ಬಾಯಿರುಚಿ ಇಲ್ಲದಂತಾಗಲು ಹಲವು ಕಾರಣಗಳು!

Bad Taste
Published on
ಧನ್ವಂತರಿ
ಮಾನವನ ಜೀವನವೇ ಹಾಗೆ. ಹಲವರಿಗೆ ಸಮಯಕ್ಕೆ ಸರಿಯಾಗಿ ಮೂರೂ ಹೊತ್ತು ಉತ್ತಮ ಆಹಾರ ಸೇವಿಸುವ ಯೋಗವಿರುವುದಿಲ್ಲ. ಹಣಕಾಸಿನ ಅಡಚಣೆ, ಮಾನಸಿಕ ಒತ್ತಡ, ಆಹಾರ ಸಿದ್ಧಗೊಳಿಸಲು ಸಮಯದ ಅಭಾವ, ಆಹಾರ ತಯಾರಿಕೆ ವ್ಯವಸ್ಥೆ ಇಲ್ಲದಿರುವುದು... ಹೀಗೆ ಅನೇಕ ಕಾರಣಗಳಿಂದಾಗಿ ಕಾಲಕಾಲಕ್ಕೆ ಸರಿಯಾದ ಭೋಜನ ಸಿಗದೆ ಪರಿತಪಿಸುವವರು ಇರುತ್ತಾರೆ. ಇವರಲ್ಲಿ ಕಡುಬಡತನದಿಂದ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಲೇಬೇಕಾದ ದಯನೀಯ ಪರಿಸ್ಥಿತಿಯನ್ನು ಒಂದೆಡೆ ಜಗತ್ತಿನಾದ್ಯಂತ ಕಾಣುತ್ತೇವೆ. ಎಲ್ಲವೂ ಸಮೃದ್ಧವಾಗಿದ್ದರೂ ಬಾಯಿರುಚಿ ಕೆಟ್ಟು ಶುಚಿ ರುಚಿಯಾದ ಆಹಾರ ಎದುರಿಗಿದ್ದರೂ ಅದನ್ನು ತಿನ್ನಲಾಗದೆ ಚಡಪಡಿಸುವ ಪರಿಸ್ಥಿತಿಯನ್ನು ಇನ್ನೊಂದೆಡೆ ನೋಡುತ್ತೇವೆ. ಇವೆಲ್ಲ ಬದುಕಿನ ಕಟು ವಾಸ್ತವ ಸಂಗತಿಗಳು.

ಹೀಗೆ ಬಾಯಿರುಚಿ ಇಲ್ಲದಿರುವ ಅನಾರೋಗ್ಯದ ಸ್ಥಿತಿಗೆ ಅರೋಚಕ ಎನ್ನುತ್ತೇವೆ. ಆಹಾರ ಸೇವಿಸುವ ಇಚ್ಛೆ ಇಲ್ಲದಿರುವುದು, ಬಾಯಿಗೆ ಆಹಾರವು ರುಚಿಸದಿರುವುದು, ಆಹಾರವೇ ಬೇಡವೆನಿಸುವುದು ಇದರ ಪ್ರಮುಖ ಲಕ್ಷಣ. ಜೀರ್ಣಕ್ರಿಯೆಯ ಅಂಗಾಂಗಗಳನ್ನು ಒಳಗೊಂಡ ಅನ್ನವಹ ಸ್ರೋತಸ್ ಹಾಗೂ ರಸವಹ ಸ್ರೋತಸ್​ಗಳು ಇದರಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಣ, ಉದಾನ, ಸಮಾನ ವಾತಗಳು, ಜಠರದಲ್ಲಿರುವ ಪಾಚಕಪಿತ್ತ, ನಾಲಿಗೆಯಲ್ಲಿರುವ ಬೋಧಕ ಕಫಗಳ ಕಾರ್ಯಕ್ಷಮತೆಯಲ್ಲಿ ಉಂಟಾಗುವ ವ್ಯತ್ಯಯಗಳಿಂದಾಗಿ ಬಾಯಿ

