Allu Arjun ವಿರುದ್ಧ ಮತ್ತೊಮ್ಮೆ ಗುಡುಗಿದ ಸಿಎಂ ರೇವಂತ್​ ರೆಡ್ಡಿ; ದಯವಿಟ್ಟು ನನ್ನ ಜಡ್ಜ್‌ ಮಾಡಬೇಡಿ ಎಂದ ನಟ

Allu Reddy
Published on

ಹೈದರಾಬಾದ್​: ಡಿಸೆಂಬರ್​ 04ರಂದು ಪುಷ್ಪ-2 ಪ್ರೀಮಿಯರ್​ ಶೋ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣವು ದಿನಕ್ಕೊಂದು ಹೊಸ ಆಯಾಮಾ ಪಡೆದುಕೊಳ್ಳುತ್ತಿದ್ದು, ಅಲ್ಲು ಅರ್ಜುನ್​ (Allu Arjun) ಹಾಗೂ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ (Revanth Reddy) ನಡುವಿನ ಮುಸಿಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್​ ವಿರುದ್ಧ ಸಿಎಂ ರೇವಂತ್ ರೆಡ್ಡಿ ಗುಡುಗಿದ್ದು, ನಟನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹಾಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ AIMIM ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿ ಡಿಸೆಂಬರ್​ 04ರಂದು ಸಂಧ್ಯಾ ಥಿಯೇಟರ್​ನಲ್ಲಿ ಸಂಭವಿಸಿದ ಕಾಲ್ತುಳಿತ ಬಗ್ಗೆ ಕೇಳಿದ್ದಾರೆ. ನಟ ಅಲ್ಲು ಅರ್ಜುನ್​ರನ್ನು ಟೀಕಿಸಿರುವ ಸಿಎಂ ರೇವಂತ್​ ರೆಡ್ಡಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ.

AIMIM ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಶ್ನೆಗೆ ಉತ್ತರಿಸಿದ ಸಿಎಂ ಪೊಲೀಸರು ಅನುಮತಿ ನಿರಾಕರಿಸಿದ್ದರೂ ನಟ ಅಲ್ಲು ಅರ್ಜುನ್ (Allu Arjun) ಡಿಸೆಂಬರ್​ 04 ರಂದು ಪುಷ್ಪ-2 ಪ್ರದರ್ಶನಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು  ಮೃತಪಟ್ಟ ನಂತರವು  ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಲವಂತವಾಗಿ ಹೊರಗೆ ಕಳುಹಿಸುವವರೆಗೂ ಚಿತ್ರಮಂದಿರದಿಂದ ಹೊರಬರಲಿಲ್ಲ. ಅಲ್ಲು ಅರ್ಜುನ್ ದೊಡ್ಡ ಜನಸ್ತೋಮವಿದ್ದರೂ ರೋಡ್‌ಶೋ ನಡೆಸಿ ಜನರತ್ತ ಕೈ ಬೀಸಿದ್ದು ಗೊಂದಲಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.

ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದ ನಟ ಅಲ್ಲು ಅರ್ಜುನ್ 

ಇನ್ನೂ ಸಿಎಂ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಟ ಅಲ್ಲು ಅರ್ಜುನ್​ (Allu Arjun), ಜನರಿಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆ ಅಥವಾ ರಾಜಕೀಯ ನಾಯಕರನ್ನು ದೂಷಿಸಲ್ಲ. ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆಯಂತೆ ಭಾಸವಾಗುತ್ತಿದೆ. ದಯವಿಟ್ಟು ನನ್ನ ಜಡ್ಜ್‌ ಮಾಡಬೇಡಿ. ಸಂಧ್ಯಾ ಥಿಯೇಟರ್‌ ಬಳಿ ನಡೆದ ಘಟನೆಗೆ ನಾನು ಈಗಲೂ  ಕ್ಷಮೆಯಾಚಿಸುತ್ತೇನೆ.

ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಎಲ್ಲರೂ ಒಳ್ಳೆಯ ವಿಚಾರಕ್ಕೆ ಸೇರಿದ್ದರು. ಇದು ಅಪಘಾತ ಅಷ್ಟೇ. ಇದು ಯಾರ ನಿಯಂತ್ರಣದಲ್ಲೂ ಇರಲಿಲ್ಲ. ನಾನು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಅವರ ಆರೋಗ್ಯದ ಬಗ್ಗೆ ಅಪ್​ಡೇಟ್ ಪಡೆಯುತ್ತಿದ್ದೇನೆ. ಜನರನ್ನು ಮನರಂಜಿಸಬೇಕು ಎಂಬ ಉದ್ದೇಶ ನನ್ನದು. ಥಿಯೇಟರ್ ಎಂಬುದು ದೇವಸ್ಥಾನ ಇದ್ದಹಾಗೆ. ದೇವಸ್ಥಾನದಲ್ಲಿ ಏನಾದರೂ ಆದರೆ, ನನಗಿಂತ ಹೆಚ್ಚು ಇನ್ಯಾರಿಗೆ ಬೇಸರ ಆಗಲು ಸಾಧ್ಯ. 2 ದಶಕಗಳಲ್ಲಿ ಗಳಿಸಿದ ಗೌರವವನ್ನು ಒಂದು ದಿನ ನಾಶ ಆಗುತ್ತದೆ ಎಂದರೆ ಅದು ಸಾಕಷ್ಟು ಬೇಸರ ಉಂಟು ಮಾಡುತ್ತದೆ.

ತೆಲುಗು ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಎಂದುಕೊಂಡವನು ನಾನು. ಮೂರು ವರ್ಷ ಮಾಡಿದ ಕೆಲಸ ಹೇಗಿದೆ ನೋಡಲು ಹೋಗಿದ್ದೆ. ಪೊಲೀಸರು ಅನುಮತಿ ನಿರಾಕರಿಸಿದ್ದರು ಎಂಬುದೆಲ್ಲಾ ಸುಳ್ಳು. ಅಲ್ಲಿ ಪೋಲಿಸರು ಇದ್ದರು. ಒಪ್ಪಿಗೆ ಇಲ್ಲ ಎಂದಿದ್ದರೆ ಅವರೇ ಹೇಳುತ್ತಿದ್ದರು. ಹೀಗಾಗಿ, ನಾನು ಒಪ್ಪಿಗೆ ಪಡೆದಿದ್ದೇನೆ ಎಂಬುದು ಸ್ಪಷ್ಟ. ಅಲ್ಲಿ ರೋಡ್​ಶೋ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳು. ಕೈ ಮಾಡಿದರೆ ಫ್ಯಾನ್ಸ್ ಖುಷಿಪಡುತ್ತಾರೆ. ಹಾಗಾಗಿ ನಾನು ಕೈ ಬೀಸಿದೆ. ಎಲ್ಲ ಹೀರೋಗಳು ಅದನ್ನೇ ಮಾಡುತ್ತಾರೆ.

ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ಹೊರಡಿ ಎಂದು ಪೊಲೀಸರು ಹೇಳಿದರು. ನಾನು ಆ ಕ್ಷಣವೇ ಮನೆಗೆ ನಡೆದೆ. ಮರುದಿನವೇ ಸಾವಿನ ವಿಚಾರ ತಿಳಿಯಿತು. ನನಗೆ ಶಾಕ್ ಆಯಿತು. ನನಗೆ ಆ ವಿಚಾರ ಗೊತ್ತಾಗಿದ್ದರೆ ನಾನು ಸಿನಿಮಾ ನೋಡ್ತಾನೇ ಇರಲಿಲ್ಲ. ನಾನು ನನ್ನ ಆಪ್ತರಿಗೆ ಕರೆ ಮಾಡಿ ಏನೆಂದು ವಿಚಾರಿಸಿಕೊಳ್ಳಿ ಎಂದು ಹೇಳಿದೆ. ಅದೇ ದಿನ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ, ಬೇಡ ಎಂದರು ಎಂದು ನಟ ಅಲ್ಲು ಅರ್ಜುನ್ (Allu Arjun)​ ಸಿಎಂ ರೇವಂತ್​ ರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net