More

    ನಿಟುವಳ್ಳಿ ಕರಿಯಾಂಬಿಕಾ ಜಾತ್ರೆಗೆ ಕಳೆ ಭಕ್ತರನ್ನು ಸೆಳೆಯುತ್ತಿರುವ ಭವ್ಯ ಮಂಟಪ   9 ವರ್ಷ ನಂತರದ ವೈಭವದ ಉತ್ಸವ

    ದಾವಣಗೆರೆ: ಒಂಬತ್ತು ವರ್ಷದ ಬಳಿಕ ನಗರದ ಗ್ರಾಮದೇವತೆ ಶ್ರೀ ಕರಿಯಾಂಬಿಕಾ ದೇವಿಯ ದೊಡ್ಡ ಜಾತ್ರೆಗೆ ನಿಟುವಳ್ಳಿ ಕಳೆಗಟ್ಟಿದೆ. ಭಾನುವಾರ ರಾತ್ರಿ ಸಾರು ಹಾಕುವುದರೊಂದಿಗೆ ಜಾತ್ರೋತ್ಸವದ ಆಚರಣೆಗೆ ವಿದ್ಯುಕ್ತ ಚಾಲನೆ ದೊರೆತಿದೆ.
    ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. ಅಪ್ಪಳಿಸಿದ ಕೋವಿಡ್ ಮಾರಿ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ದುರ್ಗಾಂಬಿಕಾ ದೇವಸ್ಥಾನದ ಕಾರಣದಿಂದಾಗಿ 9 ವರ್ಷದ ಬಳಿಕ ಆಯೋಜನೆಗೊಂಡಿರುವ ಜಾತ್ರೆಗೆ ಅದ್ದೂರಿತನದ ಸ್ಪರ್ಶ ನೀಡಲಾಗಿದೆ. ಜಾತ್ರೋತ್ಸವಕ್ಕೆ ಸುಮಾರು 50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ.
    ದುಷ್ಟಶಕ್ತಿಗಳು ಗ್ರಾಮದೊಳಗೆ ಪ್ರವೇಶಿಸದಿರಲಿ ಎಂಬ ಪ್ರಾರ್ಥನೆಯೊಂದಿಗೆ ಪುರಾತನ ಕಾಲದಿಂದಲೂ ಜಾತ್ರೆ ಚಾಲ್ತಿಗೆ ಬಂದಿರುವ ಇತಿಹಾಸವಿದೆ. ಕಳೆದೆರಡು ದಿನದಿಂದಲೇ ನಿಟುವಳ್ಳಿ ಸಮೀಪದ ಮನೆಗಳಲ್ಲಿ ಸುತ್ತಮುತ್ತಲ ಗ್ರಾಮಗಳ ಬೀಗರ ದಂಡು ಬಂದು ನೆಲೆಸಿದೆ.
    ನಿಟುವಳ್ಳಿಯ ದುರ್ಗಾಂಬಿಕಾ ದೇಗುಲ ಹಾಗೂ ಕರಿಯಾಂಬಿಕಾ ದೇವಸ್ಥಾನದ ಆವರಣದಲ್ಲಿ ನಿರ್ಮಿತ ಭವ್ಯ ಮಂಟಪ ಭಕ್ತರನ್ನು ಆಕರ್ಷಿಸುತ್ತಿದೆ. ಸಾಗರದ ನಂಜುಂಡೇಶ್ವರ ಡೆಕೋರೇಟರ್ಸ್‌ ತಂಡದ ಸುಮಾರು 30ಕ್ಕೂ ಹೆಚ್ಚು ಮಂದಿ ಕಳೆದ ಇಪ್ಪತ್ತು ದಿನದಿಂದ ಮಂಟಪ ಇನ್ನಿತರೆ ಅಲಂಕಾರಗಳನ್ನು ಸಜ್ಜುಗೊಳಿಸಿದೆ.
    ಜಯನಗರ, ಶಕ್ತಿನಗರ, ಸರಸ್ವತಿ ನಗರ, ಸಿದ್ದೇಶ್ವರ ಮಿಲ್‌ವರೆಗೆ ವಿವಿಧ ದಿಕ್ಕಿನ ರಸ್ತೆಗಳುದ್ದಕ್ಕೂ ವಿದ್ಯುದಲಂಕಾರ ಮಾಡಲಾಗಿದೆ. ಅಲ್ಲಲ್ಲಿ ಕರಿಯಾಂಬಿಕಾ ದೇವಿಯ ಚಿತ್ರಣಗಳು ವಿದ್ಯುದ್ದೀಪದೊಂದಿಗೆ ಕಂಗೊಳಿಸುತ್ತಿವೆ. ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಜಾತ್ರೆಯ ಮಂಟಪ ಇನ್ನಿತರೆ ಸಿದ್ಧತೆಗೆ ಸುಮಾರು 20 ಲಕ್ಷ ರೂ. ವ್ಯಯಿಸಿದೆ.
    ದೇವಸ್ಥಾನದ ಸುತ್ತಲ ಕೆಲ ರಸ್ತೆಗಳುದ್ದಕ್ಕೂ ಶಾಮಿಯಾನ ಹಾಕಲಾಗಿದ್ದು ದೇವಿಯರ ದರ್ಶನಕ್ಕೆ ಬರುವ ಭಕ್ತರಿಗೆ ನೆರಳಿನಾಸರೆ ಒದಗಿದೆ. ಜಾತ್ರೆ ನಿಮಿತ್ತ ಶಕ್ತಿನಗರದಲ್ಲಿ ಈಗಾಗಲೆ ಟಗರು ಕಾಳಗ ನಡೆಸಲಾಗಿದ್ದು ನೂರಾರು ಟಗರುಗಳ ಸ್ಪರ್ಧೆಯನ್ನು ಹಲವರು ಕಣ್ತುಂಬಿಕೊಂಡಿದ್ದಾರೆ. ಟ್ರಸ್ಟ್ ವತಿಯಿಂದ ವಿಜೇತರ ಟಗರುಗಳಿಗೆ ನಗದು ಬಹುಮಾನ ನೀಡಿದೆ.
    ಭಾನುವಾರ ಬೆಳಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ಮಾಡಲಾಯಿತು. ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಗುರು ಗಣಪತಿ ಪ್ರಾರ್ಥನೆ, ದೇವಿಗೆ ಶ್ರೀ ಸೂಕ್ತದಿಂದ ಅಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ ನಡೆಸಲಾಯಿತು. ಮಂಗಳವಾರ ಶ್ರೀ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
    ಮೇ. 1ರಂದು ಅಮ್ಮನವರ ದೊಡ್ಡ ಜಾತ್ರೆ ಜರುಗಲಿದ್ದು ಕರಿಯಾಂಬಿಕಾ ದೇಗುಲದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯಲಿದ್ದಾರೆ. ಮೇ 2ರಂದು ಶಕ್ತಿನಗರದ ಎಸ್ಸಿಎಸ್ಟಿ ಹಾಸ್ಟೆಲ್ ಬಳಿ ಬಯಲು ಜಂಗಿ ಕುಸ್ತಿಗಳು ನಡೆಯಲಿದ್ದು ವಿವಿಧೆಡೆಗಳಿಂದ ಜಟ್ಟಿಗಳು ಭಾಗಿಯಾಗಲಿದ್ದಾರೆ.
    ಅಂದು ಸಂಜೆ 6-30ಕ್ಕೆ ಆಂಜನೇಯ ರಂಗಮಂದಿರದಲ್ಲಿ ಗಾನಲಹರಿ ಮ್ಯೂಸಿಕಲ್ ಇವೆಂಟ್ಸ್ ತಂಡದಿಂದ ‘ಕಿವುಡ ಮಾಡಿದ ಕಿತಾಪತಿ’ ನಾಟಕ ಪ್ರದರ್ಶನವಿದೆ. ಮೇ. 3ರಂದು ಉಲುಸು ಹೊಡೆಯುವುದು, ಶ್ರೀದೇವಿಗೆ ಮುತ್ತೈದೆತನದ ಕಾರ್ಯಕ್ರಮ ಜರುಗಲಿದೆ. ಸಂಜೆ 7-30ಕ್ಕೆ ಭಾರತಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ನಡೆಯಲಿದೆ.

