More

    ಮಿಸ್​ ಆದ ರೈಲನ್ನೇ ಏರಿದ್ದು ಹೇಗೆ?.. ಬೆಂಗಳೂರಿನ ಆಟೋ ಡ್ರೈವರ್​ ವಿಶಿಷ್ಟ ಸಾಹಸಕ್ಕೆ ನೆಟ್ಟಿಗರ ಶ್ಲಾಘನೆ

    ಬೆಂಗಳೂರು: ಇದೊಂಥರಾ ಸಿನಿಮಾದಲ್ಲಿನ ಘಟನೆಯಂತಿದೆ. ರೀಲ್​ ಸ್ಟೋರಿ ಅಲ್ಲ… ರಿಯಲ್​ ಸ್ಟೋರಿ. ಟ್ರಾಫಿಕ್​ ಜಾಮ್​ನಿಂದ ವಿಳಂಬವಾದ ಕಾರಣ ಪ್ರಯಾಣಿಕರಿಬ್ಬರಿಗೆ ರೈಲು ತಪ್ಪುವ ಭೀತಿ ಎದುರಾಗುತ್ತದೆ. ಆದರೂ ಆಟೋ ಡ್ರೈವರ್​ ಒಬ್ಬ ಇವರಿಬ್ಬರೂ ರೈಲು ಏರುವಂತೆ ಮಾಡುವಲ್ಲಿ ಇದೇ ಟ್ರಾಫಿಕ್​ನ ನಡುವೆಯೇ ಸಾಹಸಮಯ ರೀತಿಯಲ್ಲಿ ಯಶ ಸಾಧಿಸುತ್ತಾನೆ.

    ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಆದಿಲ್ ಹುಸೇನ್ ಎಂಬುವರು ಎಕ್ಸ್ ಪೋಸ್ಟ್‌ನಲ್ಲಿ ತಮ್ಮ ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಆಟೋ ಡ್ರೈವರ್ ಒಬ್ಬರು ತಮಗೆ ಮತ್ತು ತಮ್ಮ ಸ್ನೇಹಿತನಿಗೆ ಈಗಾಗಲೇ ತಪ್ಪಿದ ರೈಲನ್ನು ಹಿಡಿಯಲು ಹೇಗೆ ಸಹಾಯ ಮಾಡಿದರು ಎಂಬುದನ್ನು ವಿವರಿಸಿದ್ದಾರೆ.

    ಸಾಕಷ್ಟು ತಡವಾದ ಕಾರಣ ಬೆಂಗಳೂರು ಸಿಟಿ ಜಂಕ್ಷನ್‌ನಿಂದ (ಮೆಜೆಸ್ಟಿಕ್​) ತಮ್ಮ ರೈಲು ತಪ್ಪಿಹೋಗುವ ಭೀತಿಯಲ್ಲಿದ್ದ ಆದಿಲ್​ ಹಾಗೂ ಆತನ ಸ್ನೇಹಿತರಿಗೆ ಆಟೋ ಚಾಲಕರೊಬ್ಬರು ಸಿಕ್ಕಿದ್ದಾರೆ. ತಕ್ಷಣವೇ ಚಾಲಕ ಈ ಸಮಸ್ಯೆಗೆ ಪರಿಹಾರವೊಂದನ್ನು ಸೂಚಿಸಿದ್ದಾರೆ. 17 ಕಿಲೋಮೀಟರ್ ದೂರದಲ್ಲಿರುವ ಮುಂದಿನ ನಿಲ್ದಾಣ, ಯಲಹಂಕ ಜಂಕ್ಷನ್​ನಿಂದ ರೈಲು ಹತ್ತಿಸುವ ಭರವಸೆ ನೀಡಿದ್ದಾರೆ. ಮೆಜೆಸ್ಟಿಕ್​ ನಿಲ್ದಾಣದಿಂದ 20-25 ನಿಮಿಷಗಳಲ್ಲಿ ರೈಲು ಯಲಹಂಕ ಜಂಕ್ಷನ್​ಗೆ ತಲುಪಲಿದ್ದು, ಅಷ್ಟರೊಳಗೆ ಆಟೋ ಮೂಲಕ ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ.

    ಹಿಂಜರಿಯುತ್ತಲೇ ಅರೆಮನಸ್ಸಿನಿಂದ ಇದಕ್ಕೊಪ್ಪಿದ ಆದಿಲ್, ತಮ್ಮ ಸ್ನೇಹಿತನೊಂದಿಗೆ ಆಟೋ ಏರಿದ್ದಾರೆ. ಆದರೆ, ಅಚ್ಚರಿ ಮೂಡಿಸುವ ರೀತಿಯಲ್ಲಿ ಆಟೋ ಚಾಲಕನು ರೈಲು ಬರಲು 5 ನಿಮಿಷಗಳು ಉಳಿದಿರುವಂತೆಯೇ ಯಲಹಂಕ ಜಂಕ್ಷನ್​ಗೆ ಅವರನ್ನು ತಲುಪಿಸಿದ್ದಾನೆ. ಈ ಸಾಹಸಕ್ಕೆ ಆಟೋ ಚಾಲಕನಿಗೆ ದೊರೆತಿದ್ದು ರೂ 2500 ಬಹುಮಾನ.

    ಟ್ರಾಫಿಕ್ ವಿಳಂಬದ ಕಾರಣ ಅವರಿಗೆ ಮೆಜೆಸ್ಟಿಕ್​ ತಲುಪುವುದು ತಡವಾಗಿತ್ತು. ಆದರೆ, ಆಟೋ ಡ್ರೈವರ್ ಮುಂದಿನ ನಿಲ್ದಾಣವಾದ ಯಲಹಂಕ ಜಂಕ್ಷನ್‌ಗೆ ತಲುಪಿಸಿ ರೈಲು ತಪ್ಪದಂತೆ ನೋಡಿಕೊಂಡಿದ್ದಾನೆ. ಆಟೋ ಚಾಲಕನು ವಿಶಿಷ್ಟ ತಂತ್ರಗಳ ಬಳಸಿ, ವೇಗ ಮತ್ತು ದಕ್ಷತೆಯೊಂದಿಗೆ ಟ್ರಾಫಿಕ್ ನಡುವೆಯೇ ದಾರಿ ಮಾಡಿಕೊಂಡು ಸಾಹಸ ಮೆರೆದಿದ್ದಾನೆ.

    ಆದಿಲ್ ಅವರು “ಪೀಕ್ ಬೆಂಗಳೂರು ಎಕ್ಸ್​ಪೀರಿಯನ್ಸ್” ಎಂಬ ಶೀರ್ಷಿಕೆಯಲ್ಲಿ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ. ಆದಿಲ್​ ಅವರು ಬಾಲಿವುಡ್ ಚಲನಚಿತ್ರ ‘ಜಬ್ ವಿ ಮೆಟ್’ ನ ದೃಶ್ಯ ಮೆಲುಕು ಹಾಕಿದ್ದಾರೆ, ಅಲ್ಲಿ ಆದಿತ್ಯ ಕಶ್ಯಪ್ (ಶಾಹಿದ್ ಕಪೂರ್ ನಟಿಸಿದ್ದಾರೆ) ಅವರು ಗೀತ್ (ಕರೀನಾ ಕಪೂರ್) ಅವರನ್ನು ಮುಂದಿನ ರೈಲು ನಿಲ್ದಾಣಕ್ಕೆ ದಾಖಲೆ ಸಮಯದಲ್ಲಿ ತಲುಪಲು ವಾಹನದಲ್ಲಿ ಪ್ರಯಾಣಿಸುವ ದೃಶ್ಯ ಇದು. ಮೆಜೆಸ್ಟಿಕ್​ ರೈಲು ನಿಲ್ದಾಣದಿಂದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲನ್ನು ಹಿಡಿಯಲು ತಾನು ಗಡಿಯಾರದ ವಿರುದ್ಧ ಹೇಗೆ ಓಡಿದೆ ಎಂದು ವಿವರಿಸಿರುವ ಆದಿಲ್ ತಮ್ಮ ಅನುಭವವನ್ನು ಎಕ್ಸ್‌ನಲ್ಲಿ ವಿವರಿಸಿದ್ದಾರೆ. ಆಟೋ ಡ್ರೈವರ್​ ಸಾಹಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts