ನಿನ್ನ ತಂಗಿಯನ್ನೇ ಮದುವೆ ಆಗ್ತೀನಿ…! ಪತಿ, ಅತ್ತೆಯ ಚಿತ್ರಹಿಂಸೆ ತಾಳಲಾರದ ಯುವತಿ ಮಾಡಿದ್ದೇನು ಗೊತ್ತೇ?

married girl suicide
Published on

ತೆಲಂಗಾಣ: ಪ್ರತಿಯೊಬ್ಬರ ಜೀವನದಲ್ಲಿಯೂ ದಾಂಪತ್ಯ ಜೀವನ ಎಂಬುದು ಬಹಳ ಶ್ರೇಷ್ಢ ಹಾಗೂ ದೊಡ್ಡ ಕನಸು. ಎಲ್ಲಾ ಬಯಸಿದಂತೆ ನಡೆದರೆ ಅವರೇ ಪುಣ್ಯವಂತರು. ಆದ್ರೆ, ಬಯಸಿದ್ದೆಲ್ಲಾ ಉಲ್ಟಾ ಹೊಡೆದರೆ ಜೀವನವೇ ಛಿದ್ರ ಎನಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ, ಪತಿಯ ಕೈಹಿಡಿದು, ಸಪ್ತಪದಿ ತುಳಿಯುವ ಯುವತಿಯ ಬಾಳಲ್ಲಿ ಒಂದು ಬಾರಿ ಅಪಸ್ವರ ಕೇಳಿಬಂದರೆ, ಅದನ್ನು ತಡೆದುಕೊಳ್ಳುವ ಶಕ್ತಿ ಅತ್ಯಂತ ಕಷ್ಟಕರ. ದೇಹಕ್ಕೆ ಉಂಟಾಗುವ ನೋವಿಗಿಂತ ಮನಸ್ಸಿಗಾಗುವ ಗಾಯಗಳು ಅಷ್ಟು ಸುಲಭವಾಗಿ ಮಾಸುವುದಿಲ್ಲ. ದಾಂಪತ್ಯ ಜೀವನ (Married Women) ಎಂಬ ಕನಸಿನ ಕನ್ನಡಿ ಒಂದು ಬಾರಿ ಹೊಡೆದು ಹೋದರೆ, ಆ ಕನ್ನಡಿಯನ್ನು ಎಷ್ಟೇ ಬಾರಿ ಜೋಡಿಸಿ ನೋಡಿದರು, ಅದರ ಹೊಡೆದ ರೂಪ ಕಣ್ಮರೆಯಾಗುವುದಿಲ್ಲ. ಅದೇ ರೀತಿ ಒಮ್ಮೆ ಮದುವೆಯಾದ ಮೇಲೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ, ಜಟಾಪಟಿ ಉಂಟಾದರೆ ಅದನ್ನು ಸರಿಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಚಿಕ್ಕ ಮಾತುಗಳಿಂದ ಆರಂಭವಾಗುವ ಮನಸ್ತಾಪಗಳು ಸಾವಿನಲ್ಲಿ ಅಂತ್ಯ (Ends Life) ಕಂಡಿರುವುದೇ ಹೆಚ್ಚು.

ಇಲ್ಲೊಂದು ಘಟನೆ ಇದಕ್ಕೆ ಸೂಕ್ತ ಉದಾಹರಣೆ

ಪತಿಯ ಕಿರುಬೆರಳ ಹಿಡಿದು, ಸಪ್ತಪದಿ ತುಳಿದು, ಅತ್ತೆಯ ಮನೆಯನ್ನೇ ತನ್ನ ತಾಯಿಯ ಮನೆಯೆಂದು ಬಲಗಾಲಿಟ್ಟು ಪ್ರವೇಶಿಸಿದ ಈ ಯುವತಿ, ಮದುವೆಯಾಗಿ ಎರಡು ವರ್ಷವಾದರೂ ತನಗೆ ಮಕ್ಕಳಾಗದ ಕಾರಣ ಅತ್ತೆ ಆಡುತ್ತಿದ್ದ ಚುಚ್ಚು ಮಾತುಗಳು, ಮಾನಸಿಕ ಹಿಂಸೆಗಳಿಂದ ಮೊದಲೇ ಜೀವಂತ ಶವವಾಗಿದ್ದಳು. ಆರಂಭದಲ್ಲಿ ಗಂಡನ ತಾಯಿಯಿಂದ ಕೇಳಿಬರುತ್ತಿದ್ದ ಕೆಟ್ಟ ಮಾತುಗಳಿಂದ ಮನನೊಂದಿದ್ದ ರೇಣುಕಾಗೆ ಪತಿಯ ಆಮಿಷದ ಮಾತುಗಳು ಸಾವಿನ ಬಾಗಿಲನ್ನು ಬಲವಂತವಾಗಿ ತಟ್ಟುವಂತೆ ಮಾಡಿತು. ಮಗುವಿಗೆ ಜನ್ಮ ನೀಡದ ಮೇಲೆ ನೀನೇಕೆ ಬದುಕಬೇಕು? ಸಾಯುವುದೇ ಲೇಸು ಎಂದು ಅತ್ತೆ ಛೀಮಾರಿ ಹಾಕಿದ್ದರು. ಈ ಎಲ್ಲಾ ವಿಚಾರಗಳಿಂದ ತೀವ್ರ ಮನನೊಂದಿದ್ದ ರೇಣುಕಾ ಕಡೆಗೂ ಆತ್ಮಹತ್ಯೆಯ ಇದೆಲ್ಲದಕ್ಕೂ ಅಂತ್ಯ ಎಂದು ಭಾವಿಸಿ, ಸಾವಿಗೆ ಶರಣಾಗಿದ್ದಾರೆ.

ನಿನ್ನ ತಂಗಿಯನ್ನೇ ಮದುವೆ ಆಗುತ್ತೀನಿ

ಅಮ್ಮನ ಜತೆ ಕೈಜೋಡಿಸಿದ ಪತಿ, ನಿನಗೆ ಮಕ್ಕಳಾಗುವುದಿಲ್ಲ. ನಿನ್ನ ತಂಗಿಯನ್ನೇ ಮದುವೆಯಾಗುತ್ತೀನಿ ಅಥವಾ ಬೇರೆ ಯುವತಿಯನ್ನು ಮದುವೆ ಮಾಡಿಕೊಳ್ಳುತ್ತೀನಿ ಎಂದು ಬೆದರಿಕೆ ಹಾಕಿದ್ದ. ಪತಿ ಹಾಗೂ ಅತ್ತೆಯ ಕಿರುಕುಳ ಸಹಿಸಲಾಗದ ವಿವಾಹಿತೆ ರೇಣುಕಾ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ಒಮ್ಮೆಯೂ ನೋಡಲು ಬಾರದ ಅತ್ತೆ ಮತ್ತು ಪತಿಯೇ ತನ್ನ ಸಾವಿಗೆ ಕಾರಣ ಎಂದು ರೇಣುಕಾ ಸಾಯುವ ಮುನ್ನ ತಿಳಿಸಿದ್ದಾರೆ ಎಂದು ಆಕೆಯ ಪೋಷಕರು ದೂರಿದ್ದಾರೆ.

ರೇಣುಕಾ ಕುಟುಂಬಸ್ಥರ ದೂರಿನಲ್ಲಿದೆ ಈ ವಿಷಯ

ಸೆ.27ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳೆನಾಶಕ ಕುಡಿದು ರೇಣುಕಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಪಲ್ವಂಚ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆಕೆಯ  ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಹೆಚ್ಚಿನ ಚಿಕಿತ್ಸೆ ಅಗತ್ಯದ ಹಿನ್ನೆಲೆ ಖಮ್ಮಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ರೇಣುಕಾ ಗುರುವಾರ (ಆ.03) ಕೊನೆಯುಸಿರೆಳೆದಿದ್ದಾರೆ. ಸಾವಿನ ನಡುವೆ ಒಂದು ವಾರದಿಂದ ಆಸ್ಪತ್ರೆಯಲ್ಲಿದ್ದ ಪತ್ನಿಯನ್ನು ನೋಡಲು ಬಾರದ ಪತಿ, ಅತ್ತಿಗೆಯೇ ನಮ್ಮ ಮಗಳ ಸಾವಿಗೆ ಕಾರಣ ಎಂದು ರೇಣುಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ರೇಣುಕಾ ಸಾಯುವ ಮುನ್ನ ಆಕೆಯ ಸಾವಿಗೆ ಪತಿ ಬಾಬುಲಾಲ್ ಹಾಗೂ ಆತನ ಕುಟುಂಬಸ್ಥರೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದ್ದಾಳೆ ಎಂದು ಹೆತ್ತವರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net