More

  ಮೈಕ್ರೋಫೈನಾನ್ಸ್ ಕುಣಿಕೆ!; ಸಾಲ ವಸೂಲಿಗಾಗಿ ಕಿರುಕುಳ, ಮರ್ಯಾದೆಗಂಜಿ ಆತ್ಮಹತ್ಯೆ ಹೆಚ್ಚಳ

  ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
  ರಾಜ್ಯದಲ್ಲಿ ಗಲ್ಲಿಗೊಂದರಂತೆ ತಲೆ ಎತ್ತುತ್ತಿರುವ ಮೈಕ್ರೋಫೈನಾನ್ಸ್ ಕಿರುಸಾಲ ನೀಡುವ ಸಂಸ್ಥೆಗಳ ಸಾಲ ವಸೂಲಾತಿ ಕಿರುಕುಳ ತಾರಕಕ್ಕೇರಿದೆ. ಸಾಲ ಕೊಡುವಾಗ ಯಾವುದೇ ದಾಖಲೆ ನೋಡದೆ ಮನೆ ಬಾಗಿಲಿಗೇ ಬಂದು ಹಣ ಕೊಟ್ಟು ಹೋಗುವ ಈ ಸಂಸ್ಥೆಗಳು ಸಾಲದ ಕಂತು ಪಾವತಿ ವಿಳಂಬವಾದಾಗ ಬಡ್ಡಿ, ಚಕ್ರಬಡ್ಡಿ ಸೇರಿಸಿ ಸುಲಿಗೆ ಮಾಡುತ್ತಿವೆ. ಮನೆ ಮುಂದೆ ಬಂದು ಮರ್ಯಾದೆ ತೆಗೆಯುವ ಈ ಹಣಬಾಕರ ದೌರ್ಜನ್ಯದಿಂದ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗತೊಡಗಿದೆ.

  ಸಾಲಗಾರರ ಸುಲಿಗೆ ಮಾಡುತ್ತಿರುವ ಮೈಕ್ರೋಫೈನಾನ್ಸ್​ಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದಿರುವ ನಡುವೆಯೇ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಬೇಕೆಂಬ ಒತ್ತಾಯದ ಕೂಗು ಪ್ರತಿಧ್ವನಿಸಿದೆ. ಮೈಕ್ರೋಫೈನಾನ್ಸ್​ಗಳಿಗೆ ಮೂಗುದಾರ ಹಾಕಲು ಶಾಶ್ವತ ಕ್ರಮ ಆಗಲೇಬೇಕೆಂದು ರಾಜ್ಯದ ಮುಖ್ಯವಾಹಿನಿ ಬ್ಯಾಂಕ್​ಗಳು ಪಟ್ಟು ಹಿಡಿದಿವೆ.

  ಮೈಕ್ರೋಫೈನಾನ್ಸ್ ಸಂಸ್ಥೆಗಳು ಹೆಚ್ಚಾದಂತೆ ಸಾಲ ಪಡೆಯುವವರೂ ಹೆಚ್ಚುತ್ತಿದ್ದಾರೆ. ರಾಜ್ಯಾದ್ಯಂತ ನೂರೆಂಟು ಕಿರು ಹಣಕಾಸು ಸಂಸ್ಥೆಗಳು ಸಾಲದ ವ್ಯವಹಾರ ನಡೆಸುತ್ತಿವೆ. ಇವುಗಳಲ್ಲಿ ಭಾಗಶಃ ಸಂಸ್ಥೆಗಳು ಸಾಲ ವಸೂಲಿ ವೇಳೆ ಮಾನವೀಯತೆ ಮರೆತು ದರ್ಪ ತೋರಿಸುವ ಪ್ರಕರಣ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ವಿರುದ್ಧ 3-4 ವರ್ಷದಿಂದ ಅನೇಕ ಕಡೆ ಹೋರಾಟ ನಡೆದಿವೆ, ಸರ್ಕಾರ ಕೂಡ ವಿವಿಧ ಸಂದರ್ಭಗಳಲ್ಲಿ ಎಚ್ಚರಿಕೆ ರವಾನಿಸಿದೆ.

  ಇಷ್ಟಾದರೂ ಗ್ರಾಹಕರ ಕಿರುಕುಳ ತಪ್ಪಿಲ್ಲ ಎಂಬುದು ಬ್ಯಾಂಕ್​ಗಳ ಆರೋಪ. ತನ್ನ ತ್ರೖೆಮಾಸಿಕ ಸಭೆಯ ಅಜೆಂಡಾದಲ್ಲಿ ಈ ಅಂಶವನ್ನು ತಂದಿರುವ ರಾಜ್ಯ ಬ್ಯಾಂಕರುಗಳ ಸಮಿತಿ, ಕರ್ನಾಟಕದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಟ್ಟುನಿಟ್ಟಾದ ವಸೂಲಾತಿ ನೀತಿ ಬೇಕೆಂದು ಪ್ರತಿಪಾದಿಸಿದೆ. ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ವಸೂಲಾತಿ ಕ್ರಮದಿಂದ ರಾಜ್ಯದಲ್ಲಿ ಸಾಲಗಾರರ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದು ಮಾಧ್ಯಮಗಳ ವರದಿಯಿಂದ ಅರಿವಿಗೆ ಬಂದಿದೆ. ನ್ಯಾಯಯುತ ಮತ್ತು ನೈತಿಕ ಹಾದಿಯಲ್ಲಿ ಸಾಲ ವಸೂಲಾತಿ ಕ್ರಮಗಳಾಗಬೇಕು ಎಂದು ರಿಸರ್ವ್ ಬ್ಯಾಂಕನ್ನು ವಿನಂತಿಸುವುದಲ್ಲದೆ, ಸೂಕ್ಷ್ಮ ವಲಯ ಹಣಕಾಸು ಸಂಸ್ಥೆಗಳಿಗೆ ಸೂಕ್ತ ಸಲಹೆ ನೀಡಬಹುದೆಂದೂ ಸಹ ಪ್ರತಿಪಾದಿಸಲಾಗಿದೆ. ಬ್ಯಾಂಕುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರ ಅದನ್ನು ರಿಸರ್ವ್ ಬ್ಯಾಂಕ್ ಗಮನಕ್ಕೆ ತರಲೂ ಸಹ ನಿರ್ಧರಿಸಲಾಗಿದೆ. ಈ ಬಗ್ಗೆ ಬ್ಯಾಂಕರುಗಳ ಸಮಿತಿ ಪ್ರತಿನಿಧಿ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ಗ್ರಾಮೀಣ ಭಾಗದಲ್ಲಿ ಕಿರುಕುಳ ಪ್ರಕರಣ ಹೆಚ್ಚುತ್ತಿವೆ. ಮರ್ಯಾದೆಗಂಜಿ ತಲೆಮರೆಸಿಕೊಳ್ಳುವ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಎದುರಾಗುತ್ತಿವೆ. ಇಂತಹ ಬೆಳವಣಿಗೆಯಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಿಲ್ಲವೆಂದರು. ನೆರೆಯ ಆಂಧ್ರದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಹೆಚ್ಚು, ಅಂತಹ ಬೆಳವಣಿಗೆ ಕರ್ನಾಟಕದಲ್ಲಿ ಆಗಬಾರದು. ಇದೇ ಕಾರಣಕ್ಕೆ ರಿಸರ್ವ್​ಬ್ಯಾಂಕ್ ಮಧ್ಯ ಪ್ರವೇಶ ಮಾಡಬೇಕೆಂಬುದು ನಮ್ಮ ಬಯಕೆ ಎಂದು ವಿವರಿಸಿದರು.

  ಸರ್ಕಾರದ ಕ್ರಮವೇನು?: ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಅನುಸಾರ ಜಿಲ್ಲಾಧಿಕಾರಿಗಳು ಮೈಕ್ರೋಫೈನಾನ್ಸ್ ಕಂಪನಿಗಳ ಪ್ರಮುಖರ ಸಭೆ ಕರೆದು ಸಾಲ ವಸೂಲಿ ವೇಳೆ ಸಾರ್ವಜನಿಕರಿಗೆ ಕಿರುಕುಳ, ಒತ್ತಡ ನೀಡದಂತೆ ಸೂಚನೆ ನೀಡಿದ್ದರು. ಸಾಲ ವಸೂಲಾತಿ ಅತಿರೇಕವಾದಲ್ಲಿ ಅಥವಾ ಅಹಿತಕರ ಘಟನೆ ಸಂಭವಿಸಿದಲ್ಲಿ ಸಾಲ ವಸೂಲಾತಿ ಮಾಡುವ ಮೈಕ್ರೋಫೈನಾನ್ಸ್​ನವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು, ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೈಕ್ರೋಪೈನಾನ್ಸ್ಗಳು ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಣಿ ಸಂಖ್ಯೆ: 18004255654, 18001021080.

  ಸಾಲ ಸಲೀಸು, ಪಾವತಿ ತ್ರಾಸು: ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವುದು ಅಷ್ಟು ಸಲೀಸಲ್ಲ ಎಂಬ ಭಾವನೆ ಇದೆ. ಜತೆಗೆ ಬ್ಯಾಂಕ್​ಗಳ ದಾಖಲೀಕರಣ ಪ್ರಕ್ರಿಯೆ ಕಠಿಣ. ಆದರೆ, ಮೈಕ್ರೋಫೈನಾನ್ಸ್ ಗಳಲ್ಲಿ ಹೆಚ್ಚು ತ್ರಾಸವಿಲ್ಲದೆ ಸಾಲ ಸಿಗುತ್ತದೆ. ಇದೇ ಕಾರಣಕ್ಕೆ ಹೆಚ್ಚೆಚ್ಚು ಜನ ಈ ಅವಕಾಶ ಪಡೆದುಕೊಳ್ಳುತ್ತಾರೆಂಬ ವಾದವಿದೆ. ಅನೇಕ ಸಂದರ್ಭದಲ್ಲಿ ಅನವಶ್ಯಕ ಸಾಲ ಅಥವಾ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುವ ಪ್ರಮೇಯ ಉಂಟಾಗುತ್ತದೆ. ಬಡ್ಡಿ-ಅಸಲಿನ ಬಗ್ಗೆ ಅರಿವು ಕೊರತೆ, ಆರ್ಥಿಕ ಅಶಿಸ್ತಿನ ಕಾರಣಕ್ಕೆ ಮರುಪಾವತಿ ಕಷ್ಟವಾಗುತ್ತದೆ. ಇದರಿಂದ ಕಿರುಸಾಲ ನೀಡಿದ ಕಂಪನಿ ಪ್ರತಿನಿಧಿ ಮನೆ ಬಾಗಿಲಿಗೆ ಬರುವಂತಾಗುತ್ತದೆ. ಸಾಲ ಮರುಪಾವತಿ ಟಾರ್ಗೆಟ್ ಪಡೆದ ಸಿಬ್ಬಂದಿ ಒತ್ತಡ ಹೇರಲು ಶುರುಮಾಡುತ್ತಾರೆ. ಅಲ್ಲಿಂದ ಸಮಸ್ಯೆ ಗಂಭೀರವಾಗುತ್ತದೆ.

  ಮೈಕ್ರೋ ಫೈನಾನ್ಸ್ ಬಡ್ಡಿ ದರ ಎಷ್ಟು?

  • ವಾಹನ, ಗುಂಪು, ಕೈಸಾಲ ಸೇರಿ 10 ರೀತಿಯ ಸಾಲ ಲಭ್ಯ
  • ಕೈಸಾಲದಲ್ಲಿ ಪಡೆದ ಹಣಕ್ಕೆ ಶೇ.9.5-25ರವರೆಗೆ ಬಡ್ಡಿ
  • ಒಂದೊಂದು ಸಂಸ್ಥೆಯದ್ದು ಒಂದೊಂದು ರೀತಿ ಬಡ್ಡಿ ಲೆಕ್ಕ
  • 18 ಸಾವಿರದಿಂದ 30 ಸಾವಿರ ರೂ.ವರೆಗೆ ಕೈಸಾಲ ಲಭ್ಯ
  • ಒಂದು ಲಕ್ಷ ರೂ.ವರೆಗೆ ಗುಂಪು ಸಾಲ ಸಿಗಲಿದೆ
  • 36 ತಿಂಗಳವರೆಗೆ ಸಾಲ ಅವಧಿ, ಬಡ್ಡಿ ದರ ವಾರ್ಷಿಕ ಶೇ.23
  • ದ್ವಿಚಕ್ರ ವಾಹನ ಸಾಲ 2 ಲಕ್ಷ ರೂ. ವರೆಗೂ ಸಿಗಲಿದೆ
  • ಬಡ್ಡಿ ದರ ವಾರ್ಷಿಕ ಶೇ.20ರಿಂದ ಶೇ.26ರಷ್ಟು ನಿಗದಿ

  ಹೇಗೆಲ್ಲ ಕಿರುಕುಳ ಕೊಡ್ತಾರೆ?

  • ವಿವಿಧ ದಾಖಲೆ ಪಡೆದು ಸಾಲ ನೀಡುವಾಗ ಕಂತು ನಿರ್ಧಾರ
  • ಕಂತು ಬಾಕಿಯಾಗುತ್ತಿದ್ದಂತೆ ಮನೆಗೆ ಬರ್ತಾರೆ ವಸೂಲಿಗಾರರು
  • ಸಾಲ ಪಡೆದವರು ಕೈಗೆ ಸಿಗದಿದ್ದಾಗ ಧ್ವನಿ ಜೋರಾಗುತ್ತದೆ
  • ಮಾನಕ್ಕೆ ಅಂಜಿ ಬೇಗ ಸಾಲ ತೀರಿಸುತ್ತಾರೆಂದು ಬೆದರಿಕೆ ಹಾಕ್ತಾರೆ
  • ಅನೇಕ ಸಂಸ್ಥೆಗಳಿಂದ ಕಂತು ತಡಪಾವತಿಗೆ ಶೇ.2.5 ವಸೂಲಿ

  ಕಿರುಕುಳಕ್ಕೆ ನಿದರ್ಶನ

  1 ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಅರಳಗುಪ್ಪೆ ಗ್ರಾಮದ ಭಾಗ್ಯಮ್ಮ ಮೈಕ್ರೋ ಫೈನಾನ್ಸ್​ನ ಕಿರುಕುಳ ತಾಳಲಾರದೆ ಮೇನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಗ್ರಾಮದ ಒಂಬತ್ತು ಮಹಿಳೆಯರು ಸಾಲ ವಸೂಲಿ ಒತ್ತಡ ತಾಳಲಾರದೆ ಊರು ತೊರೆದಿದ್ದರು

  2 ಮೈಕ್ರೋಫೈನಾನ್ಸ್ ಸಿಬ್ಬಂದಿ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದರಿಂದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವೀರಮ್ಮ (58) ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು

  3 ಕೊರಟಗೆರೆ ತಾಲೂಕಿನಲ್ಲಿ ಬಾವಿ ತೋಡಿಸಲು ಮೈಕ್ರೋಫೈನಾನ್ಸ್​ನಿಂದ ಸಾಲ ಪಡೆದಿದ್ದ ರೈತ ಸಾಲ ವಸೂಲಿಗಾರರ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು.

  ಬ್ಯಾಂಕುಗಳ ಆತಂಕವೇನು?

  • ಮೈಕ್ರೋಫೈನಾನ್ಸ್​ಗಳಿಂದ ಭವಿಷ್ಯಕ್ಕೆ ದಕ್ಕೆ
  • ಮನೆಬಾಗಿಲಿಗೆ ಹೋಗಿ ಸೇವೆ ನೀಡುತ್ತಾರೆ
  • ಮುಖ್ಯವಾಹಿನಿ ಬ್ಯಾಂಕ್​ಗಳ ಬೇಡಿಕೆ ಕುಸಿತ
  • ಗ್ರಾಮೀಣ ವ್ಯವಹಾರದ ಮೇಲೆ ಪರಿಣಾಮ
  • ಅಕ್ರಮ ಸಾಲ ವಸೂಲಿಗೆ ಜನರ ಆಕ್ರೋಶ
  • ಮೈಕ್ರೋಫೈನಾನ್ಸ್​ಗಳ ವಿರುದ್ಧವೂ ಬೇಸರ
  • ಕಾಲಕ್ರಮೇಣ ಬ್ಯಾಂಕ್​ಗಳಿಗೂ ಕೆಟ್ಟ ಹೆಸರು
  • ಪರೋಕ್ಷವಾಗಿ ಸಾಲ ವಸೂಲಿಗೆ ತೊಡಕು

  ಬ್ಯಾಂಕ್​ಗಳ ಆಗ್ರಹ ಏನು?

  • ತ್ರೖೆಮಾಸಿಕ ಸಭೆಯಲ್ಲಿ ಕಠಿಣ ಕ್ರಮಕ್ಕೆ ಆಗ್ರಹ
  • ಮೈಕ್ರೋಫೈನಾನ್ಸ್​ಗಳ ವಿರುದ್ಧ ಆಕ್ರೋಶ
  • ಕಠಿಣ ವಸೂಲಿ ನೀತಿಗೆ ಕಡಿವಾಣ ಬೀಳಲಿ
  • ಬಲವಂತದ ವಸೂಲಿಯಿಂದ ಆತ್ಮಹತ್ಯೆ
  • ಗ್ರಾಮೀಣ ಭಾಗದಲ್ಲಿ ಕಿರುಕುಳ ಹೆಚ್ಚಳ
  • ನ್ಯಾಯಯುತ ಹಾದಿಯಲ್ಲಿ ವಸೂಲಿ ಆಗಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts