

ಬೆಂಗಳೂರು: ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 94 ಸಿಸಿ ಪತ್ರ ನೋಂದಣಿ ವೇಳೆ ಅಕ್ರಮ ಎಸಗಿರುವ ಗ್ರಾಮ ಆಡಳಿತಾಧಿಕಾರಿ (ಗ್ರಾಮ ಲೆಕ್ಕಿಗ) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂದಾಯ ಭವನ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಎಚ್. ಶ್ರೀನಿವಾಸ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಹೊಸಕೋಟೆ ತಾಲೂಕು ಹೆಟ್ಟಕ್ಕಿ ಸರ್ಕಲ್ ಗ್ರಾಮ ಆಡಳಿತಾಧಿಕಾರಿ ಜಂಷೀದ್ ಅಹಮದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2016ಕ್ಕೂ ಮೊದಲು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವರಿಗೆ ಹಕ್ಕು ಪತ್ರ ವಿತರಣೆಗೆ ಸರ್ಕಾರ ಅವಕಾಶ ನೀಡಿತ್ತು. ತಹಸೀಲ್ದರ್ ಪ್ರಮಾಣ ಪತ್ರದ ಮೇರೆಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರು ಉಪ ನೋಂದಣಿ ಕಚೇರಿಗೆ ಹೋಗಿ ಕಟ್ಟಡ ಮಾಲೀಕರಿಗೆ 94 ಸಿಸಿ ಪತ್ರ ನೋಂದಣಿ ಮಾಡಿಸಿಕೊಡಬೇಕಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ಹಿಂದಿನ ತಹಸೀಲ್ದಾರ್ ಶಿವಪ್ಪ ಲಮಾಣಿ ವರ್ಗಾವಣೆ ಆಗಿದ್ದರೂ ಅವರ ಸಹಿ ಮತ್ತು ಸೀಲ್‌ಗಳನ್ನು ದುರ್ಬಳಕೆ ಮಾಡಿಕೊಂಡ ಜಂಷೀದ್ ಅಹಮದ್, ಕಾನೂನುಬಾಹಿರವಾಗಿ 2021ರ ಜುಲೈ 22ರಂದು ಬಿ.ಜಿ. ನಾಗರಾಜು, ಕೆ. ಪ್ರಭಾಕರ್ ಮತ್ತು ರಮೇಶ್ ಎಂಬುವರಿಗೆ ಸಕ್ರಮ ಮಾಡಿಕೊಟ್ಟಿದ್ದರು.
ಈ ಸಮಯದಲ್ಲಿ ಬೆಂ. ದಕ್ಷಿಣ ತಾಲೂಕು ತಹಸೀಲ್ದಾರ್ ಆಗಿ ಸಿ. ರಾಮಲಕ್ಷ್ಮಯ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ನೋಂದಣಿ ಸಮಯದಲ್ಲಿ ಕೋವಿಡ್-19ರ 2ನೇ ಅಲೆ ಇದ್ದ ಕಾರಣಕ್ಕೆ ಉಪ ನೋಂದಣಿ ಕಚೇರಿಯಲ್ಲಿ ಟೋಕನ್ ಪದ್ಧತಿ ಮಾಡಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡ ಗ್ರಾಮ ಲೆಕ್ಕಿಗ ಜಂಷೀದ್, ಹಿಂದಿನ ತಹಸೀಲ್ದಾರ್ ಸಹಿ ಮತ್ತು ಮುದ್ರೆ ಬಳಸಿ ನೋಂದಣಿ ಮಾಡಿದ್ದರು. ಸಹಿ ಮತ್ತು ಸೀಲು ನಕಲಿಯೋ- ಅಸಲಿಯೋ ಎಂದು ಶಿವಪ್ಪ ಲಮಾಣಿ ಅವರಿಗೆ ಸ್ಪಷ್ಟನೆ ಕೋರಿದಾಗ ಅಸಲಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ದಸ್ತಾವೇಜು ನೋಂದಣಿ ಸಮಯದಲ್ಲಿ ನಾನು ವರ್ಗಾವಣೆ ಆಗಿರುವುದಾಗಿಯೂ ಮಾಹಿತಿ ನೀಡಿದ್ದಾರೆ.
ಆದರಿಂದ ತಹಸೀಲ್ದಾರ್ ಅವರ ಸಹಿ ಮತ್ತು ಸೀಲುಗಳನ್ನು ದುರ್ಬಳಕೆ ಮಾಡಿಕೊಂಡು ಜಂಷೀದ್, ಅರ್ಹತೆ ಇಲ್ಲದವರಿಗೂ 94 ಸಿಸಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿರುವ ದಾಖಲೆ ಪತ್ರಗಳನ್ನು ಕಂದಾಯ ಇಲಾಖೆಗೆ ಸಲ್ಲಿಕೆ ಮಾಡಿಲ್ಲ. ಕಡತ ನಾಪತ್ತೆ ಆಗಲು ಅವರೇ ಕಾರಣ ಎಂದು ಹೊಣೆಗಾರರಾಗಿ ಮಾಡಿ ದೂರಿನಲ್ಲಿ ತಹಸೀಲ್ದಾರ್ ಎಚ್. ಶ್ರೀನಿವಾಸ್ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖಾಲಿ ಸೈಟ್, ಹೊಸ ಮನೆಗೂ ಹಕ್ಕು ಪತ್ರ
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವರಿಗೆ ಹಕ್ಕು ಪತ್ರ ನೀಡಲು ಸರ್ಕಾರ ಒಪ್ಪಿಗೆ ನೀಡಿತ್ತು. ಅದರಲ್ಲಿಯೂ 2016ರ ಒಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದರೆ ಮಾತ್ರ ಎಂದು ಷರತ್ತು ವಿಧಿಸಿತ್ತು.
ಆದರೆ, ಗ್ರಾಮ ಲೆಕ್ಕಿಗ ಜಂಷೀದ್ ಅಹಮದ್ ಖಾನ್, 2016ರ ಬಳಿಕವೂ ಅಂದರೆ ಹೊಸದಾಗಿ ಮನೆ ಕಟ್ಟಿದವರಿಗೂ 94 ಸಿಸಿ ಪತ್ರವನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟು ದೊಡ್ಡ ಭ್ರಷ್ಟಾಚಾರ ಎಸಗಿದ್ದಾರೆ. ಅಲ್ಲದೆ, ಸರ್ಕಾರಿ ಖಾಲಿ ಜಾಗದಲ್ಲಿ ಮನೆ ಕಟ್ಟಿಕೊಳ್ಳುವ ಅವಕಾಶ ಮಾಡಿಕೊಟ್ಟು ಮತ್ತು ಖಾಲಿ ಜಾಗಗಳಿಗೂ 94 ಸಿಸಿ ನೋಂದಣಿ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿತ್ತು. ಆಂತರಿಕ ತನಿಖೆ ನಡೆದು ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ.