

ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿಯಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಆಂದೋಲನದಂತೆ ನಡೆಯುತ್ತಿದೆ. ನಿನ್ನೆ (ಶುಕ್ರವಾರ) ಒಂದೇ ದಿನ ಲಕ್ಷಾಂತರ ರೂಪಾಯಿ ದಂಡ ವಸೂಲಾಗಿದೆ. ಇಷ್ಟಾದರೂ ಮಾಸ್ಕ್ ಹಾಕದೇ ತಿರುಗುವವರು, ಮಾರ್ಷಲ್‌ಗಳೊಂದಿಗೆ ವಾಗ್ವಾದಕ್ಕೆ ಇಳಿಯುವವರು ಅಲ್ಲಲ್ಲಿ ಕಂಡುಬರುತ್ತಲೇ ಇದ್ದಾರೆ.
ಈ ಹಿನ್ನೆಲೆಯಲ್ಲಿ, ಮಾಸ್ಕ್ ಹಾಕದವರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಸ್ಥಳದಲ್ಲೇ ಒಂದು ಸಾವಿರ ರೂ. ದಂಡ ಕಟ್ಟಲು ಯಾರು ಸಿದ್ಧರಾಗುವುದಿಲ್ಲವೋ ಅವರನ್ನು ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ದು ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಮಾಸ್ಕ್ ಹಾಕದವರನ್ನು ಹಿಡಿದ ತಕ್ಷಣ ಅವರ ಮೊಬೈಲ್ ನಂಬರ್ ಮತ್ತು ಹೆಸರು, ವಿಳಾಸ ಮುಂತಾದ ವಿವರಗಳನ್ನು ಮಾರ್ಷಲ್‌ಗಳು ದಾಖಲಿಸಿಕೊಳ್ಳುತ್ತಾರೆ. ದಂಡ ಕಟ್ಟಿದರೆ ಸ್ಥಳದಲ್ಲೇ ಒಟಿಪಿ ಬರುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಠಾಣೆಯವರೆಗೆ ಹೋದವರು ನೋಟಿಸ್ ಪಡೆದು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಈ ಎಲ್ಲ ಅಧಿಕಾರವನ್ನು ಬೆಂಗಳೂರಿನಲ್ಲಿ ಮಾರ್ಷಲ್‌ಗಳು ಮತ್ತು ಪೊಲೀಸರಿಗೆ ನೀಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಪಂಚಾಯ್ತಿ ಅಧಿಕಾರಿಗಳಿಗೆ ನೀಡಲಾಗಿದೆ.
ದ್ವಿಚಕ್ರವಾಹನ ಓಡಿಸುವಾಗ ಇಬ್ಬರಿದ್ದು ಮಾಸ್ಕ್ ಹಾಕಿರದಿದ್ದರೆ ದಂಡ ವಿಧಿಸಲಾಗುತ್ತದೆ. ಒಬ್ಬರೇ ಇದ್ದು ಹೆಲ್ಮೆಟ್ ಧರಿಸಿದ್ದರೆ ದಂಡ ವಿಧಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.