More

    ಎಲ್​’ಲಿಗೋ’ ತಲುಪಲಿದೆ ಭಾರತ!; ಇದು ಅತೀಂದ್ರಿಯ ವಿಜ್ಞಾನ, ಬಾಹ್ಯಾಕಾಶ ನೋಡಲು ಹೊಸ ದೃಷ್ಟಿ..

    ಚಂದ್ರಯಾನ-3ರ ಯಶಸ್ಸಿನ ಬಳಿಕ ಭಾರತ ಸೌರಯಾನವನ್ನೂ ಕೈಗೊಂಡಿದ್ದು, ಆದಿತ್ಯ-ಎಲ್1 ಉಡಾವಣೆ ಮಾಡಲಾಗಿದೆ. ಇವೆಲ್ಲದರ ಜತೆ ಲಿಗೋ-ಇಂಡಿಯಾ ಎಂಬ ಇನ್ನೊಂದು ಮಹತ್ವದ ವಿಜ್ಞಾನದಲ್ಲಿ ಭಾರತ ತೊಡಗಿಕೊಂಡಿದ್ದು, ಅದರ ಯಶಸ್ಸು ವೈಜ್ಞಾನಿಕವಾಗಿ ಭಾರತವನ್ನು ಎಲ್‘ಲಿಗೋ’ ಕೊಂಡೊಯ್ಯಲಿದೆ. ಆ ಕುರಿತ ಒಂದು ಒಳನೋಟವೇ ಈ ಲೇಖನ..

    | ಅತುಲ ದಾಮಲೆ, ಉಜಿರೆ 
    ಕಳೆದ ತಿಂಗಳಲ್ಲಿ ಚಂದ್ರನ ಮೇಲೆ ಭಾರತ ತನ್ನ ಲ್ಯಾಂಡರ್ ಹಾಗೂ ರೋವರ್ ಇಳಿಸಿ ಯಶಸ್ವಿ ಆಗಿದೆ. ಅಷ್ಟಕ್ಕೇ ನಿಲ್ಲದ ಇಸ್ರೋ, ಲ್ಯಾಂಡರನ್ನು ಒಮ್ಮೆ ಚಂದ್ರನ ನೆಲದಿಂದ ನೆಗೆಸಿ ಮತ್ತೊಮ್ಮೆ ಲ್ಯಾಂಡ್ ಮಾಡಿತ್ತು. ಈ ಮೂಲಕ ನಾಸಾ ಸಂಸ್ಥೆ 50 ವರ್ಷಗಳ ಹಿಂದೆ ಮಾಡಿದ್ದ, ನಂತರ ಮಾಡಲಾಗದಿದ್ದ ಕರಾಮತ್ತನ್ನು ಭಾರತ ಮಾಡಿ ತೋರಿಸಿದೆ. ನಮ್ಮ ವಿಜ್ಞಾನಿಗಳ ಕುತೂಹಲ ತಣಿಸಲು ಚಂದ್ರ ಮಾತ್ರ ಸಾಕಾಗುವುದಿಲ್ಲ ಎಂದು ಇಸ್ರೋ, ಸೂರ್ಯನ ಕಡೆಗೂ ಒಂದು ಬಾಹ್ಯಾಕಾಶ ನೌಕೆಯನ್ನು ಸೌರಮಂಡಲದ ಲಗ್ರಾ್ಯಂಜ್-1 ಪಾಯಿಂಟ್​ಗೆ ಕಳಿಸಿದೆ. ಅದಿನ್ನೂ ಪ್ರಯಾಣಿಸುತ್ತಿದ್ದು ಈ ಯೋಜನೆಯೂ ಯಶಸ್ವಿ ಆಗಲಿದೆ ಎನ್ನುವ ಆಶಯ ಭಾರತೀಯರದ್ದು. ಆದರೆ ಇದೀಗ ಭಾರತ ಇಷ್ಟಕ್ಕೆ ಸುಮ್ಮಿರದೆ ವಿಶ್ವದ ಅಸ್ತಿತ್ವದ ರಹಸ್ಯಗಳನ್ನು ಅರಿಯಲು ಅತ್ಯಾಧುನಿಕ ‘ಲಿಗೋ’ ಯೋಜನೆ ಕೈಗೆತ್ತಿಕೊಂಡಿದೆ.

    ಏನಿದು ಲಿಗೋ?: ಲಿಗೋ (LIGO) ಎಂದರೆ ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್​ವೇಟರಿ (ಎಲ್​ಐಜಿಒ). ಅಂದರೆ, ಇದು ಸೂರ್ಯ, ಗ್ರಹಗಳು, ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳಿಂದಾಗಿ ಉಂಟಾಗುವ ಗುರುತ್ವಾಕರ್ಷಣೆಯ ತರಂಗಗಳನ್ನು ಅಧ್ಯಯನ ಮಾಡುವ ವೀಕ್ಷಣಾಲಯ. ಇದು ಶಬ್ದ, ಬೆಳಕು ಇದ್ದಂತೆಯೇ ಜಗತ್ತನ್ನು ಗಮನಿಸಲು ಇರುವ ಮತ್ತೊಂದು ಮಾಧ್ಯಮ.

    ಭಾರತಕ್ಕೇನು ಲಾಭ?: ಈ ಯೋಜನೆಯಲ್ಲಿ ವಿದೇಶಿ ಪಾಲುದಾರರೂ ಇರುವುದರಿಂದ ‘ಭಾರತಕ್ಕೇನು ಹಾಗೂ ಎಷ್ಟು ಲಾಭ ಆಗಲಿದೆ’ ಎಂಬುದು ಸಹಜವಾಗಿ ಏಳುವ ಪ್ರಶ್ನೆ. ಈ ಯೋಜನೆಯಲ್ಲಿ ಈಗಾಗಲೇ ಹೇಳಿರುವಂತೆ ಭಾರತ ಹಾಗೂ ಅಮೆರಿಕ ಹೊರತಾಗಿ, ವಿವಿಧ ಅಂತಾರಾಷ್ಟ್ರೀಯ ಸಂಶೋಧನಾ ಹಾಗೂ ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಲಿವೆ. ಇದರಿಂದಾಗಿ ಬೇರೆ ದೇಶಗಳಲ್ಲಿ ಬಳಸಲಾಗುವ ವೈಜ್ಞಾನಿಕ ವಿಧಾನಗಳು, ತಂತ್ರಜ್ಞಾನ, ವೈಜ್ಞಾನಿಕ ಜ್ಞಾನ ಇತ್ಯಾದಿಗಳು ಭಾರತೀಯ ವಿಜ್ಞಾನಿಗಳಿಗೂ ಲಭಿಸಲಿವೆ.

    ಇಂದ್ರಿಯಗಳನ್ನೂ ಮೀರಿದ ವಿಜ್ಞಾನ!

    ಗುರುತ್ವಾಕರ್ಷಣ ತರಂಗಗಳು ಮನುಷ್ಯನ ಗ್ರಹಿಕೆಗೆ ಮೀರಿದ್ದು. ಬೆಳಕಿನ ವಿವಿಧ ತೀವ್ರತೆಯ ತರಂಗಗಳನ್ನು (ಉದಾ: ಎಕ್ಸ್​ರೇ, ಇನ್​ಫ್ರಾರೆಡ್ ತರಂಗ ಇತ್ಯಾದಿ) ನಮ್ಮ ಕಣ್ಣುಗಳಿಗೆ ಗ್ರಹಿಸಲು ಸಾಧ್ಯವಾಗುವುದಿಲ್ಲ. ಆದರೆ ಇದು ಹಾಗಲ್ಲ. ಈ ಗುರುತ್ವಾಕರ್ಷಣ ತರಂಗಗಳನ್ನು ಗ್ರಹಿಸಲು ಮನುಷ್ಯರಿಗೆ ಇಂದ್ರಿಯವೇ ಇಲ್ಲ! ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಜ್ಞಾನಿಗಳು 4 ಕಿ.ಮೀ. ಉದ್ದದ ಎರಡು ಸುರಂಗಗಳನ್ನು ಕೊರೆಯಲಿದ್ದಾರೆ, ಇವೆರಡೂ ಪರಸ್ಪರ ಲಂಬಕೋನದಲ್ಲಿ ಇರಲಿದ್ದು, ಅವುಗಳ ಮೂಲಕ ಬೆಳಕನ್ನು ಹಾಯಿಸಿ ಗುರುತ್ವಾಕರ್ಷಣ ತರಂಗಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಲಿದ್ದಾರೆ. ಭಾರತವು ವಿಶ್ವಾದ್ಯಂತ ಇರುವ ನೆಟ್​ವರ್ಕ್​ನ ಭಾಗವಾಗಿ ಭಾರತದಲ್ಲಿ ನೆಲೆಗೊಂಡಿರುವ ಯೋಜಿತ ಸುಧಾರಿತ ಗುರುತ್ವ-ತರಂಗ ವೀಕ್ಷಣಾಲಯ ಅಭಿವೃದ್ಧಿಪಡಿಸುತ್ತಿದೆ. ಇದರ ಪರಿಕಲ್ಪನೆಯ ಪ್ರಸ್ತಾಪವು ಈಗ ಭಾರತ ಮತ್ತು ಅಮೆರಿಕದಲ್ಲಿ ಸಕ್ರಿಯವಾಗಿದ್ದು ಪರಿಗಣನೆಯಲ್ಲಿದೆ. ಭಾರತೀಯ ಸಂಶೋಧನಾ ಸಂಸ್ಥೆಗಳ ಒಕ್ಕೂಟ ಮತ್ತು ಅಮೆರಿಕದ ಎಲ್​ಐಜಿಒ ಪ್ರಯೋಗಾಲಯ ಮತ್ತು ಅದರ ಅಂತರಾಷ್ಟ್ರೀಯ ಪಾಲುದಾರರ ನಡುವಿನ ಸಹಯೋಗದ ಯೋಜನೆಯಾಗಿ ಲಿಗೋ-ಇಂಡಿಯಾ ರೂಪಿಸಲಾಗಿದೆ. ಇದನ್ನು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

    ಇದು ವಿಜ್ಞಾನ, ತಂತ್ರಜ್ಞಾನವಲ್ಲ!

    ಹೌದು.. ವಿಜ್ಞಾನಕ್ಕೂ ತಂತ್ರಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ವಿಜ್ಞಾನದ ಸಿದ್ಧಾಂತಗಳು ರೂಪುಗೊಳ್ಳುತ್ತವೆ. ನಂತರ ಆ ವಿಜ್ಞಾನದ ಸಹಾಯದಿಂದ ಜನರ ಬಳಕೆಗೆ ಸರಿಹೊಂದುವ ತಂತ್ರಜ್ಞಾನ ಆವಿಷ್ಕರಿಸಲಾಗುತ್ತದೆ. ‘ಲಿಗೋ’ ವಿಚಾರದಲ್ಲೂ ಹೀಗೆಯೇ ಆಗಲಿದೆ. ಲಿಗೋ ವೀಕ್ಷಣಾಲಯ, ಬಾಹ್ಯಾಕಾಶವನ್ನು ನೋಡಲು ಹೊಸ ದೃಷ್ಟಿಕೋನ ನೀಡಲಿದೆ. ನಾವು ವಿಶ್ವವನ್ನು ಇನ್ನುಮುಂದೆ ಬೆಳಕಿನ ಸಹಾಯದಿಂದ ಮಾತ್ರವಲ್ಲ, ಗುರುತ್ವಾಕರ್ಷಣ ತರಂಗಗಳ ಮೂಲಕವೂ ನೋಡಬಹುದು. ಅದರತ್ತ ಪುಟ್ಟ ಹೆಜ್ಜೆ ಲಿಗೋ. ಇದರಿಂದಾಗಿ ಹುಟ್ಟಲಿರುವ ಹೊಸ ತಂತ್ರಜ್ಞಾನ, ಭಾರತಕ್ಕೂ ಲಭಿಸಲಿದೆ. ಇದು ಭಾರತದ ರಕ್ಷಣಾ ಕ್ಷೇತ್ರ, ಆರೋಗ್ಯ ಕ್ಷೇತ್ರಕ್ಕೆ ಹೊಸ ಕೊಡುಗೆ ನೀಡುವ ಸಾಧ್ಯತೆ ಹೆಚ್ಚಿದೆ. ಲಿಗೋದಲ್ಲಿ ಬಳಸಲಾಗುವ ತಂತ್ರಜ್ಞಾನ ಈಗಾಗಲೇ ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಪೋ›ಟಾನ್ ಗಾತ್ರದಲ್ಲಿ ಸಾವಿರದ ಒಂದನೇ ಭಾಗದಷ್ಟು ಸಣ್ಣ ಬದಲಾವಣೆ ಆದರೂ ಗುರುತಿಸಲಿದೆೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಬೆಳಕು ಪ್ರತಿ ಸೆಕೆಂಡ್​ಗೆ 2,99,792.458 ಕಿ.ಮೀ. ಚಲಿಸುತ್ತದೆ. ಅದೇ ಬೆಳಕು ಒಂದು ವರ್ಷ ಪ್ರಯಾಣ ಮಾಡಿದಾಗ ಎಷ್ಟು ದೂರ ಕ್ರಮಿಸುತ್ತದೋ ಅದನ್ನು ಒಂದು ಜ್ಯೋತಿರ್ವರ್ಷ ಎನ್ನುತ್ತಾರೆ. ಲಿಗೋ 4.2 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಮನುಷ್ಯನ ಕೂದಲು ಎಷ್ಟು ಅಗಲವಾಗಿದೆ ಎನ್ನುವುದನ್ನು ಕರಾರುವಕ್ಕಾಗಿ ಹೇಳಬಲ್ಲದು!

    ತಾತ್ವಿಕ ಒಪ್ಪಿಗೆ ಈ ಹಿಂದೆಯೇ ಸಿಕ್ಕಿತ್ತು: ಲಿಗೋ-ಇಂಡಿಯಾ ಫೆಬ್ರವರಿ 2016ರಲ್ಲೇ ಭಾರತ ಸರ್ಕಾರದಿಂದ ತಾತ್ವಿಕ ಅನುಮೋದನೆ ಪಡೆದಿದೆ. ಅಂದಿನಿಂದ ಯೋಜನೆಗಾಗಿ ಸ್ಥಳ ಆಯ್ಕೆ, ಆ ಭೂಮಿಯ ಸ್ವಾಧೀನ, ವೀಕ್ಷಣಾಲಯದ ನಿರ್ವಣಕ್ಕೆ ಸಂಬಂಧಿಸಿದ ಕಾರ್ಯಗಳು ಸೇರಿ ಹಲವಾರು ಸಂಗತಿಗಳು ಪ್ರಗತಿಯಲ್ಲಿವೆ. ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ 2030ರಿಂದ ಲಿಗೋ ಇಂಡಿಯಾ ಸುಸಜ್ಜಿತವಾಗಿ ಕಾರ್ಯನಿರ್ವಹಿಲಿದೆ. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಯೋಜನೆಗೆ ಅನುಮೋದನೆ ಲಭಿಸಿದ್ದು ಶುಭ ಸುದ್ದಿ. ಲಿಗೋ-ಇಂಡಿಯಾ ಯೋಜನೆಯಲ್ಲಿ ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆ (ಡಿಎಇ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್​ಟಿ) ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ (ಎನ್​ಎಸ್​ಎಫ್) ಪ್ರಮುಖ ಪಾತ್ರ ವಹಿಸಲಿವೆ. ಈ ಯೋಜನೆಯಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ-ಶೈಕ್ಷಣಿಕ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಒಡಂಬಡಿಕೆಗಳೊಂದಿಗೆ ಲಿಗೋ-ಇಂಡಿಯಾ ನಿರ್ಮಾಣ ಆಗಲಿದೆ.

    ಈ ಹಿಂದೆ ಬಾಹ್ಯಾಕಾಶದಿಂದ ಹುಟ್ಟಿದ ತಂತ್ರಜ್ಞಾನಗಳು ಯಾವುವು?

    ಬಾಹ್ಯಾಕಾಶಕ್ಕೆ ಮನುಷ್ಯ ಲಗ್ಗೆ ಇಡುವ ಮುನ್ನ, ಅಗತ್ಯ ತಯಾರಿಗಳನ್ನು ನಡೆಸುವಾಗಲೇ ಅನೇಕ ತಂತ್ರಜ್ಞಾನಗಳನ್ನು ಅನ್ವೇಷಿಸಲಾಗಿದೆ. ಅದರಿಂದ ಹುಟ್ಟಿದ ಯಂತ್ರಗಳು ಈಗಾಗಲೇ ಬಳಕೆಯಲ್ಲೂ ಇವೆ. ಉದಾಹರಣೆಗೆ ವರ್ಕ್ ಫ್ರಂ ಹೋಮ್ ಸಾಧ್ಯವಾಗಲು ಕಾರಣವಾಗಿರುವ ಲ್ಯಾಪ್​ಟಾಪ್, ವೈರ್​ಲೆಸ್ ಹೆಡ್​ಫೋನ್ ಸೇರಿದಂತೆ ದಿನಬಳಕೆಯ ಅನೇಕ ವಸ್ತುಗಳು ಬಾಹ್ಯಾಕಾಶ ಅನ್ವೇಷಣೆ ಸಮಯದಲ್ಲೇ ಹುಟ್ಟಿದಂಥವು. ಈ ಕೆಳಗಿನವು ಅವುಗಳಲ್ಲಿ ಕೆಲವು..

    ನೀರು ಶುದ್ಧೀಕರಣ ತಂತ್ರಜ್ಞಾನ: 1960ರ ದಶಕದಲ್ಲಿ ಅಮೆರಿಕ ಮಾನವ ಸಹಿತ ಚಂದ್ರಯಾನ ಮಾಡುತ್ತಿದ್ದಾಗ, ಆಸ್ಟ್ರೋನಾಟ್​ಗಳಿಗೆ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಮಾಡಬೇಕಿತ್ತು. ಆ ಸಂದರ್ಭದಲ್ಲಿ ನಾಸಾ, ಎಲೆಕ್ಟ್ರೋಲೈಟಿಕ್ ಸಿಲ್ವರ್ ಅಯೋಡೈಸರ್ ಅಭಿವೃದ್ಧಿಪಡಿ ಸಿತ್ತು. ಈ ತಂತ್ರಜ್ಞಾನ ಕಾಲಾಂತರದಲ್ಲಿ ಇನ್ನಷ್ಟು ಸುಧಾರಣೆಯಾಗಿ ಇಂದಿನ ವಾಟರ್ ಪ್ಯೂರಿಫಯರ್ ರೂಪ ಪಡೆದಿದೆ.

    ಆರೋಗ್ಯ ಕ್ಷೇತ್ರದ ಸ್ಕ್ಯಾನಿಂಗ್ ಯಂತ್ರಗಳು: ಇಂದು ಬಳಸಲಾಗುತ್ತಿರುವ ರೇಡಿಯಾಗ್ರಫಿ, ಎಂಆರ್​ಐ ಸ್ಕ್ಯಾನಿಂಗ್ ಸೇರಿದಂತೆ ಅನೇಕ ಯಂತ್ರಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಪ್ರಗತಿ ಹೊಂದಿರುವ ಪರಿಣಾಮವಾಗಿಯೇ ಅಭಿವೃದ್ಧಿ ಹೊಂದಿರುವುದು.

    ಸ್ಕ್ರಾಚ್ ರಹಿತ ಗಾಜು: ಬಾಹ್ಯಾಕಾಶದಲ್ಲಿ ನಾನಾ ರೀತಿಯ ಅಣುಗಳು ತೇಲುತ್ತಿರುತ್ತವೆ. ಅವುಗಳಿಂದಾಗಿ ನಾವು ಕಳಿಸುವ ಉಪಕರಣಗಳಿಗೆ ಗೀರುಗಳು ಉಂಟಾಗುವ ಸಾಧ್ಯತೆ ಹೆಚ್ಚೇ ಇರುತ್ತದೆ. ಇದರಿಂದಾಗಿ ಉಪಕರಣ ಹಾಳಾಗಿ ಉದ್ದೇಶಿತ ಕೆಲಸಗಳು ನಡೆಯುವುದಿಲ್ಲ. ಇದರ ತಡೆಗಟ್ಟುವಿಕೆಗಾಗಿ ಲೂಯಿಸ್ ರಿಸರ್ಚ್ ಸೆಂಟರ್, ಡೈಮಂಡ್ ಹಾರ್ಡ್ ಕೋಟಿಂಗ್ ತಂತ್ರಜ್ಞಾನ ತಯಾರಿಸಿತ್ತು. ಈ ರೀತಿಯ ಗಾಜುಗಳನ್ನು ಡಿಜಿಟಲ್ ಡಿಸೈನಿಂಗ್ ಕ್ಷೇತ್ರಗಳಲ್ಲಿ ಬಳಸಲಾಗುವ ಟಚ್ ಸ್ಕ್ರೀನ್​ಗಳಲ್ಲಿ ಬಳಸಲಾಗುತ್ತದೆ.

    ಹೊಗೆ ಪತ್ತೆ ಯಂತ್ರ: ಇಂದು ಅನೇಕ ಬಹುಮಡಿ ಕಟ್ಟಡಗಳಲ್ಲಿ ಬಳಸಲಾಗುತ್ತಿರುವ ಹೊಗೆ ಪತ್ತೆ ಯಂತ್ರ, ಸ್ಪೇಸ್ ಟೆಕ್ನಾಲಜಿ ಪರಿಣಾಮವಾಗಿಯೇ ಜನಿಸಿದ್ದು. ನಾಸಾ ಸಂಸ್ಥೆ, ಬೇರೆ ಬೇರೆ ಪ್ರಮಾಣದಲ್ಲಿರುವ ಹೊಗೆ ಪತ್ತೆ ಮಾಡಿ ಫೇಕ್ ಅಲಾಮ್ರ್ ತಡೆಗಟ್ಟಲು ಈ ಹೊಗೆ ಪತ್ತೆ ಯಂತ್ರಗಳನ್ನು ನಿರ್ವಿುಸಿತ್ತು. ಹೀಗೆ ನಾನಾ ರೀತಿಯ ತಂತ್ರಜ್ಞಾನಗಳು, ಬಾಹ್ಯಾಕಾಶವನ್ನು ಅರಿಯುವಾಗ ನಿರ್ಮಾಣ ಆಗಿವೆ. ಲಿಗೋ-ಇಂಡಿಯಾ ತಂತ್ರಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಪುಟ್ಟ ಹೆಜ್ಜೆಯೇ ಆಗಿದ್ದರೂ ಅಗಾಧ ಭವಿಷ್ಯ ಹೊಂದಿದೆ. ಈಗಾಗಲೇ ಕಲ್ಪನೆಗೂ ಮೀರಿ ಮನುಷ್ಯರಲ್ಲಿರುವ ತಂತ್ರಜ್ಞಾನ ಬೆಳೆದಿದೆ. ಇಂತಹ ಮೈಲಿಗಲ್ಲನ್ನು ಸಾಧಿಸುವಾಗ ಭಾರತ ಜತೆಗಿರುವುದೂ ಒಂದು ಪ್ರತಿಷ್ಠೆಯ ವಿಚಾರವೇ. ಅಂತಹ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾದರೆ ಊಹೆಗೂ ಮೀರಿ ಮುನ್ನಡೆಯಬಹುದು.

    ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts