

Personal Loan: ಶ್ರೀಮಂತರನ್ನು ಹೊರತುಪಡಿಸಿ ಸಾಲದ ಅಗತ್ಯತೆ ಯಾರಿಗಿಲ್ಲ ಹೇಳಿ? ಯಾವುದಾದರೂ ಒಂದು ಕೆಲಸಕ್ಕೆ ಹಣದ ಅಭಾವ ಕಾಡೇ ಕಾಡುತ್ತದೆ. ಇಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ, ಮೌಲ್ಯ ಮತ್ತು ಅರ್ಥಪೂರ್ಣವಲ್ಲದ ವಸ್ತುಗಳಿಗೆ ಅನಗತ್ಯ ಖರ್ಚು ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಆರೋಗ್ಯಕರ ಊಟ, ಉತ್ತಮ ಜೀವನ ನಡೆಸಲು ಬೇಕಾದದ್ದನ್ನು ಬಿಟ್ಟು ಐಷಾರಾಮಿ ಜೀವನ ನಡೆಸುವ ಆಸೆಗೆ ಬಿದ್ದು ಮತ್ತು ಇನ್ನೊಬ್ಬರಂತೆ ದುಬಾರಿ ವಸ್ತುಗಳನ್ನು ಖರೀದಿಸುವ ಭರದಲ್ಲಿ ಇಂತಹ ಸಾಲದ ಮೊರೆ ಹೋಗುವವರ ಸಂಖ್ಯೆ ಅಧಿಕವೇ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವ್ಯವಸ್ಥೆಗಳು ಹೆಚ್ಚು ಚಾಲ್ತಿಯಲ್ಲಿರುವ ಹಿನ್ನೆಲೆ ನಾವು ಕುಳಿತ ಜಾಗದಿಂದಲೇ ಪರ್ಸನಲ್ ಲೋನ್ ಸೇರಿದಂತೆ ಹಲವು ಲೋನ್ಗೆ ಅರ್ಜಿ ಸಲ್ಲಿಸಬಹುದು ಮತ್ತು ಕೆಲವೇ ಗಂಟೆಗಳಲ್ಲಿ ಹಣವನ್ನೂ ಪಡೆಯುಬಹುದು. ಈ ಸರಳ ವಿಧಾನಗಳು ಇಂದು ಅನೇಕರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ.
ಆದಾಗ್ಯೂ, ಒಮ್ಮೆ ಸಾಲ ಪಡೆದ ಮೇಲೆ ನೀವು ಅವುಗಳನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಿದರೆ ಮಾತ್ರ ಬಡ್ಡಿಯ ಹೊರೆ ಮತ್ತು ಸಿಬಿಲ್ ಸ್ಕೋರ್ ಹೊಡೆತವನ್ನು ತಪ್ಪಿಸಬಹುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವ ಬ್ಯಾಂಕ್ನಿಂದಲೂ ಲೋನ್ ಪಡೆಯುವ ಅರ್ಹತೆ ನಿಮಗಿರುವುದಿಲ್ಲ. ವೈಯಕ್ತಿಕ ಸಾಲವನ್ನು ತ್ವರಿತವಾಗಿ ಮರುಪಾವತಿಸಲು ಮತ್ತು ಬಡ್ಡಿ ಹೊರೆಯನ್ನು ಕಡಿತಗೊಳಿಸಲು ನೀವು ಅನುಸರಿಸಬೇಕಾದ ಕೆಲವು ಸರಳ ಹಾಗೂ ಸುಲಭ ವಿಧಾನಗಳು ಹೀಗಿವೆ ಗಮನಿಸಿ.
ಮಾಸಿಕ ಕಂತಿನ ಜೊತೆಗೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ, ಸಾಲದ ಅವಧಿಯನ್ನು ಕಡಿಮೆ ಮಾಡಬಹುದು. ಇದು ಬಡ್ಡಿ ವೆಚ್ಚವನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ. ಉದಾ: ನೀವು 5 ಲಕ್ಷ ರೂ. ಸಾಲದ ಮೇಲೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 2,000 ರೂ. ಪಾವತಿಸಿದರೆ, ಕಟ್ಟಬೇಕಾದ ಇಎಂಐಗಳ ಅವಧಿಯನ್ನು 5 ವರ್ಷದಿಂದ 3.5 ವರ್ಷಗಳಿಗೆ ಇಳಿಸಲಾಗುತ್ತದೆ. ಹೆಚ್ಚಿನ ಬಡ್ಡಿದರದ ಸಾಲವನ್ನು ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ಗೆ ವರ್ಗಾಯಿಸುವುದರಿಂದ ಕಂತು ಮತ್ತು ಬಡ್ಡಿ ವೆಚ್ಚಗಳೆರಡೂ ಕಡಿಮೆಯಾಗುತ್ತವೆ.
ಆದಾಗ್ಯೂ, ಸಾಲ ವರ್ಗಾವಣೆಗೆ ಕೆಲವು ಶುಲ್ಕಗಳು ಇರಬಹುದು. ಎಲ್ಲಾ ವೆಚ್ಚಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಒಳಿತು ಹಾಗೂ ಮುಖ್ಯ. ನೀವು ಸಾಂದರ್ಭಿಕವಾಗಿ ನಿಮ್ಮ ಕಚೇರಿಯಿಂದ ಬೋನಸ್ಗಳು, ತೆರಿಗೆ ಮರುಪಾವತಿಗಳು ಮತ್ತು ಆಸ್ತಿ ಮಾರಾಟದಂತಹ ಆದಾಯವನ್ನು ಪಡೆಯಬಹುದು. ಅಂತಹ ಸಮಯದಲ್ಲಿ ನೀವು ಹೆಚ್ಚಿನ ಹಣವನ್ನು ಪಡೆದರೆ, ಈ ಆದಾಯವನ್ನು ಸಾಲದ ಖಾತೆಗೆ ಜಮಾ ಮಾಡಿ. ಇದು ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ.
ಸಾಮಾನ್ಯವಾಗಿ ಫ್ಲೋಟಿಂಗ್ ಬಡ್ಡಿ ಸಾಲಗಳ ಪೂರ್ವಪಾವತಿಗೆ ಯಾವುದೇ ಶುಲ್ಕವಿರುವುದಿಲ್ಲ, ಆದರೆ, ಕೆಲವು ಬ್ಯಾಂಕುಗಳು ಭಾಗಶಃ ಪಾವತಿಗಳನ್ನು ಅನುಮತಿಸುವುದಿಲ್ಲ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಕಡಿಮೆ ಸಾಲದ ದರವನ್ನು ಪಡೆಯಲು ಅರ್ಹರಾಗಿರುತ್ತೀರಿ. ನಿಮ್ಮ ಇಎಂಐಗಳನ್ನು ನಿಯಮಿತವಾಗಿ ಪಾವತಿಸುವುದರಿಂದ ನಿಮ್ಮ ಸ್ಕೋರ್ ಸುಧಾರಿಸುತ್ತದೆ. ನೀವು ನಿಮ್ಮ ಬ್ಯಾಂಕ್ನೊಂದಿಗೆ ಮಾತನಾಡಿ ಕಡಿಮೆ ಬಡ್ಡಿದರವನ್ನು ವಿನಂತಿಸಬಹುದು. ನೀವು ಉತ್ತಮ ಸ್ಕೋರ್ ಹೊಂದಿದ್ದರೆ ಕೆಲವು ಬ್ಯಾಂಕುಗಳು ನಿಮ್ಮ ಬಡ್ಡಿದರವನ್ನು ಕಡಿಮೆ ಮಾಡಲು ಸಿದ್ಧವಿರುತ್ತವೆ.
ಆರ್ಥಿಕ ವಿಷಯದಲ್ಲಿ ಕಟ್ಟುನಿಟ್ಟಿನಿಂದ ಇರಿ. ಅನಗತ್ಯ ಖರ್ಚುಗಳನ್ನು ಮಾಡಬೇಡಿ. ದುಬಾರಿ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ವೈಯಕ್ತಿಕ ಸಾಲದ ಮೊರೆ ಹೋಗಬೇಡಿ. ಇದೇ ನಿಮಗೆ ಆರ್ಥಿಕ ಬಿಕ್ಕಟ್ಟು ತಂದೊಡ್ಡುತ್ತದೆ. ಅನಗತ್ಯ ಸಾಲವನ್ನು ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಿ,(ಏಜೆನ್ಸೀಸ್).