

ನವದೆಹಲಿ: ದೇಶದಲ್ಲಿನ ಮಸೂರ್ (ಲೆಂಟಿಲ್) ದಾಲ್ ದಾಸ್ತಾನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬಹಿರಂಗಪಡಿಸುವುದು ಕಡ್ಡಾಯ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಲಾಖೆ ನಿರ್ವಹಿಸುವ ಸ್ಟಾಕ್ ಬಹಿರಂಗಪಡಿಸುವಿಕೆಯ ಪೋರ್ಟಲ್‌ನಲ್ಲಿ ( https://fcainfoweb.nic.in/psp ) ಮಸೂರ್ ದಾಲ್ ದಾಸ್ತಾನು ಕುರಿತ ವಿವರವನ್ನು ಪ್ರತಿ ಶುಕ್ರವಾರ ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದು ಅದು ತಿಳಿಸಿದೆ.
ವಿವರ ಬಹಿರಂಗಪಡಿಸದ ಸ್ಟಾಕ್ ಕಂಡುಬಂದಲ್ಲಿ, ಅದನ್ನು ಹೋರ್ಡಿಂಗ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇಸಿ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮವನ್ನು ಜಾರಿಗೊಳಿಸಲಾಗುತ್ತದೆ ಎಂದೂ ಇಲಾಖೆ ಎಚ್ಚರಿಕೆ ನೀಡಿದೆ. ವಾರದ ಬೆಲೆ ಪರಿಶೀಲನಾ ಸಭೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಈ ಸೂಚನೆ ನೀಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯ ಆಸುಪಾಸಲ್ಲಿ ಲಭ್ಯವಿರುವ ಸ್ಟಾಕ್‌ಗಳನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. ಬೆಲೆ ನಿಯಂತ್ರಣದ ಸುಳಿವುಗಳ ನಡುವೆ ಕೆಲವು ಪೂರೈಕೆದಾರರಿಂದ ಹೆಚ್ಚಿನ ಬಿಡ್‌ಗಳನ್ನು ಸ್ವೀಕರಿಸಿದ ಕಾರಣ ಎನ್ಎಎಫ್ಇಡಿ ಮತ್ತು ಎನ್ಸಿಸಿಎಫ್ ಆಮದು ಮಾಡಿಕೊಂಡ ಮಸೂರವನ್ನು ಖರೀದಿಸಲು ತಮ್ಮ ಟೆಂಡರ್‌ಗಳನ್ನು ಅಮಾನತುಗೊಳಿಸಬೇಕಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದೆ.
ಕೆನಡದಿಂದ ಮಸೂರ್ ಆಮದು ಹರಿವು ಮತ್ತು ಆಫ್ರಿಕನ್ ದೇಶಗಳಿಂದ ತೊಗರಿ ಆಮದು ಹೆಚ್ಚುತ್ತಿರುವ ಸಮಯದಲ್ಲಿ ಕೆಲವರು ಗ್ರಾಹಕರು ಮತ್ತು ರಾಷ್ಟ್ರದ ಹಿತಾಸಕ್ತಿ ವಿರುದ್ಧ ಮಾರುಕಟ್ಟೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಳಿದ್ದಾರೆ. ಸರ್ಕಾರವು ಈ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಹಬ್ಬದ ಸಂದರ್ಭದಲ್ಲಿ ಸಮಂಜಸವಾದ ಬೆಲೆಯಲ್ಲಿ ಎಲ್ಲ ಬೇಳೆಕಾಳುಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.