

Kerala Rains: ಹವಾಮಾನ ವೈಪರೀತ್ಯದಿಂದ ಕಳೆದ ಒಂದೆರೆಡು ದಿನಗಳಿಂದ ಕೇರಳ ಗಡಿಭಾಗಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆಯಾಗಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದ್ದೇ ಆದರೂ ವರುಣಾರ್ಭಟಕ್ಕೆ ಜನರು ಹೈರಾಣಾಗಿದ್ದಾರೆ.
ನಿರಂತರ ಹಾಗೂ ಭಾರೀ ಮಳೆಗೆ ನಗರದ 30ಕ್ಕೂ ಅಧಿಕ ಮನೆಗಳು ಮಳೆಗೆ ಜಲಾವೃತಗೊಂಡಿವೆ. ರಸ್ತೆಗಳು ಮುಚ್ಚಿಹೋಗಿವೆ. ಮಳೆಗೆ ಓರ್ವ ವೃದ್ಧೆ ಸಾವಿಗೀಡಾದರೆ, ವಿಝಿಂಜಂನಲ್ಲಿ ಒಂಬತ್ತು ಮೀನುಗಾರರು ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಾಸರಗೋಡು ಜಿಲ್ಲೆಯ ಉತ್ತರ ಭಾಗ ಮತ್ತು ಕಣ್ಣೂರಿನ ಅನೇಕ ಸ್ಥಳಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕಣ್ಣೂರು ಜಿಲ್ಲೆಯ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಸ್ಥಳೀಯ ನಿವಾಸಿಗಳನ್ನು ವಿವಿಧ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಂದೇ ಭಾರತ್ ಸೇರಿದಂತೆ ನಾಲ್ಕು ರೈಲುಗಳು ಮಳೆಯಿಂದಾಗಿ ತಡವಾಗಿ ಹೊರಟ್ಟಿದ್ದು ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಮರಗಳು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಎದುರಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಆರೆಂಟ್ ಅಲರ್ಟ್ ಮುಂದುವರಿದಿದೆ.
ಕೊಲ್ಲಂ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿನ ಶಾಲೆಗಳಿಗೆ ಇಂದು ರಜೆ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆಯಾದರೆ, ಶಾಲೆಗಳಿಗೆ ರಜೆ ಕೂಡ ಮುಂದುವರಿಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ಕೈಗೊಳ್ಳವುದಾಗಿ ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ತಿಳಿಸಿದ್ದಾರೆ,(ಏಜೆನ್ಸೀಸ್).