

Marriage Broken: ತಾಳಿ ಕಟ್ಟುವ ವೇಳೆ ಕೈಯಲ್ಲಿ ಹೂವಿನ ಮಾಲೆ ಎಂಬ ಹಾಡಿನ ಮೂಲಕ ಶುರುವಾಗುತ್ತಿದ್ದ ಮೂರು ಗಂಟಿನ ಸಮಾರಂಭ, ಇದೀಗ ಪ್ರೀ-ವೆಡ್ಡಿಂಗ್, ದುಬಾರಿ ವೆಚ್ಚದಲ್ಲಿ ಮುಗಿದು ಹೋಗುತ್ತಿವೆ. ಹೊಸ ಬಾಳಿನ ಹೊಸ್ತಿಲಲ್ಲಿ, ನೂರಾರು ಕನಸು ಕಾಣುತ ಸಪ್ತಪದಿ ತುಳಿಯುವ ಜೋಡಿಗಳು, ತಮ್ಮ ದ್ವಿತೀಯಾರ್ಧದ ಜೀವನವನ್ನು ಉತ್ತಮವಾಗಿ ಕಟ್ಟಿಕೊಂಡು ಸಾಗುವ ಮಹಾದಾಸೆಯನ್ನು ಹೊಂದಿರುತ್ತಾರೆ. ಆದರೆ, ಯಾರೋ ಒಬ್ಬರು ಮಾಡುವ ಎಡವಟ್ಟಿಗೆ ಅಥವಾ ತಪ್ಪು ನಿರ್ಧಾರಗಳಿಂದ ಮತ್ತೊಬ್ಬರ ಕನಸು ನುಚ್ಚುನೂರಾಗುವುದು ನಿಜಕ್ಕೂ ದುರಂತವೇ ಸರಿ.
ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ತೀರ ಸಾಮಾನ್ಯವಾಗಿಬಿಟ್ಟಿದೆ. ಲಗ್ನ ಕೂಡಿಸಿ, ಅಕ್ಷತೆ ತಯಾರಿಸಿ, ಊರ ಮಂದಿ-ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಹಂಚಿ, ಇನ್ನೇನು ತಾಳಿ ಕಟ್ಟುವ ಶುಭ ಘಳಿಗೆಗೆ ಸನ್ನಿಹಿತವಾದಾಗ ಮದುವೆ ಮುರಿದು ಬೀಳುವ ಸಂಗತಿ ನಿಜಕ್ಕೂ ಎಂಥವರನ್ನು ಕೆರಳಿಸುತ್ತದೆ, ಭಾರೀ ಆಘಾತಕ್ಕೆ ದೂಡುತ್ತದೆ. ಇಂಥ ಘಟನೆಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದೆ. ಇಲ್ಲೊಂದು ಘಟನೆ ಕೂಡ ಅದನ್ನೇ ಹೇಳಿದೆ. ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮದುವೆ ಬೇಡ ಎಂದು ನಿರಾಕರಿಸಿದ ವಧು, ನನಗೆ ಈ ವಿವಾಹ ಇಷ್ಟವಿಲ್ಲ ಎಂದು ಹೇಳಿ ಮಂಟಪದಿಂದ ಎದ್ದು ಹೋಗಿದ್ದಾಳೆ.
ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಥೇಣಿ ಜಿಲ್ಲೆಯ ಆಂಡಿಪಟ್ಟಿ ಪ್ರದೇಶದ ಯುವ ಪದವೀಧರ ಮಗನಿಗೆ ಪುದುಚೇರಿಯ ಯುವತಿಯೊಂದಿಗೆ ಮದುವೆ ಏರ್ಪಡಿಸಿದ್ದ ಪೋಷಕರು, ಮಗನ ಮದುವೆಯನ್ನು ಜೋರಾಗಿ ಮಾಡಿ ಮುಗಿಸಬೇಕು ಎಂಬ ಆಸೆಯನ್ನು ಹೊತ್ತಿದ್ದರು. ಈ ಸಂದರ್ಭದಲ್ಲಿ, ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡು, ವಿವಾಹ ಸಮಾರಂಭವನ್ನು ಗುರುವಾರ (ಮೇ.29) ಆಂಡಿಪಟ್ಟಿಯಲ್ಲಿ ಏರ್ಪಡಿಸಿತ್ತು. ಬುಧವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿಯ ಮದುವೆ ಈಗ ಮುರಿದುಬಿದ್ದಿದೆ.
ವಧು-ವರರ ಪೋಷಕರ ನಡುವೆ ಉಂಟಾದ ಕೆಲ ಭಿನ್ನಾಭಿಪ್ರಾಯಗಳು ಜಗಳಕ್ಕೆ ತಿರುಗಿ, ಸಂಬಂಧಿಕರ ಮಧ್ಯಸ್ಥಿಕೆಯಿಂದ ಸಮಾಧಾನಕ್ಕೆ ಬಂದಿತು. ಇದಾದ ಬಳಿಕ ಎಂದಿನಂತೆ ಮದುವೆಯ ಸಿದ್ಧತೆಗಳಲ್ಲಿ ತೊಡಗಿದ ಕುಟುಂಬಸ್ಥರು, ಮದುವೆ ಮಂಟಪಕ್ಕೆ ಆಗಮಿಸಿ, ವಿವಾಹ ಕಾರ್ಯಗಳನ್ನು ಮುಗಿಸಿ, ತಾಳಿ ಕಟ್ಟುವ ಕೊನೆ ಹಂತ ತಲುಪಿದ್ದರು. ಇನ್ನೇನು ವರ ತಾಳಿ ಕಟ್ಟಬೇಕು, ಅಷ್ಟರಲ್ಲಿ ವಧು ಇದ್ದಕ್ಕಿದ್ದಂತೆ ಮದುವೆಯ ಮಂಟಪದಿಂದ ಎದ್ದು ಹೋದಳು. 'ನನಗೆ ಈ ಮದುವೆ ಬೇಡ, ನನಗೆ ಆಸಕ್ತಿ ಇಲ್ಲ' ಎಂದು ಹೇಳಿದ್ದಾಳೆ. ಇದನ್ನು ಕೇಳಿ, ವರ ಮತ್ತು ಅವನ ಸಂಬಂಧಿಕರು ಆಘಾತಕ್ಕೊಳಗಾಗಿದ್ದು, ಭಾರೀ ನೋವಿನಿಂದ ಮದುವೆಯನ್ನು ಮುರಿದುಕೊಂಡರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).