ಷೇರು ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ; ಬಿಎಸ್​ಇ ಸೂಚ್ಯಂಕ 70 ಸಾವಿರ ದಾಟುವುದು ಬಹುತೇಕ ನಿಶ್ಚಿತ

Share Market
Published on

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮತ್ತು ಎಲ್ & ಟಿ ಷೇರುಗಳು ವಿದೇಶಿ ನಿಧಿಯ ನಿರಂತರ ಒಳಹರಿವಿನ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುವುದರೊಂದಿಗೆ ಬಿಎಸ್​ಇ ಹಾಗೂ ನಿಫ್ಟಿ ಸೂಚ್ಯಂಕಗಳು ಬುಧವಾರದಂದು ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿ ದಾಖಲೆ ಬರೆದವು.

ಸತತ ಏಳನೇ ನೇರ ಅವಧಿಯಲ್ಲಿ ಷೇರು ಮಾರುಕಟ್ಟೆ ಏರಿಕೆ ಕಂಡಿತು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿರುವುದು ಕೂಡ ಈ ಉತ್ಸಾಹವನ್ನು ಹೆಚ್ಚಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

30-ಷೇರುಗಳ ಬಿಎಸ್‌ಇ ಸೂಚ್ಯಂಕವು 357.59 ಅಂಕಗಳು (ಶೇಕಡಾ 0.52) ಏರಿಕೆ ಕಂಡು 69,653.73 ರ ಹೊಸ ದಾಖಲೆಯಲ್ಲಿ ನೆಲೆಗೊಂಡಿತು. ದಿನದ ವಹಿವಾಟಿನ ನಡುವೆ ಇದು 69,744.62 ಕ್ಕೂ ಏರಿತ್ತು

ನಿಫ್ಟಿ ಸೂಚ್ಯಂಕ ಕೂಡ 82.60 ಅಂಕಗಳು ಅಥವಾ ಶೇಕಡಾ 0.40 ರಷ್ಟು ಏರಿಕೆಯಾಗಿ 20,937.70 ರ ಗರಿಷ್ಠ ಮಟ್ಟವನ್ನು ತಲುಪಿತು.

"ಪಂಚ ರಾಜ್ಯ ವಿಧಾನಸಭೆ ಚುನಾವಣೆಗಳ ನಂತರದಲ್ಲಿ ಮಾರುಕಟ್ಟೆಯಲ್ಲಿ ಆಶಾವಾದ ವೃದ್ಧಿಯಾಗಿದೆ. ನೀತಿನಿರೂಪಣೆಯ ನಿರಂತರತೆಯನ್ನು ಇದು ದೃಢೀಕರಿಸುತ್ತಿದ್ದು, ಹೂಡಿಕೆದಾರರ ನಿರೀಕ್ಷೆಗಳನ್ನು ಪೂರೈಸುತ್ತದೆ. ಅಮೆರಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಹಣದುಬ್ಬರ ಕಡಿಮೆಯಾಗುತ್ತಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆ ಉತ್ತೇಜಿತಗೊಂಡಿದೆ. ತೈಲ ಬೆಲೆಗಳಲ್ಲಿ ಕುಸಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ತಗ್ಗುತ್ತಿರುವುದರಿಂದ ಭಾರತೀಯ ಮಾರುಕಟ್ಟೆಯ ಆಕರ್ಷಣೆ ಹೆಚ್ಚಾಗುತ್ತಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಮುಖ ಷೇರುಗಳ ಪೈಕಿ ವಿಪ್ರೋ ಗರಿಷ್ಠ 3.85 ಶೇಕಡಾ ಲಾಭ ಗಳಿಸಿತು. ನಂತರದಲ್ಲಿ ಐಟಿಸಿ ಶೇ. 2.51; ಎಲ್ ಆ್ಯಂಡ್ ಟಿ ಮತ್ತು ಟಿಸಿಎಸ್ ಕ್ರಮವಾಗಿ ಶೇ. 2.31 ಮತ್ತು ಶೇ.2.13ರಷ್ಟು ಲಾಭ ಗಳಿಸಿದವು. ಟಾಟಾ ಮೋಟಾರ್ಸ್, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಕೂಡ ಲಾಭ ಗಳಿಸಿದವು.

ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಹಿನ್ನಡೆ ಅನುಭವಿಸಿದವು.

ಆರ್​ಬಿಐ ಬಡ್ಡಿ ದರದಲ್ಲಿ ಯಥಾಸ್ಥಿತಿ ನಿರೀಕ್ಷೆ:

ಶುಕ್ರವಾರ ಪ್ರಕಟಿಸಲಿರುವ ತನ್ನ ದ್ವೈಮಾಸಿಕ ಹಣಕಾಸು ನೀತಿ ನಿರ್ಧಾರದಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿ ದರದ ಯಥಾಸ್ಥಿತಿ ಕಾಯ್ದುಕೊಳ್ಳುತ್ತದೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 5,223.51 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಸ್ಟಾಕ್​ ಎಕ್​​ಚೇಂಜ್​ ಮಾಹಿತಿ ನೀಡಿದೆ.

ಏತನ್ಮಧ್ಯೆ, ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ, ಹ್ಯಾಂಗ್ ಸೆಂಗ್ ಮತ್ತು ನಿಕ್ಕಿ 225 ಅನುಕ್ರಮವಾಗಿ 0.90 ಶೇಕಡಾ ಮತ್ತು 2.04 ರಷ್ಟು ಲಾಭದೊಂದಿಗೆ ಮುಕ್ತಾಯಗೊಂಡರೆ, ಚೀನಾದ ಶಾಂಘೈ ಕಾಂಪೋಸಿಟ್ ಶೇಕಡಾ 0.11 ರಷ್ಟು ನಷ್ಟ ಅನುಭವಿಸಿತು.

ಐರೋಪ್ಯ ಮಾರುಕಟ್ಟೆಗಳ ಪೈಕಿ ಫ್ರಾನ್ಸ್‌ನ CAC 40 1.08 ಶೇಕಡಾ ಏರಿಕೆಯಾಗಿದೆ. ಲಂಡನ್‌ನ FTSE 100 ಶೇಕಡಾ 0.29 ಗಳಿಸಿದೆ. ಜರ್ಮನಿಯ DAX ಶೇಕಡಾ 0.7 ಹೆಚ್ಚಾಗಿದೆ.

ಅಮೆರಿಕ ಮಾರುಕಟ್ಟೆಗಳು ಮಂಗಳವಾರ ಮಿಶ್ರ ಫಲಿತಾಂಶ ಅನುಭವಿಸಿವೆ. S & P 500 ಶೇಕಡಾ 0.06 ರಷ್ಟು ನಷ್ಟ ದಾಖಲಿಸಿದೆ.

ಬುಧವಾರ, ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 0.31 ರಷ್ಟು ಕಡಿಮೆಯಾಗಿ 76.96 ಡಾಲರ್​ ದರದಲ್ಲಿ ವಹಿವಾಟು ನಡೆಸುತ್ತಿದೆ.

ಮಂಗಳವಾರ, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 431.02 ಅಂಕಗಳು ಅಥವಾ ಶೇಕಡಾ 0.63 ರಷ್ಟು ಜಿಗಿದು 69,296.14 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ನಿಫ್ಟಿ ಕೂಡ 168.50 ಅಂಕಗಳು ಅಥವಾ ಶೇಕಡಾ 0.81 ರಷ್ಟು ಏರಿಕೆಯಾಗಿ ತನ್ನ ಜೀವಿತಾವಧಿಯ ಗರಿಷ್ಠ 20,855.30 ಕ್ಕೆ ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net