

ಹೈದರಾಬಾದ್: ಡಿಸೆಂಬರ್ 04ರಂದು ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಟ ಅಲ್ಲು ಅರ್ಜುನ್ (Allu Arjun) ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ತಾರಕಕ್ಕೇರಿದೆ. ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ಗೆ (Allu Arjun) ಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಡಿಸೆಂಬರ್ 24ರಂದು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ಗೆ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್ ಪೊಲೀಸರು ಸೋಮವಾರ (ಡಿಸೆಂಬರ್ 23) ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳವಾರ (ಡಿಸೆಂಬರ್ 24) ಬೆಳಗ್ಗೆ 11 ಘಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದ್ದು, ಏನೆಲ್ಲಾ ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ.
ಈ ಬಗ್ಗೆ ಮಾತನಾಡಿರುವ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿವಿ ಆನಂದ್, ಕಾಲ್ತುಳಿತ ಸಂಭವಿಸಿದಾಗ ಉಂಟಾದ ಪರಿಸ್ಥಿತಿಯ ಕುರಿತು ಪೊಲೀಸರು ಮಾಡಿದ ವಿಡಿಯೋವನ್ನು ಕೋರ್ಟ್ಗೆ ಸಲ್ಲಿಸಲಾಗುವುದು. ಸುದ್ದಿ ವಾಹಿನಿಗಳು ಮತ್ತು ಸೆಲ್ ಫೋನ್ ಕ್ಲಿಪ್‌ಗಳು ಸೇರಿದಂತೆ ದೃಶ್ಯಾವಳಿಗಳನ್ನು ಒಟ್ಟುಗೂಡಿಸಿ ವಿಡಿಯೋವನ್ನು ಮಾಡಲಾಗಿದೆ. ನಟ ಮಧ್ಯರಾತ್ರಿಯವರೆಗೂ ಥಿಯೇಟರ್ನಲ್ಲಿ ಇದ್ದರು ಎಂದು ವಿಡಿಯೋ ತೋರಿಸುತ್ತದೆ ಎಂದು ತಿಳಿಸಿದ್ದಾರೆ.