

ಬೆಂಗಳೂರು: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿರುವ 'ಮ್ಯಾನೋರ್ ಫಾರ್ಮ್ ಮತ್ತು ನೇಸರ ಆರ್ಗ್ಯಾನಿಕ್ಸ್ ಪರಿವಾರ' ಎಂಬ ಸಿಹಿ ತಿನಿಸು ತಯಾರಿಕಾ ಸಂಸ್ಥೆ ಇದೀಗ ಹೊಸ ನಿರ್ಧಾರ ಕೈಗೊಂಡಿದೆ. ಇತ್ತೀಚಿಗಿನ ಭಾರತ-ಪಾಕ್ ಸಂಘರ್ಷದ ಬೆನ್ನಲ್ಲೇ ತಮ್ಮ ಸಿಹಿ ಖಾದ್ಯ 'ಮಾಲವಿ ಪಾಕ್' ಹೆಸರಿನಿಂದ ಪಾಕ್ ಅನ್ನು ತೆಗೆದುಹಾಕಿದೆ. ಈ ಮೂಲಕ ತಮ್ಮ ದೇಶಪ್ರೇಮವನ್ನು ತೋರಿರುವ ಸಂಸ್ಥೆ, ಗ್ರಾಹಕರ ನಾಲಿಗೆ ಮಾತ್ರವಲ್ಲದೇ ಹೃದಯವನ್ನೂ ಗೆದ್ದಿದೆ.
"ಬದಲಾವಣೆ ಜಗದ ನಿಯಮ. ಈ ಜಾಗತಿಕ ನಿಯಮವನ್ನು 'ಮ್ಯಾನೋರ್ ಫಾರ್ಮ್ ಮತ್ತು ನೇಸರ ಆರ್ಗ್ಯಾನಿಕ್ಸ್' ಪರಿವಾರ ಪರಿಪೂರ್ಣವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯದು. ನಾವು ತಯಾರಿಸುತ್ತಿದ್ದ ಮಾಲವಿ ಪಾಕ್ ಎನ್ನುವ ರುಚಿಕರ ಸಿಹಿ ತಿನಿಸಿನ ಹೆಸರನ್ನು ಬದಲಾಯಿಸುವ ಮೂಲಕ ಹೊಸತನ ಮತ್ತು ವೈಶಿಷ್ಟ್ಯದ ನಾಮಕರಣ ಮಾಡೋಣವೆಂದು ಇಂದಿನ (18 ಮೇ, 2025) ಬ್ರಾಹ್ಮೀ ಮುಹೂರ್ತದಲ್ಲಿ ತೀರ್ಮಾನಿಸಲಾಯಿತು" ಎಂದು ಸಂಸ್ಥೆ ಹೇಳಿದೆ
ಅಂತೆಯೇ ಎಲ್ಲಾ ಮಗ್ಗುಲಗಳಲ್ಲಿ ಆಳ ಚಿಂತನೆಗಳನ್ನು ಮಾಡಿ ಮಾಲವಿ ಕ್ಯೂಬ್ಸ್ ಎಂದು ಮರು ನಾಮಕರಣ ಮಾಡಲಾಗಿದ್ದು, ಈ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದೇವೆ. ಹೆಸರಿನ ಜೊತೆ ಜೊತೆ ರೂಪದಲ್ಲೂ ಬದಲಾವಣೆ ತರುತ್ತಿದ್ದೇವೆ ಎಂದು ಮ್ಯಾನೋರ್ ಫಾರ್ಮ್ ಮತ್ತು ನೇಸರ ಆರ್ಗ್ಯಾನಿಕ್ಸ್ ಪರಿವಾರ ತಿಳಿಸಿದೆ.
ಇನ್ಮುಂದೆ ತಮ್ಮ ಯಾವುದೇ ಉತ್ಪನ್ನಗಳಲ್ಲಿ ಪಾಕ್ ಎನ್ನುವ ಹೆಸರು ಇರುವುದಿಲ್ಲ ಎಂದು ಈ ಮೂಲಕ ಗ್ರಾಹಕರ ಗಮನಕ್ಕೆ ತರಲು ಸಂತಸವಾಗುತ್ತಿದೆ. ಹೊಸತನದ ನಾಮಕರಣ ಮಾಡುವಲ್ಲಿ ವಿಸ್ತೃತವಾದ ಮಾರುಕಟ್ಟೆಯಲ್ಲಿ ನಾವೇ ಮೊದಲಿಗರು. ಇಂತಹ ಹಲವುಗಳಿಗೆ ನಿಮ್ಮೆಲ್ಲರ ಆಶೀರ್ವಾದ, ಹಾರೈಕೆಗಳಿರಲಿ ಎಂದು ಮ್ಯಾನೋರ್ ಫಾರ್ಮ್ ಮತ್ತು ನೇಸರ ಆರ್ಗ್ಯಾನಿಕ್ಸ್ ಪರಿವಾರ ತಿಳಿಸಿದೆ.