

ದೊಡ್ಡಬಳ್ಳಾಪುರ: ರಾಗಿ ಹೊಲದಲ್ಲಿ ತೊಗರಿ, ಅವರೆ, ಹಲಸಂದೆ ಬೆಳೆಗಳ ಸಾಲುಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಸಿ, ಅವುಗಳಿಗೆ ಗೊಬ್ಬರ ಹಾಕಿ ಪೋಷಣೆ ಮಾಡಿ ಬೆಳೆಸಿರುವುದನ್ನು ಪತ್ತೆ ಹಚ್ಚಿದ ಗ್ರಾಮಾಂತರ ಠಾಣಾ ಪೊಲೀಸರು, ಗಾಂಜಾ ಸಸಿಗಳನ್ನು ವಶಕ್ಕೆ ಪಡೆದು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗೆದ್ದಲಪಾಳ್ಯ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಬಿನ್ ಯಲ್ಲಪ್ಪ ಸದರಿ ಗ್ರಾಮದ ಸ.ನಂ 59ರ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಿಕೆ ಬಾಬಾ ಅವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಉಪ ವಿಭಾಗದ ಉಪಾಧೀಕ್ಷಕರು ಹಾಗೂ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿ ಸಾದಿಕ್ ಪಾಷಾ ಅವರ ನೇತೃತ್ವದಲ್ಲಿ ದಾಳಿ ನಡೆಸಿ, ಸುಮಾರು 92 ಸಾವಿರ ರೂ. ಮೌಲ್ಯದ 8 ಕೆಜಿ 700 ಗ್ರಾಂ ತೂಕದ ಒಟ್ಟು 568 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ್, ಫೈರೋಜ್ ಮುತ್ತುರಾಜು ಹರೀಶ್ ಮುಂತಾದವರು ಪಾಲ್ಗೊಂಡಿದ್ದರು.