ಸಾರಿಗೆ ನಿಗಮಗಳಿಗೆ ನವಚೇತನ; ಸಿಬ್ಬಂದಿಗೆ ಪಿಂಚಣಿ ನೆಮ್ಮದಿ

mass transport
Published on
ಸಂಚಾರ ದಟ್ಟಣೆ, ವಾಯುಮಾಲಿನ್ಯ, ಅಪಘಾತ ಪ್ರಮಾಣ ಹೆಚ್ಚಳ ಮುಂತಾದ ಸಮಸ್ಯೆಗಳಿಗೆ ಸಮೂಹ ಸಾರಿಗೆಯೇ ಮದ್ದು ಎಂಬುದು ತಜ್ಞರ ಅಭಿಮತ. ಆದರೂ ಅದನ್ನು ಜಾರಿಗೆ ತರುವಲ್ಲಿ ಸರ್ಕಾರಗಳು ಮತ್ತು ಸಾರ್ವಜನಿಕರು ಇದುವರೆಗೂ ಯಶಸ್ವಿಯಾಗಿಲ್ಲ. ‘ಸಮೂಹ ಸಾರಿಗೆ ದಿನ’ ಹಿನ್ನೆಲೆಯಲ್ಲಿ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪಾಲ್ಗೊಂಡು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅದಲ್ಲದೇ ಸಾರಿಗೆ ವಲಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಮುಕ್ತಮನಸ್ಸಿನಿಂದ ಮಾತನಾಡಿದರು.

ಬೆಂಗಳೂರು: ಸಾರಿಗೆ ನಿಗಮಗಳ ಉಚ್ಛಾ್ವಸ, ನಿಚ್ಛಾ್ವಸಗಳನ್ನು ಸಲೀಸು ಮಾಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳುತ್ತಿದ್ದು, ಇಷ್ಟರಲ್ಲೇ ಹೊಸ ಅನುಭವಗಳು ಜನ ಸಾಮಾನ್ಯರಿಗಾಗಲಿವೆ.

ಸಮೂಹ ಸಾರಿಗೆ ದಿನದ ಹಿನ್ನೆಲೆಯಲ್ಲಿ ‘ವಿಜಯವಾಣಿ’ ನಡೆಸಿದ ಸಂವಾದದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪಾಲ್ಗೊಂಡು, ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಂಡಿರುವ ಸಂಗತಿ ವಿವರಿಸಿದರು. ಕೋವಿಡ್​ನಿಂದ ಸೊರಗಿ ಹೋಗಿದ್ದ ಸಾರಿಗೆ ನಿಗಮಗಳು ಶಕ್ತಿ ಉಚಿತ ಪ್ರಯಾಣ ಯೋಜನೆಯಿಂದ ಇನ್ನಷ್ಟು ಹದಗೆಡಬಹುದು ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಮಹತ್ವದ ತೀರ್ವನಗಳನ್ನು ಕೈಗೊಳ್ಳುತ್ತಿರುವ ಸಂಗತಿಯನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟರು.

ಪಿಂಚಣಿ ಸೌಲಭ: ಸೇವೆಯಿಂದ ವಯೋನಿವೃತ್ತಿಯಾದ ನಂತರ ಪಿಂಚಣಿ ಸವಲತ್ತು ಸಿಗುತ್ತದೆ, ಕೌಟುಂಬಿಕವಾಗಿ ಭದ್ರತೆ ಸಿಗುತ್ತದೆ ಎಂದು ಸಾರಿಗೆ ನಿಗಮಗಳ ನೌಕರರು ‘ಸರ್ಕಾರಿ ನೌಕರರು’ ಎಂದು ಪರಿಗಣಿಸುವಂತೆ ಬೇಡಿಕೆ ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೊಸದಾಗಿ ಮಾಡಿಕೊಟ್ಟ ಅವಕಾಶವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ. ಕಾರ್ವಿುಕ ಭವಿಷ್ಯ ನಿಧಿಗೆ (ಇಪಿಎಫ್​ಒ) ನಾಲ್ಕು ನಿಗಮಗಳ ಸಿಬ್ಬಂದಿ ವಂತಿಗೆಯಾಗಿ ಸರ್ಕಾರವೇ 1,676 ಕೋಟಿ ರೂ.ಗಳನ್ನು ಭರಿಸಲಿದೆ.

ಇದರಿಂದಾಗಿ ನಿವೃತ್ತ ಸಿಬ್ಬಂದಿಗೆ ಮಾಸಿಕ 15 ಸಾವಿರ ರೂ., ನಿವೃತ್ತ ಅಧಿಕಾರಿಗಳಿಗೆ 30 ಸಾವಿರ ರೂ. ಸೌಲಭ್ಯ ಪಿಂಚಣಿ ಸೌಲಭ್ಯ ಸಿಗಲಿದೆ ಎಂದು ‘ಸಮೂಹ ಸಾರಿಗೆ ದಿನ’ದ ಕೊಡುಗೆಯನ್ನು ನೀಡಿದ ಸಚಿವರು ಮೊಟ್ಟ ಮೊದಲ ಬಾರಿಗೆ ಮಹತ್ವದ ವಿಷಯ ಪ್ರಸ್ತಾಪಿಸಿದರು. ನಿಗಮಗಳ ನೌಕರರು, ಅಧಿಕಾರಿಗಳ ವೇತನದಲ್ಲಿ ಕಡಿತ ಮಾಡುವುದರಿಂದ ಪಿಂಚಣಿಗೆಂದೇ ಪ್ರತ್ಯೇಕ ವಂತಿಗೆ ಪಡೆಯುವುದಿಲ್ಲ. ಆದರೆ ನೌಕರರು, ಅಧಿಕಾರ ವರ್ಗದ ಮೊತ್ತವನ್ನು ಸರ್ಕಾರವೇ ತುಂಬಲು ನಿರ್ಧರಿಸಿದ್ದು, ಇದೇ ಡಿಸೆಂಬರ್ ತನಕ ಇಪಿಎಫ್ ಗಡುವು ಕೊಟ್ಟಿದೆ ಎಂಬ ಮಾಹಿತಿಯನ್ನು ರಾಮಲಿಂಗರೆಡ್ಡಿ ಹಂಚಿಕೊಂಡರು. ಈಗಾಗಲೇ ವಿಮೆ ಸೌಲಭ್ಯ ಹೆಚ್ಚಿಸಲಾಗಿದೆ. 3 ಲಕ್ಷದಿಂದ 10 ಲಕ್ಷ ರೂ.ಗೆ ಪರಿಷ್ಕರಿಸಿದ್ದು, ನೌಕರರು ಮೃತರಾದರೆ ಒಂದು ಕೋಟಿ ರೂ. ಪರಿಹಾರ ಅವರ ಕುಟುಂಬಕ್ಕೆ ಸಂದಾಯವಾಗಲಿದೆ. ನೌಕರರ ಮಕ್ಕಳಿಗೆ ಶಿಷ್ಯ ವೇತನ ನೀಡಲು ಇದ್ದ ನಿಯಮ ಕೂಡ ಸಡಿಲಿಸಲಾಗಿದೆ ಎಂದರು.

5000 ಬಸ್​ ಖರೀದಿ: ಹಿಂದಿನ ಸರ್ಕಾರ ಹೊಸ ಬಸ್​ಗಳ ಖರೀದಿಯ ಗೋಜಿಗೆ ಹೋಗಲಿಲ್ಲ. ಕೊನೆ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಸ್​ಗಳ ಖರೀದಿಗೆ ಒಪ್ಪಿಗೆ ನೀಡಿದರೂ, ಪ್ರಕ್ರಿಯೆಗೆ ಕಾಲಾವಕಾಶ ಬೇಕಿದೆ. ಸದ್ಯ ವಿವಿಧ ಶ್ರೇಣಿಯ 5675 ಹೊಸ ಬಸ್ ನಿಗಮಗಳ ಸೇವೆಗೆ ಲಭ್ಯವಾಗಲಿದೆ. ಬಸ್ ಖರೀದಿ ಟೆಂಡರ್ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ನಾಲ್ಕು ತಿಂಗಳೊಳಗೆ ಬಸ್​ಗಳನ್ನು ಖರೀದಿಸಲಾಗುತ್ತದೆ. ಎಲೆಕ್ಟ್ರಿಕ್ ಬಸ್​ಗಳ ಖರೀದಿಗೆ ಕೇಂದ್ರ ಸರ್ಕಾರ 40 ಲಕ್ಷ ರೂ. ಸಬ್ಸಿಡಿ ನೀಡುತ್ತಿತ್ತು. ಈಗ ಅದನ್ನು ನಿಲ್ಲಿಸಿ, ದೇಶಾದ್ಯಂತ 15 ಸಾವಿರ ಬಸ್ ಒದಗಿಸಲು ಮುಂದಾಗಿದೆ. ಆದರೆ, ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಹಣ ನೀಡಿ ಬಸ್ ಕಳಿಸಿದರೆ ಉಪಯೋಗವಾಗುವುದಿಲ್ಲ, ಸಬ್ಸಿಡಿ ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ನೇರವಾಗಿ ನೀಡಿದರೆ ಬಸ್​ಗಳು ನಿಗಮದ ಬಳಿ ಉಳಿಯುತ್ತವೆ. ಹೆಚ್ಚುವರಿ ವೆಚ್ಚವೂ ಉಳಿತಾಯವಾಗುತ್ತದೆ ಎಂದು ವಿವರಿಸಿದರು.

ತೆರಿಗೆ ಕಡಿತ ಪ್ರಸ್ತಾಪ: ರಾಜ್ಯದಲ್ಲಿ ವಾಹನಗಳಿಗೆ ವಿಧಿಸುವ ತೆರಿಗೆ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸಿಕೊಂಡು ನಮ್ಮ ರಾಜ್ಯದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ನಷ್ಟ. ನಮ್ಮಲ್ಲಿನ ತೆರಿಗೆ ಕಡಿಮೆ ಮಾಡುವಂತೆ ಆರ್ಥಿಕ ಇಲಾಖೆಗೆ ಅನೇಕ ಬಾರಿ ಪ್ರಸ್ತಾಪ ಸಲ್ಲಿಸಲಾಗಿದೆ. ಮತ್ತೊಮ್ಮೆ ಇದನ್ನು ಸಿಏಂ ಜತೆ ಚರ್ಚೆ ಮಾಡುವವರಿದ್ದೇವೆ ಎಂದರು.

ಶಕ್ತಿ ಯುಕ್ತಿ ಸಶಕ್ತಿ: ಆರಂಭದಲ್ಲಿ ‘ಗ್ಯಾರಂಟಿಗಳು ಚುನಾವಣೆ ಗಿಮಿಕ್’ ಎಂದರು, ನಾವು ಸವಾಲಾಗಿ ತೆಗೆದುಕೊಂಡೆವು. ಮಹಿಳೆಯರಿಗೆ ಶೀಘ್ರವೇ ಸ್ಮಾರ್ಟ್ ಕಾರ್ಡ್ ಕೂಡ ವಿತರಿಸುತ್ತೇವೆ. ಜೂನ್ 11ಕ್ಕೆ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಆರಂಭವಾಯಿತು. ಮೊದಲ ಸಂಪುಟದಲ್ಲೇ ಇದರ ಜಾರಿಗೆ ತೀರ್ಮಾನ ಮಾಡಲಾಯಿತು. ಆರಂಭದಲ್ಲಿ ಆತಂಕವೂ ಇತ್ತು. ಎಲ್ಲ ಮಹಿಳೆಯರಿಗೆ ಎಲ್ಲ ಭಾಗದಲ್ಲೂ ಓಡಾಡುವ ಅವಕಾಶ ನೀಡಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಯೋಜನೆಗಳಿದ್ದರೂ ಸೀಮಿತ ಪರಿಧಿಯ ಓಡಾಟಕ್ಕೆ ಮಾತ್ರ ಅವಕಾಶವಿದೆ. ಯೋಜನೆ ಜಾರಿಯಾದ ಮೇಲೆ ಮಹಿಳೆಯರು ಉತ್ಸಾಹದಿಂದ ಓಡಾಡಿದರು. ಪ್ರವಾಸಿ ತಾಣ, ಧಾರ್ವಿುಕ ಕ್ಷೇತ್ರಗಳಿಗೆ ಓಡಾಡಲು ಆರಂಭಿಸಿದರು. ಆರಂಭದಲ್ಲಿ ಬಸ್​ಗಳ ಕೊರತೆ ಸ್ವಲ್ಪ ಕಾಣಿಸಿತು. ಈಗಲೂ ಪೀಕ್ ಅವರ್ ವೇಳೆ ಸಮಸ್ಯೆ ಇದೆ. ಪ್ರವಾಸ ಕೇಂದ್ರ, ಪುಣ್ಯ ಸ್ಥಳಗಳಲ್ಲಿ ಸಮಸ್ಯೆ ಇಲ್ಲ ಎಂದು ಹೇಳಿದರು.

ಗುಜರಿ ನೀತಿ: ಸ್ಕ್ರ್ಯಾಪ್ ಪಾಲಿಸಿ ಪ್ರಕಾರ ರಾಜ್ಯದಲ್ಲಿ ಸರ್ಕಾರದ್ದೇ 5000 ವಾಹನ ಗುಜರಿಗೆ ಹಾಕಬೇಕಾಗುತ್ತದೆ. ಪರ್ಯಾಯವಾಗಿ ಹೊಸ ವಾಹನ ಖರೀದಿಸಲು 2000 ಕೋಟಿ ರೂ. ಬೇಕಾಗುತ್ತದೆ. ಕೇಂದ್ರ 200 ಕೋಟಿ ರೂ. ಅಷ್ಟೇ ನೀಡುತ್ತದೆ. ನೀತಿ ಜಾರಿಯಾಗಬೇಕಾದ್ದು ಸರಿ, ಆದರೆ ಇಷ್ಟೊಂದು ಹಣ ಎಲ್ಲಿಂದ ತರುವುದು? 15-20 ವರ್ಷಗಳಲ್ಲಿ ಡೀಸೆಲ್ ಬಸ್​ಗಳೇ ಇರುವುದಿಲ್ಲ ಎಂದರು.

ಪ್ರಯಾಣ ದರ ಏರುವುದಿಲ್ಲ

ಸಾರಿಗೆ ನಿಗಮಗಳ ಕಾಯಕಲ್ಪಕ್ಕಾಗಿ ಹಿಂದಿನ ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕಸದಸ್ಯ ಸಮಿತಿ ಸುದೀರ್ಘ ವರದಿ ನೀಡಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ವಿದ್ಯುತ್ ನಿಯಂತ್ರಣ ಆಯೋಗದ ಮಾದರಿಯಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಆಯೋಗ ರಚಿಸಬೇಕೆಂಬ ಶಿಫಾರಸು ಇದೆ. ಈ ಬಗ್ಗೆ ತೀರ್ಮಾನ ಆಲೋಚಿಸಿಲ್ಲ. ಆದರೆ, ಸಾರಿಗೆ ಸಂಸ್ಥೆಗಳು ಸೇವಾ ಮನೋಭಾವ ಹೊಂದಿವೆ. ವಾಣಿಜ್ಯ ದೃಷ್ಟಿಕೋನ ಇಲ್ಲ. ಡೀಸೆಲ್, ಬಿಡಿಭಾಗಗಳು, ಸಿಬ್ಬಂದಿ ವೇತನದ ವೆಚ್ಚ ಹೆಚ್ಚಾಗಿದ್ದರೂ ಪ್ರಯಾಣ ದರ ಹೆಚ್ಚಿಸಿಲ್ಲ. ನಿಗಮಗಳಿಗೆ ಆರ್ಥಿಕ ಬಲವನ್ನು ಸರ್ಕಾರವೇ ತುಂಬಬೇಕಾಗುತ್ತದೆ ಎಂದರು.

ಮೂರು ತಿಂಗಳಲ್ಲಿ ನೇಮಕ: ನಿಗಮಗಳಲ್ಲಿ 4 ವರ್ಷಗಳಿಂದ ಯಾವುದೇ ಹುದ್ದೆ ಭರ್ತಿ ಮಾಡಿಲ್ಲ. 13,880 ಸಿಬ್ಬಂದಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಕೆಲಸದ ಹೊರೆ ಹೆಚ್ಚಿದ್ದು, ಶೆಡ್ಯೂಲ್​ಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿಲ್ಲ. ಹೀಗಾಗಿ 13 ಸಾವಿರ ಸಿಬ್ಬಂದಿ ಭರ್ತಿಗೆ ಬೇಡಿಕೆ ಸಲ್ಲಿಸಿದ್ದೆವು. ಮೊದಲ ಹಂತದಲ್ಲಿ 8719 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಚಾಲಕರು, ಚಾಲಕರು ಕಂ ನಿರ್ವಾಹಕರು, ಮೆಕ್ಯಾನಿಕ್​ಗಳು ಸೇರಿದ್ದಾರೆ. ಚಾಲಕರಿಗೆ ಡ್ರೖೆವಿಂಗ್ ಪರೀಕ್ಷೆ, ನಿರ್ವಾಹಕರಿಗೆ ಮೆರಿಟ್ ಹಾಗೂ ಡಿಪ್ಲೊಮಾ ಅರ್ಹತೆ ಆಧಾರದಲ್ಲಿ ಮೆಕ್ಯಾನಿಕ್ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ ಮಾಡಲಾಗುತ್ತದೆ. 2ನೇ ಹಂತದಲ್ಲಿ ಮಿಕ್ಕ 5000 ಹುದ್ದೆ ತುಂಬಲಾಗುವುದು. ಒಟ್ಟು ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ 12 ಸಾವಿರ ಸಿಬ್ಬಂದಿ ಕೊರತೆ ಇದೆ. ಇದರ ಭರ್ತಿಗೂ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ 150 ಬ್ರೇಕ್ ಇನ್​ಸ್ಪೆಕ್ಟರ್​ಗಳ ನೇಮಕ ವ್ಯಾಜ್ಯದಿಂದ ಬಾಕಿ ಉಳಿದಿದೆ. ಮತ್ತೆ ಈ ಪ್ರಕ್ರಿಯೆ ಚಾಲನೆ ನೀಡಲಾಗುವುದು. ವಾರ್ಷಿಕ 11 ಸಾವಿರ ಕೋಟಿ ರೂ. ಆದಾಯ ಖಜಾನೆಗೆ ನೀಡುವ ಇಲಾಖೆಗೆ ಬಲ ತುಂಬಬೇಕಾಗಿರುವುದು ಅಗತ್ಯವಾಗಿದೆ. ಸಾರಿಗೆ ನಿಗಮಗಳ ಆರ್ಥಿಕ ಬಲ ಹೆಚ್ಚಿಸಲು ಕಾರ್ಗೆ ಸೇವೆ ಆರಂಭಿಸುತ್ತಿದ್ದು, 20 ಲಾರಿಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ವಾರ್ಷಿಕ ನೂರು ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net