

ಸಾಗರ: ನಗರದ ಮಾರಿಕಾಂಬಾ ಸಮಿತಿಯು ನ್ಯಾಯಾಲಯ ನಿಗದಿಪಡಿಸಿದ ದಿನಾಂಕದೊಳಗೆ ಸರ್ವಸದಸ್ಯರ ಸಭೆ ಕರೆದು ಚುನಾವಣೆ ದಿನ ಘೋಷಿಸಬೇಕು ಎಂದು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಿಶ್ ಗುರು ಒತ್ತಾಯಿಸಿದರು.
ನಮ್ಮದೇ ಅಧಿಕೃತ ನೋಂದಾಯಿತ ಸಮಿತಿ. ಸಮಿತಿ ನೋಂದಣಿ ಮಾಡಿಸಲು ಬರುವುದಿಲ್ಲ ಎಂದು ಹಾಲಿ ಸಮಿತಿ ಹೇಳಿದಾಗ ನಮ್ಮ ಸಮಿತಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗಮನಕ್ಕೆ ತರಲಾಗಿತ್ತು. ಜಿಲ್ಲಾಧಿಕಾರಿ ಸೂಚನೆಯಂತೆ ನಾವು ನೋಂದಣಿ ಮಾಡಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಎಂದು ನೋಂದಣಿಯಾದ ನಂತರ ಡಿಸಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಸಮಿತಿಯೇ ಅಧಿಕೃತ ಎಂದು ಆದೇಶ ಮಾಡಲು ಸಾಗರ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಜಾತ್ರೆ ಸಮೀಪಿಸಿದ್ದರಿಂದ ನಾವು ಸಮಿತಿ ಮೇಲೆ ಹೆಚ್ಚು ಒತ್ತಡ ತಂದಿರಲಿಲ್ಲ. ಸಮಿತಿಗೆ ನೀಡಿದ ಬೈಲಾ ಸಹ ನಮ್ಮ ವಕೀಲರೇ ಸಿದ್ಧಪಡಿಸಿದ್ದಾರೆ. ಇದೀಗ ಜಿಲ್ಲಾ ನ್ಯಾಯಾಲಯ ಮೂರು ತಿಂಗಳಿನಲ್ಲಿ ಚುನಾವಣೆ ನಡೆಸಲು ಆದೇಶಿಸಿದೆ. ಸಮಿತಿ ಮೀನಮೇಷ ಎಣಿಸದೆ ದಿನಾಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಎಂ.ನಾಗರಾಜ್ ಮಾತನಾಡಿ, ದೇವಸ್ಥಾನದ ಆಡಳಿತ ವ್ಯವಸ್ಥೆ ಕಾನೂನಿನ ಪ್ರಕಾರ ನಮ್ಮ ಕೈಗೆ ಬರುವ ಎಲ್ಲ ಅವಕಾಶಗಳಿದ್ದವು. ಆದರೆ ನಾವು ಜಾತ್ರೆ ಸಮಯದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಸುಮ್ಮನಾಗಿದ್ದೆವು. ದೇವಸ್ಥಾನದ ಹಿತದೃಷ್ಟಿ ಮತ್ತು ಮುಜರಾಯಿ ಇಲಾಖೆಗೆ ಸೇರಬಹುದು ಎನ್ನುವ ಕಾರಣಕ್ಕೆ ನಾವು ಪ್ರತಿಭಟಿಸಲಿಲ್ಲ. ಇದೀಗ ನ್ಯಾಯಾಲಯ ನೀಡಿದ ತೀರ್ಪಿನಂತೆ ಹಾಲಿ ಸಮಿತಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ವಕೀಲ ಕೆ.ವಿ.ಪ್ರವೀಣ್ ಮಾತನಾಡಿ, ಹೊಸ ಬೈಲಾ ಪ್ರಕಾರ ಮುಂದಿನ ಸಮಿತಿ ನಡೆದುಕೊಳ್ಳಬೇಕು. ಜಿಲ್ಲಾ ನೋಂದಣಾಧಿಕಾರಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಮಿತಿಗೆ ಚುನಾವಣೆಯಲ್ಲಿ ಗೆದ್ದು ಬರಬೇಕು. ಸಾರ್ವಜನಿಕವಾಗಿ ಲೆಕ್ಕಪತ್ರ ಕೊಡುವುದು ಕಡ್ಡಾಯ. ಒಂದೊಮ್ಮೆ ಲೆಕ್ಕಪತ್ರ ವ್ಯತ್ಯಯವಾದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇರುತ್ತದೆ. ಸಮಿತಿಗೆ ಹೊಸ ಸದಸ್ಯರನ್ನು ಚುನಾವಣೆ ನಂತರ ಸೇರಿಸಿಕೊಳ್ಳಲು ಅವಕಾಶವಿದೆ. ಅ.11ರೊಳಗೆ ಹೊಸ ಸಮಿತಿ ಪಟ್ಟಿಯನ್ನು ನ್ಯಾಯಾಲಯಕ್ಕೆ ಕೊಡಬೇಕು ಎಂದರು.
ಕೆ.ಸಿದ್ದಪ್ಪ, ಪ್ರಶಾಂತ್, ಎಂ.ಗೋಪಾಲ, ಕೇಶವ ಕಾಮತ್, ನಾರಾಯಣಪ್ಪ ಇತರರಿದ್ದರು.