    ಭರದ ಕಾಮಗಾರಿ
    ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದಿವೆ. ಈಗಾಗಲೆ 2.50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕಲ್ಲಿನಲ್ಲಿ ಗರ್ಭಗುಡಿ ನಿರ್ಮಾಣಗೊಂಡು ಪೂಜಾ ಕಾರ್ಯ ಯಥಾಪ್ರಕಾರ ನಡೆಯುತ್ತಿವೆ. ಇನ್ನೂ 2.60 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸುತ್ತಲೂ 51 ಅಡಿ ಎತ್ತರದ ಮಹಾಮಂಟಪ ನಿರ್ಮಾಣ ಆಗಬೇಕಿದೆ. ಟ್ರಸ್ಟ್‌ನ ವ್ಯಾಪ್ತಿಗೆ ಬರುವ ಗಲ್ಲಿ ದುರ್ಗಮ್ಮನ ಗುಡಿಗೂ 35 ಲಕ್ಷ ರೂ ವೆಚ್ಚದಲ್ಲಿ ಹೊಸ ಸ್ವರೂಪ ನೀಡಲಾಗುತ್ತಿದೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್‌ನ ಟ್ರಸ್ಟಿಗಳು.

    ನಿಟುವಳ್ಳಿಯ ದುರ್ಗಾಂಬಿಕಾ ದೇವಿ ಜತೆಯಲ್ಲೇ ಕರಿಯಾಂಬಿಕಾ ದೇವಿಗೂ ಅಪಾರ ಭಕ್ತರಿದ್ದಾರೆ. ಒಂಬತ್ತು ವರ್ಷದ ನಂತರದಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ಮಹತ್ವ ಪಡೆದಿದೆ. ದುರ್ಗಾಂಬಿಕಾ ದೇವಸ್ಥಾನ ನೂತನ ಕಟ್ಟಡ ದೀಪಾವಳಿ ವೇಳೆಗೆ ಪೂರ್ಣಗೊಂಡು ಉದ್ಘಾಟನೆ ಆಗುವ ಇರಾದೆ ಇದೆ.
    ಎಚ್. ಸುರೇಶ್
    ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ.
    ————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts