

ಕರಾಚಿ: ಪಾಕಿಸ್ತಾನ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಸಿಂಧ್ ಪ್ರಾಂತ್ಯದ ಬಂದರು ನಗರ ಕರಾಚಿ ನಗರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಕರಾಚಿ ಯೂನಿವರ್ಸಿಟಿ ಮಸ್ಕನ್ ಚೌರಂಗಿ ಗುಲ್ಶಾನ್- ಐ- ಇಕ್ಬಾಲ್ ಎದುರಿನ 4 ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಸ್ಫೋಟ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಸಾವಿಗೀಡಾಗಿದ್ದು, ಸುಮಾರು 15 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಪಟೇಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಸ್ವರೂಪವನ್ನು ಪೊಲೀಸರು ಪರೀಕ್ಷಿಸುತ್ತಿದ್ದು, ಘಟನಾ ಸ್ಥಳವನ್ನು ಸದ್ಯದ ಮಟ್ಟಿಗೆ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯ ಇದೊಂದು ಸಿಲಿಂಡರ್ ಸ್ಫೋಟದ ರೀತಿ ಕಾಣುತ್ತಿದೆ ಎಂದು ಮಬೀನಾ ಟೌನ್ ಪೊಲೀಸ್ ಎಸ್ಎಚ್ಒ ತಿಳಿಸಿದ್ದಾರೆ. ಆದರೂ, ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ದೌಡಾಯಿದ್ದು, ಸ್ಫೋಟಕ್ಕೆ ಕಾರಣವನ್ನು ಹುಡುಕುತ್ತಿದ್ದಾರೆಂದು ಪಾಕ್ ಮಾಧ್ಯಮ ಡೌನ್ ವರದಿ ಮಾಡಿದೆ.
4 ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೂ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಗೆ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಸಂತಾಪ ವ್ಯಕ್ತಪಡಿಸಿ, ಸಂಪೂರ್ಣ ವರದಿ ನೀಡುವಂತೆ ಕರಾಚಿ ಪೊಲೀಸ್ ಕಮೀಷನರ್ರನ್ನು ಕೇಳಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಅಗತ್ಯ ನೆರವಿಗೆ ಸೂಚನೆಯನ್ನು ಸಹ ನೀಡಿದ್ದಾರೆ. (ಏಜೆನ್ಸೀಸ್)