More

    ಆಪ್​ಗೆ ಸ್ವಾತಿ ಪ್ರಕರಣ ಆಪತ್ತು; ಕೇಜ್ರಿವಾಲ್​ ಕೈವಾಡ ಇರುವ ಬಗ್ಗೆ ಬಿಜೆಪಿ ಆರೋಪ

    ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆಯೆಂದು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ನಾಯಕಿ ಸ್ವಾತಿ ಮಲಿವಾಲ್ ಮಾಡಿರುವ ಆರೋಪ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹಲ್ಲೆ ಪ್ರಕರಣದ ಸಂಬಂಧ ಶುಕ್ರವಾರ ಬೆಳಗ್ಗೆ 11 ಗಂಟೆಗೆ ತನ್ನ ಕಚೇರಿಯಲ್ಲಿ ಹಾಜರಾಗುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್​ಸಿಡಬ್ಲ್ಯು) ಕೇಜ್ರಿವಾಲ್​ರ ಆಪ್ತ ಬಿಭವ್ ಕುಮಾರ್​ಗೆ ಗುರುವಾರ ಸೂಚಿಸಿದೆ.

    ತನ್ನ ಮೇಲೆ ಕುಮಾರ್ ಹಲ್ಲೆ ನಡೆಸಿದ್ದಾರೆಂದು ಕೇಜ್ರಿವಾಲ್ ನಿವಾಸದಿಂದಲೇ ದೆಹಲಿ ಪೊಲೀಸರಿಗೆ ಎರಡು ಬಾರಿ ಫೋನ್ ಮಾಡಿದ್ದಾಗಿ ರಾಜ್ಯಸಭೆ ಸದಸ್ಯೆಯೂ ಆಗಿರುವ ಮಲಿವಾಲ್ ಆರೋಪಿಸಿದ್ದರು. ಇದರಿಂದ ಆಪ್ ಸಂಕಟಕ್ಕೆ ಗುರಿಯಾಗಿತ್ತು. ಮಲಿವಾಲ್ ಹೆಸರಿನಲ್ಲಿ ನೋಂದಾವಣೆಯಾಗಿರುವ ಸಂಖ್ಯೆಗಳಿಂದ ಎರಡು ತುರ್ತು ಕರೆಗಳು ಬಂದಿದ್ದವು ಎಂದು ದೆಹಲಿ ಪೊಲೀಸರು ತಿಳಿಸಿದ್ದರು. ನಂತರ ನಗರದ ಸಿವಿಲ್ ಲೇನ್ಸ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಮಲಿವಾಲ್, ಯಾವುದೇ ದೂರು ದಾಖಲಿಸದೆ ಮರಳಿದ್ದರು ಎಂದೂ ಪೊಲೀಸರು ಹೇಳಿದ್ದರು.

    ಆರೋಪಿ ಜತೆ ಕೇಜ್ರಿವಾಲ್: ವಿಭವ್ ಕುಮಾರ್ ಮತ್ತು ಸಿಎಂ ಕೇಜ್ರಿವಾಲ್ ಜತೆಗಿರುವ ಚಿತ್ರವೊಂದನ್ನು ದೆಹಲಿ ಬಿಜೆಪಿ ಉಪಾಧ್ಯಕ್ಷ ಕಪಿಲ್ ಮಿಶ್ರಾ ಗುರುವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬುಧವಾರ ರಾತ್ರಿ ಲಖನೌ ವಿಮಾನ ನಿಲ್ದಾಣದಲ್ಲಿ ಕೇಜ್ರಿವಾಲ್ ಹಾಗೂ ಇತರ ಆಪ್ ನಾಯಕರೊಂದಿಗೆ ಕುಮಾರ್ ಇರುವುದು ಈ ಚಿತ್ರದಲ್ಲಿ ಕಾಣಿಸುತ್ತದೆ. ‘ಮಲಿವಾಲ್ ಮೇಲಿನ ಹಲ್ಲೆಯ ಹಿಂದೆ ಕೇಜ್ರಿವಾಲ್ ಕೈವಾಡ ಇದೆಯೆನ್ನುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಮಿಶ್ರಾರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ. ಕುಮಾರ್ ಆಪ್​ನ ಉನ್ನತ ನಾಯಕರೊಂದಿಗೆ ಓಡಾಡುತ್ತಿರುವುದನ್ನು ನೋಡಿದರೆ ಕೇಜ್ರಿವಾಲ್​ರ ಕುಮ್ಮಕ್ಕಿನಿಂದ ಆತ ಮಲಿವಾಲ್ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

    ಮಲಿವಾಲ್ ನಿವಾಸಕ್ಕೆ ಪೊಲೀಸರು: ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ತಂಡವೊಂದು ಗುರುವಾರ ಮಲಿವಾಲ್​ರ ನಿವಾಸಕ್ಕೆ ಭೇಟಿ ನೀಡಿತ್ತು. ಮಲಿವಾಲ್ ಇದುವರೆಗೆ ಈ ಆರೋಪಗಳನ್ನು ದೃಢಪಡಿಸಲೂ ಇಲ್ಲ. ಆ ಬಗ್ಗೆ ಯಾವುದೇ ಟಿಪ್ಪಣಿಯನ್ನೂ ಮಾಡಿಲ್ಲ. ಆದರೆ, ಮಲಿವಾಲ್​ರ ಮೌನದ ನಡುವೆಯೇ, ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಆಪ್ ಸಂಸದ ಇದು ‘ನಾಚಿಕೆಗೇಡಿನ’ ಘಟನೆಯಾಗಿದೆ ಎಂದು ವರ್ಣಿಸಿ ಕ್ರಮ ಕೈಗೊಳ್ಳಲಾಗುವುದೆಂದು ಮಂಗಳವಾರ ಹೇಳಿದ್ದರು.

    ‘ಸೋಮವಾರ ಬೆಳಗ್ಗೆ ಒಂದು ಕಳವಳಕಾರಿ ಘಟನೆಯೊಂದು ನಡೆದಿತ್ತು. ಅರವಿಂದ ಕೇಜ್ರಿವಾಲ್ ಸಭೆಯೊಂದಕ್ಕಾಗಿ ಸ್ವಾತಿ ಮಲಿವಾಲ್​ರನ್ನು ಆಹ್ವಾನಿಸಿದ್ದರು. ಡ್ರಾಯಿಂಗ್ ರೂಮ್ಲ್ಲಿ ಕಾಯುತ್ತಿದ್ದ ಆಕೆಯೊಂದಿಗೆ ಬಿಭವ್ ಕುಮಾರ್ ಕೆಟ್ಟದಾಗಿ ವರ್ತಿಸಿದ್ದರು. ಅದಾದ ನಂತರ ಮಲಿವಾಲ್ ಪೊಲೀಸರಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದರು’ ಎಂದು ಸಿಂಗ್ ಹೇಳಿದ್ದರು. ಕೇಜ್ರಿವಾಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದೂ ಸಂಸದ ಸಿಂಗ್ ಹೇಳಿದ್ದರು. ಈ ಪ್ರಕರಣ ಆಪ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕುಮಾರ್​ರನ್ನು ಕೇಜ್ರಿವಾಲ್ ರಕ್ಷಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್​ದೇವ ಆರೋಪಿಸಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದ ಸಂಬಂಧ ಮಾರ್ಚ್ ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದ ಕೇಜ್ರಿವಾಲ್​ರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಅವರು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. 21 ದಿನದ ಜಾಮೀನು ಅವಧಿ ಮುಗಿದ ನಂತರ ಜೂನ್ 2ರಂದು ಜೈಲಿಗೆ ಮರಳುವಂತೆ ಕೇಜ್ರಿವಾಲ್​ಗೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.

    ಇಡಿ ಆಕ್ಷೇಪ ತಿರಸ್ಕರಿಸಿದ ಸುಪ್ರೀಂ: ಚುನಾವಣಾ ರ‍್ಯಾಲಿ ಭಾಷಣದಲ್ಲಿ ಕೇಜ್ರಿವಾಲ್ ಮಾಡಿದ ಟಿಪ್ಪಣಿಯೊಂದಕ್ಕೆ ಜಾರಿ ನಿರ್ದೇಶನಾಲಯ ವ್ಯಕ್ತಪಡಿಸಿರುವ ಆಕ್ಷೇಪವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಒಂದು ವೇಳೆ ಜನರು ಆಪ್​ಗೆ ಮತ ನೀಡಿದರೆ ತಾವು ಜೂನ್ 2ರಂದು ಜೈಲಿಗೆ ಮರಳಬೇಕಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವುದಕ್ಕಾಗಿ ಕೇಜ್ರಿವಾಲ್​ಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಲ್ಲಿ ತಾನು ವಿಶೇಷ ಅನುಕೂಲವನ್ನೇನೂ ಮಾಡಿಕೊಟ್ಟಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿದೆ. ಆದೇಶದಲ್ಲಿ ತಾವು ಹೇಳಿರುವುದು ಸಮರ್ಥನೀಯವಾಗಿದೆ ಎಂದು ಇಡಿಯಿಂದ ತಮ್ಮ ಬಂಧನ ಪ್ರಶ್ನಿಸಿ ಸಿಎಂ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಜಡ್ಜ್​ಗಳು ಹೇಳಿದರು. ‘ನೀವು ನನಗೆ ಮತ ನೀಡಿದರೆ ಜೂನ್ 2ರಂದು ಜೈಲಿಗೆ ಮರಳಬೇಕಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ‘ಅವರು ಹಾಗೆ ಹೇಳಲು ಹೇಗೆ ಸಾಧ್ಯ’ ಎಂದು ಇ.ಡಿ.ಯ ಆಕ್ಷೇಪವನ್ನು ಪ್ರಸ್ತಾಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸಿದ್ದರು.

    ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ ಸ್ವಾತಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ರ ಆಪ್ತ ಸಹಾಯಕ ಬಿಭವ್ ಕುಮಾರ್ ನಡೆಸಿದ ಹಲ್ಲೆ ಸಂಬಂಧ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಗುರುವಾರ ಪೊಲೀಸರಿಗೆ ಅಧಿಕೃತವಾಗಿ ದೂರು ಸಲ್ಲಿಸಿದರು. ಕೇಂದ್ರ ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಇಬ್ಬರು ಪೊಲೀಸರ ತಂಡ ಮೇ 13ರ ಘಟನೆ ಕುರಿತು ಹೇಳಿಕೆಯನ್ನು ದಾಖಲಿಸಿಕೊಂಡಿತು. ಹೇಳಿಕೆಯನ್ನು ದಾಖಲಿಸಿ ಕೊಂಡಿರುವುದರಿಂದ ಎಫ್​ಐಆರ್ ದಾಖಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಸಿಎಂ ನಿವಾಸದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಎರಡುವರೆ ಪುಟಗಳ ಹೇಳಿಕೆಯಲ್ಲಿ ಮಲಿವಾಲ್ ವಿವರಣೆ ನೀಡಿದ್ದಾರೆಂದು ಮೂಲಗಳು ಹೇಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts