ಥಗ್​ ಲೈಫ್​ ಚಿತ್ರದಲ್ಲಿ ಕಮಲ್​ ಹಾಸನ್​ ಜೊತೆ ಲಿಪ್​ಲಾಕ್​: ಅಚ್ಚರಿ ಹೇಳಿಕೆ ನೀಡಿದ ನಟಿ ಅಭಿರಾಮಿ! Kamal Haasan

Kamal Haasan
Published on

Kamal Haasan : ಸಕಲಕಲಾವಲ್ಲಭ ಕಮಲ್ ಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ಕಾಂಬೋದಲ್ಲಿ ತಯಾರಾಗಿರುವ 'ಥಗ್ ಲೈಫ್' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಸಿನಿಪ್ರೇಮಿಗಳಿಗೆ ಗೊತ್ತೇ ಇದೆ. ಇದಾದ ನಂತರ ಭುಗಿಲೆದ್ದಿರುವ ವಿವಾದಗಳಿಗೆ ನಟಿ ಅಭಿರಾಮಿ ಪ್ರತಿಕ್ರಿಯಿಸಿದ್ದಾರೆ.

70 ವರ್ಷದ ಕಮಲ್​ ಹಾಸನ್​ ಮತ್ತು 42 ವರ್ಷದ ಅಭಿರಾಮಿ ನಡುವಿನ ಲಿಪ್ ಲಾಕ್ ದೃಶ್ಯಗಳು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಟ್ರೈಲರ್‌ನಲ್ಲಿರುವ ದೃಶ್ಯ ಕೇವಲ ಮೂರು ಸೆಕೆಂಡುಗಳಷ್ಟು ಉದ್ದವಾಗಿದ್ದು, ಅದರ ಬಗ್ಗೆ ಇಷ್ಟೊಂದು ಚರ್ಚೆ ಸೃಷ್ಟಿಸುವುದು ಅನಗತ್ಯ ಎಂಬ ಹೇಳಿಕೆಯನ್ನು ನಟಿ ಅಭಿರಾಮಿ ನೀಡಿದ್ದಾರೆ.

ಇಂದು ಏನು ಬೇಕಾದರೂ ವಿವಾದವಾಗಬಹುದು. ಅದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಣಿರತ್ನಂ ಸರ್ ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದ್ದು ಏಕೆ ಎಂಬುದನ್ನು ನಾನು ಪ್ರಶ್ನಿಸುವುದಿಲ್ಲ. ಅವರ ತರ್ಕ ಏನೇ ಇರಲಿ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಇದು ಕೇವಲ ಮೂರು ಸೆಕೆಂಡುಗಳ ದೃಶ್ಯ. ಟ್ರೇಲರ್ ಕೆಲವು ತಪ್ಪು ತಿಳುವಳಿಕೆಯನ್ನು ಉಂಟುಮಾಡಿದೆ ಅಷ್ಟೇ. ಸಿನಿಮಾದಲ್ಲಿ ಆ ದೃಶ್ಯ ಮತ್ತು ಲಿಪ್​ಲಾಕ್​ಗೆ ಕಾರಣವಾಗುವ ವಿಷಯಗಳನ್ನು ನೋಡಿದಾಗ ಯಾರಿಗೂ ಸಮಸ್ಯೆ ಇರುವುದಿಲ್ಲ. ಅದು ಆ ದೃಶ್ಯಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಅದರ ಬಗ್ಗೆ ಅಷ್ಟೊಂದು ಮಾತನಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾವುದೇ ತೀರ್ಮಾನಗಳಿಗೆ ಬರುವ ಮೊದಲು ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರನ್ನು ನಾನು ವಿನಂತಿಸುತ್ತೇನೆ ಎಂದು ಅಭಿರಾಮಿ ಹೇಳಿದರು.

ಕಮಲ್ ಹಾಸನ್-ಮಣಿರತ್ನಂ ಅವರ ಬಹುನಿರೀಕ್ಷಿತ ಥಗ್ ಲೈಫ್‌ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೈಲರ್​ ಆಕ್ಷನ್ ದೃಶ್ಯಗಳಿಂದ ತುಂಬಿದೆ. ಈ ಚಿತ್ರದಲ್ಲಿ ಸಿಲಂಬರಸನ್ (ಸಿಂಬು), ಜೋಜು ಜಾರ್ಜ್, ತ್ರಿಷಾ, ಅಭಿರಾಮಿ, ಐಶ್ವರ್ಯಾ ಲಕ್ಷ್ಮಿ, ನಾಸರ್, ಅಶೋಕ್ ಸೆಲ್ವನ್, ಅಲಿ ಫಜಲ್, ಪಂಕಜ್ ತ್ರಿಪಾಠಿ, ಜಿಶು ಸೇನ್‌ಗುಪ್ತಾ, ಸನ್ಯಾ ಮಲ್ಹೋತ್ರಾ, ರೋಹಿತ್ ಶರಫ್ ಹಾಗೂ ವೈಯಾಪುರಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ಮದ್ರಾಸ್ ಟಾಕೀಸ್, ರೆಡ್ ಜೈಂಟ್ ಮೂವೀಸ್, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ನಿರ್ಮಿಸಿದ್ದಾರೆ. 'ಥಗ್ ಲೈಫ್' 37 ವರ್ಷಗಳ ನಂತರ ಕಮಲ್ ಹಾಸನ್ ಮತ್ತು ಮಣಿರತ್ನಂ ಒಟ್ಟಿಗೆ ನಟಿಸುತ್ತಿರುವ ಚಿತ್ರವೂ ಆಗಿದೆ.

ಟ್ರೈಲರ್ ಬಿಡುಗಡೆಯಾದ ನಂತರ, ಕಮಲ್ ಹಾಸನ್ ಜೊತೆ ನಟಿಸಿದ ನಟಿಯರ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಪರಿಗಣಿಸಬೇಕು ಎಂಬ ಟೀಕೆ ವ್ಯಕ್ತವಾಗಿತ್ತು. ನಟಿ ಅಭಿರಾಮಿ ಮತ್ತು ತ್ರಿಷಾ 42 ವರ್ಷ ವಯಸ್ಸಿನವರು. ಅಲ್ಲದೆ, ಅನೇಕರು ಭಾವಿಸಿದಂತೆ ತ್ರಿಷಾ ಈ ಚಿತ್ರದಲ್ಲಿ ಸಿಲಂಬರಸನ್ ಜೋಡಿಯಲ್ಲ ಎಂದು ಟ್ರೈಲರ್‌ನಿಂದ ತಿಳಿಯಬಹುದು. ಇದು ಕೂಡ ಚರ್ಚೆಯ ವಿಷಯವಾಗಿದೆ. ಕಮಲ್‌ಗೆ ಇಬ್ಬರು ನಾಯಕಿಯರಿದ್ದಾರೆಯೇ ಎಂಬುದು ಪ್ರಶ್ನೆ ಹುಟ್ಟುಹಾಕಿದೆ. ತ್ರಿಷಾ, ಶ್ರುತಿ ಹಾಸನ್‌ಗಿಂತ ಕೇವಲ ಮೂರು ವರ್ಷ ದೊಡ್ಡವರು. ಕಮಲ್ ಹಾಸನ್‌ಗೆ ನಟಿಯರೊಂದಿಗೆ 30 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಹೀಗಾಗಿ ಅಭಿರಾಮಿ ಮತ್ತು ಕಮಲ್ ಹಾಸನ್ ಅವರ ಲಿಪ್ ಲಾಕ್ ದೃಶ್ಯಗಳು ಟೀಕೆಗೆ ಗುರಿಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net