

Marriage : ತನ್ನ ಚಾಣಾಕ್ಷತನದಿಂದಾಗಿ ಅಪಾಯಕಾರಿ ಮದುವೆಯಿಂದ ಸ್ವಲದರಲ್ಲೇ ಪಾರಾದ ಬಗ್ಗೆ ಯುವತಿಯೊಬ್ಬಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮದುವೆಗೂ ಮುನ್ನ ವರನ ಡಿಜಿಟಲ್ ಹಿನ್ನೆಲೆಯನ್ನು ಪರಿಶೀಲಿಸುವ ಮಹತ್ವವನ್ನು ಯುವತಿ ತನ್ನ ಪೋಸ್ಟ್ನಲ್ಲಿ ವಿವರಿಸಿದ್ದಾಳೆ. ಬಲವಂತದ ವಿವಾಹಗಳ ಬಗ್ಗೆ ತಾನು ಹಂಚಿಕೊಂಡ ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣ ಬಳಕೆದಾರರ ಗಮನಕ್ಕೆ ಬಂದಿದೆ ಎಂದಿರುವ 22 ವರ್ಷದ ಯುವತಿ, ಡಿಜಿಟಲ್ ಹಿನ್ನೆಲೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
'2025ರಲ್ಲಿ ಅರೇಂಜ್ಡ್ ಮ್ಯಾರೇಜ್: ಹುಡುಗಿಯರು ಡಿಜಿಟಲ್ ಹಿನ್ನೆಲೆ ಪರಿಶೀಲನೆ ಮಾಡಬೇಕಾದ ಅಗತ್ಯ' ( Arranged Marriage in 2025: The need for girls to do digital background checks) ಎಂಬ ಶೀರ್ಷಿಕೆಯೊಂದಿಗೆ ಆ ಯುವತಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಾನು ಎಲ್ಲವನ್ನೂ ಪರಿಶೀಲಿಸಿದೆ. ಕೆಲವು ಉತ್ತಮ ಸ್ಥಾನದಲ್ಲಿರುವ ಪುರುಷರು ಎಷ್ಟು ಅಪಾಯಕಾರಿ ಎಂಬುದು ಇದರಿಂದ ನನಗೆ ಅರಿವಾಯಿತು ಎಂದಿರುವ ಯುವತಿ, ಹೆಚ್ಚಿನ ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುವುದಕ್ಕಾಗಿ ನಾನಿದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.
ಆತನಿಗೆ ವೃತ್ತಿಪರ ಕೆಲಸವಿತ್ತು. ಒಳ್ಳೆಯ ಸಂಪಾದನೆಯೂ ಇತ್ತು. ಹೊರಗೆ ಗೌರವಾನ್ವಿತ ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ, ವೈಯಕ್ತಿವಾಗಿ ಆತ ಬೇರೆ ರೀತಿ ಇದ್ದ. ಹೇಗೆಂದರೆ, ಭಾವನಾತ್ಮಕವಾಗಿ ಆತ ಅಸ್ಥಿರನಾಗಿದ್ದ, ಹೇಳದೇ ಕೇಳದೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ, ಸ್ವಯಂ-ಹಾನಿಯನ್ನು ವೈಭವೀಕರಿಸುತ್ತಿದ್ದ, ಒಪ್ಪಿಗೆಯನ್ನು ನಿರಾಕರಿಸುತ್ತಿದ್ದ ಮತ್ತು ಸಂಭಾಷಣೆಗಳನ್ನು ನಿಯಂತ್ರಿಸುವ ಗೀಳನ್ನು ಹೊಂದಿದ್ದ ಎಂದು ಯುವತಿ ಹೇಳಿಕೊಂಡಿದ್ದಾಳೆ.
ನಾನು ನನ್ನ ಫ್ರೆಂಡ್ ಐಡಿ ಬಳಸಿ ಆತನೊಂದಿಗೆ ಮಾತನಾಡಿದೆ. ಅವನು ಗ್ರಾಫಿಕ್ ಫೋಟೋಗಳನ್ನು ಕಳುಹಿಸುವ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವ ಅತಿಯಾದ ಗೀಳು ಹೊಂದಿದ್ದ. ಅಚ್ಚರಿ ಏನೆಂದರೆ, ಈ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ. ಅದೊಂದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಿದ್ದ ಎಂದು ಯುವತಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಕೆಲಸ, ಸ್ಟೇಟಸ್ ಅಥವಾ ಕುಟುಂಬದ ಹಿನ್ನೆಲೆಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಲಿಂಕ್ಡ್ಇನ್ ಹಾಗೂ ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳ ಕಾಮೆಂಟ್ಗಳನ್ನು ಒಮ್ಮೆ ಪರಿಶೀಲಿಸಿ. ನೀವೆಲ್ಲ ಬುದ್ಧಿವಂತರಾಗಿರಿ, ವಿಷಯಗಳನ್ನು ಸಂಶೋಧಿಸಿ ಮತ್ತು ಏನಾದರೂ ತಪ್ಪಾಗಿದೆ ಎಂದು ನಿಮಗೆ ತಿಳಿದಾಗ ಅದನ್ನು ನಂಬಿರಿ ಎಂದು ಯುವತಿ ಮದುವೆ ಆಗುವವರಿಗೆ ಸಲಹೆಯನ್ನು ನೀಡಿದ್ದಾಳೆ. (ಏಜೆನ್ಸೀಸ್)