ಯಲ್ಲಿ ರುಚಿ ಇಲ್ಲದಾಗುತ್ತದೆ. ಆಹಾರ ಸೇವನೆಗೆ ಸಂಬಂಧಿಸಿ ಮೂರು ಅಂಶ

ಗಳಿಗೆ ಮಹತ್ವವಿದೆ. ಹಸಿವು ಇರಬೇಕಾ ದುದು ಮೊದಲನೆಯದು. ಇದನ್ನು ಉಂಟು ಮಾಡುವುದಕ್ಕೆ ದೀಪನ ಎಂದು ಹೆಸರು. ತಿಂದಿರುವ ಆಹಾರ ಜೀರ್ಣಮಾಡುವುದಕ್ಕೆ ಪಾಚನ ಎನ್ನುತ್ತೇವೆ. ಬರೀ ದೀಪನ ಪಾಚನ ಪ್ರಾಕೃತವಾಗಿದ್ದರೆ ಸಾಲದು, ಬಾಯಿರುಚಿಯೂ ಸರಿಯಾಗಿರಲೇಬೇಕು. ಹಾಗಿದ್ದರೆ ಮಾತ್ರ ಆಹಾರ ಸೇವನೆಯು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಗೆ ಹಸಿವು ಚೆನ್ನಾಗಿ ಇದ್ದತಕ್ಷಣ ಜೀರ್ಣಶಕ್ತಿ ಸರಿಯಿರಬೇಕೆಂದಿಲ್ಲ! ಹಸಿವು, ಜೀರ್ಣಶಕ್ತಿ ಎರಡೂ ಸರಿಯಾಗಿದ್ದಾಗಲೂ ಬಾಯಿರುಚಿ ಚೆನ್ನಾಗಿರಬೇಕೆಂದಿಲ್ಲ! ಈ ಅರೋಚಕವನ್ನು ಬಾಯಿಯಲ್ಲಾಗುವ ಆಸ್ಯರೋಗಗಳ ಗುಂಪಿನಲ್ಲಿ ಸೇರಿಸಲಾಗಿದೆ. ಬಾಯಿರುಚಿ ಸರಿಯಾಗಿಲ್ಲದಿರಲು ಐದು ವಿಚಾರಗಳನ್ನು ತಿಳಿದಿರಬೇಕು.

  1. ಅರೋಚಕ: ಹಸಿವು ಆಗುತ್ತಿದ್ದರೂ ರುಚಿಗ್ರಹಣ ಸಾಧ್ಯವಾಗದೇ ಇರುವುದರಿಂದ ಆಹಾರ ಸೇವಿಸಬೇಕು ಎಂದೆನಿಸುವುದಿಲ್ಲ.
  2. ಅಸ್ವಾದುತ್ವ: ಜಠರದಲ್ಲಿ ಆಹಾರವು ಸರಿಯಾಗಿ ಜೀರ್ಣಗೊಳ್ಳದೆ ಇರುವುದರಿಂದ ಅಥವಾ ಅಗ್ನಿಶಕ್ತಿಯು ಕಡಿಮೆಯಾಗಿ ಹಸಿವೇ ಆಗದಿರುವುದು.
  3. ಅನ್ನದ್ವೇಷ: ಇದು ಆಹಾರ ಸ್ವೀಕರಿಸುವುದೇ ಬೇಡವೆಂಬ ಪ್ರಬಲವಾದ ಅನಿಸಿಕೆ. ಇದೊಂದು ಮಾನಸಿಕ ಸ್ಥಿತಿ. ಆಹಾರದ ಬಗ್ಗೆ ಏನಾದರೂ ಮಾತು ಕಿವಿಗೆ ಕೇಳಿಸಿದರೆ, ಊಟವನ್ನು ಮನಸ್ಸಿನಲ್ಲಿ ನೆನಪಿಸಿಕೊಂಡರೆ, ಆಹಾರವನ್ನು ನೋಡಿದರೆ, ಭೋಜನದ ಪರಿಮಳ ಬಂದರೆ ಅದು ಬೇಡವೇ ಬೇಡ ಎಂಬ ಭಾವನೆ ಉಂಟಾಗುವುದಕ್ಕೆ ಅನ್ನದ್ವೇಷ ಅಥವಾ ಭಕ್ತದ್ವೇಷ ಎನ್ನಲಾಗುತ್ತದೆ. ಹೆಸರಿನಂತೆಯೇ ಆಹಾರ ಸ್ವೀಕಾರದ ಬಗ್ಗೆಯೇ ಇಚ್ಛೆಯ ಬದಲು ದ್ವೇಷವಿರುತ್ತದೆ. ಬಾಯಿಯಲ್ಲಿ ಆ ಆಹಾರದ್ದಲ್ಲದ ಬೇರೇಯೇ ರುಚಿ ಅಥವಾ ಕೆಟ್ಟರುಚಿಯ ಅನುಭವವು ಬಾಯಿಯಲ್ಲಿ ಆಹಾರ ಇಲ್ಲದೆ ಇದ್ದಾಗಲೂ ಮನಸ್ಸಿಗೆ ಆಗುತ್ತದೆ. ಇದಕ್ಕೆ ಆಸ್ಯವೈರಸ್ಯ ಎಂತಲೂ ಹೇಳುತ್ತೇವೆ. ಪ್ರಾಣವಾತ ಹಾಗೂ ಬೋಧಕ ಕಫಗಳಿಂದಾಗಿ ಆಹಾರದ ರುಚಿ ಗೊತ್ತಾಗದಿದ್ದರೆ ಅದಕ್ಕೆ ಅರಸಂತ ಎನ್ನುತ್ತೇವೆ. ಇವೆರಡು ಕಾರಣಗಳಿಂದಲೂ ಅನ್ನದ್ವೇಷ ಉಂಟಾಗಬಹುದು.
  4. ಕ್ಷುತ್​ನಾಶ: ಜಠರದಲ್ಲಿ ಜೀರ್ಣಪ್ರಕ್ರಿಯೆ ಸರಿಯಿಲ್ಲದಿದ್ದಾಗ ಹಸಿವೇ ಆಗುವುದಿಲ್ಲ. ಇದಕ್ಕೆ ಅನ್ನ ಅನಭಿನಂದನಂ ಎಂಬ ಹೆಸರೂ ಇದೆ. ಧಾತುಗಳು ಕ್ಷಯವಾಗುವ ರೋಗಗಳಿದ್ದಾಗ, ಅರ್ಬುದ ರೋಗ, ಬಹಳ ದಿನಗಳಿಂದ ಜ್ವರ, ಕ್ಷಯರೋಗ ಮೊದಲಾದ ವ್ಯಾಧಿಗಳಿದ್ದಾಗ ವಾತಪ್ರಕೋಪವುಂಟಾಗಿ ಅಗ್ನಿಮಂದತೆಯಿಂದ ಆಹಾರದ ರುಚಿ ತಿಳಿಯುವ ಸಾಮರ್ಥ್ಯ ಕುಂಠಿತವಾಗುತ್ತದೆ, ಹಸಿವೂ ಇಲ್ಲದಾಗುತ್ತದೆ. ಇದರಿಂದಾಗಿ ಆಹಾರ ಬೇಕೆಂಬ ಅಪೇಕ್ಷೆಯೇ ಇಲ್ಲದಾಗುತ್ತದೆ. 5. ಪ್ರತ್ಯಾಧ್ಮಾನ: ಕರುಳಿನಲ್ಲಿ ಮಲಪ್ರವೃತ್ತಿಯ ಪ್ರಕ್ರಿಯೆ ಸಮ್ಯಕ್ ರೀತಿಯಲ್ಲಿ ನಡೆಯದೆ ಇದ್ದಾಗ, ಅಲ್ಲಿ ವಾಯು ತುಂಬಿಕೊಂಡು ಹೊಟ್ಟೆಉಬ್ಬರ ಉಂಟಾಗುತ್ತದೆ. ಇದು ಕೂಡ ಬಾಯಿರುಚಿ ಹೋಗುವಂತೆ ಮಾಡುತ್ತದೆ.

