದ್ಧಿಯ ಪ್ರಕ್ರಿಯೆಗೆ ಸಿಗಬೇಕಾದ ವೇಗ ಸಿಗದೆ, ಜನರು ಪರದಾಡುವಂತಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿ ಹಲವು ವರ್ಷಗಳೇ ಸಂದಿವೆ. ಆದರೆ, ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂಬ ಹಲವು ದಶಕಗಳ ಬೇಡಿಕೆಗೆ ಸರ್ಕಾರ ಈಗ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ. ‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಅಸ್ತಿತ್ವಕ್ಕೆ ಬರುವುದು ನಿಶ್ಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕಲಬುರಗಿಯಲ್ಲಿ ಘೋಷಿಸಿದ್ದಾರೆ. ಕಲಬುರಗಿ ಹಾಗೂ ಮೈಸೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ವಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಗುಲ್ಬರ್ಗ ವಿಶ್ವವಿದ್ಯಾಲಯದ ಅಭಿವೃದ್ಧಿ ಜತೆಗೆ ಖಾಲಿ ಇರುವ ಹುದ್ದೆಗಳನ್ನು ಸಹ ಶೀಘ್ರ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ‘371(ಜೆ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) 35,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಈ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾದರೆ ಈಗಿರುವ ಚಿತ್ರಣ ಖಂಡಿತ ಬದಲಾಗಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಬಹುದು ಎಂಬ ನಿರೀಕ್ಷೆ ಇಲ್ಲಿಯ ಜನರದ್ದು. ಆದರೆ, ಪ್ರತ್ಯೇಕ ಸಚಿವಾಲಯ ಮತ್ತೊಂದು ‘ಬಿಳಿಯಾನೆ’ ಆಗದೆ, ಈ ಭಾಗದ ಆಶೋತ್ತರಗಳಿಗೆ ಸ್ಪಂದಿಸುವಂತಾಗಬೇಕು. ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಹಿಂದುಳಿದ ಎಂಬ ಹಣೆಪಟ್ಟಿ ಕಳಚಿ ಹಾಕುವಲ್ಲಿ ಮತ್ತು ಪ್ರಾದೇಶಿಕ ಅಸಮತೋಲನದ ಹಳೆಯ ಶಾಪವನ್ನು ನಿವಾರಿಸುವಲ್ಲಿ ಇದು ವರವಾಗಿ ಸಾಬೀತಾಗಬೇಕು. ಈ ಭಾಗದ ಜನರು ಈಗಾಗಲೇ ಸರಣಿ ಆಶ್ವಾಸನೆಗಳಿಂದ ಬೇಸತ್ತು ಹೋಗಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ವ್ಯವಸ್ಥಿತ ಕಾರ್ಯಯೋಜನೆಯ ಮೂಲಕ ಕಾಮಗಾರಿಗಳು ಅನುಷ್ಠಾನಕ್ಕೆ ಬಂದು, ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ, ರಾಜಕೀಯ ಬದಿಗಿಟ್ಟು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮುಖ್ಯವಾಗಲಿ.