

ಚಿಕ್ಕಬಳ್ಳಾಪುರ: ತಾಲೂಕಿನ ಸುದ್ದಹಳ್ಳಿಯಲ್ಲಿ ವೃದ್ಧೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ಮಾಂಗಲ್ಯಸರವನ್ನು ಕಿತು ಕಳ್ಳರು ಪರಾರಿಯಾಗಿದ್ದಾರೆ. ಆಂಜಿನಮ್ಮ (68) ಹಲ್ಲೆಗೊಳಗಾದವರು. ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿದ್ದಾಗ ಬಂದ ಅಪರಿಚಿತರು ನೀರು ಕೊಡುವಂತೆ ವೃದ್ಧೆಯನ್ನು ಕೇಳಿದ್ದಾರೆ. ಆಕೆ ಒಳಗೆ ಹೋಗುತ್ತಿದ್ದಂತೆ ಹಿಂಬಾಲಿಸಿದ ದುಷ್ಕರ್ಮಿಗಳು ವೃದ್ಧೆಯ ಬಾಯಿ ಮುಚ್ಚಿ, ಹಲ್ಲೆ ನಡೆಸಿದ್ದಾರೆ. ಕೊನೆಗೆ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ವೃದ್ಧೆ ಸಮೀಪದ ಹೂವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕಿನಲ್ಲಿ ಬಂದು ಮಹಿಳೆಯರ ಕೊರಳಿನಲ್ಲಿ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗುವುದು, ಮಾಹಿತಿ ಕೇಳುವ ನೆಪದಲ್ಲಿ ಮನೆಯೊಳಗೆ ಬಂದು ಆಭರಣ, ಹಣವನ್ನು ಕದಿಯುವುದು ಸೇರಿದಂತೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ವೃದ್ಧೆ ಬಾಯಾರಿಕೆಯನ್ನು ಹೇಳಿಕೊಂಡವರ ದಾಹವನ್ನು ನೀಗಿಸಲು ನೀರು ಕೊಟ್ಟು ನೋವು ಅನುಭವಿಸಿದ್ದಾಳೆ.