ವಾತ, ಪಿತ್ತ, ಕಫದೋಷಗಳ ವೈಪರೀತ್ಯದಿಂದಾಗಿ ಹಲವು ಕಾಯಿಲೆಗಳ ಸಂದರ್ಭದಲ್ಲಿ ಅರುಚಿ ಉಂಟಾಗುವುದು ಸಾಮಾನ್ಯ. ಬೇಸರ, ಭಯ, ಅತಿಆಸೆ, ಅತಿಕೋಪ, ಹಿತವಲ್ಲದ, ದುರ್ವಾಸನೆಯಿಂದ ಕೂಡಿದ, ಕಾಣಲು ಅಸಹ್ಯಕರ ಆಹಾರವೂ ಬಾಯಿರುಚಿ ಇಲ್ಲದಾಗಲು ಕಾರಣವಾಗುತ್ತದೆ. ಅಗ್ನಿಮಾಂದ್ಯ, ಅಜೀರ್ಣ, ಆಮ್ಲಪಿತ್ತ, ಹೊಟ್ಟೆಯಲ್ಲಿನ ಜಂತುಹುಳ,

ರಕ್ತಹೀನತೆ, ಕಾಮಾಲೆರೋಗ, ದೀರ್ಘಕಾಲದಿಂದ ಇರುವ ಕಾಯಿಲೆಗಳು, ಕ್ಷಯರೋಗ, ಅರ್ಬುದ, ತೀವ್ರಗಾಯಗಳು, ವಿರುದ್ಧಾಹಾರ ಸೇವನೆ, ವಿಷಸೇವನೆ, ಶರೀರಕ್ಕೆ ಸೂಕ್ತವಲ್ಲದ ಆಹಾರ ಸೇವನೆಗಳೆಲ್ಲವೂ ಬಾಯಿರುಚಿ ಕೆಡುವಂತೆ ಮಾಡುತ್ತವೆ. ಇವುಗಳಿಗೆ ಪರಿಹಾರವನ್ನು ತಿಳಿದುಕೊಂಡಾಗ ಆಹಾರ ಸೇವನೆ ಸುಗಮವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net